ದರ್ಶನ್ ಟ್ವೀಟ್ ಬೆನ್ನಲ್ಲೇ ನಟ ಸುದೀಪ್ ಕೂಡ ಟ್ವೀಟರ್‌ನಲ್ಲಿ ಈ ಘಟನೆಗಳ ಬಗ್ಗೆ ಸುದೀರ್ಘವಾದ ಪತ್ರವನ್ನು ಬರೆದುಕೊಂಡಿದ್ದಾರೆ. “ಯಾವಾಗಲು ಸತ್ಯ ಮೇಲುಗೈ ಸಾಧಿಸುತ್ತದೆ. ಪೈರಸಿ ವಿಚಾರದಲ್ಲಿ ನಾನಾಗಲಿ ಅಥವಾ ನಮ್ಮ ಚಿತ್ರತಂಡವಾಗಲಿ, ಯಾರೊಬ್ಬ ನಟನ ಮೇಲು ಬೊಟ್ಟು ಮಾಡಿಲ್ಲ. ಆದ್ರೆ ಅನೇಕರು ಪೈರಸಿ ಲಿಂಕ್ ಅನ್ನು ತುಂಬಾ ವೇಗವಾಗಿ ಶೇರ್ ಮಾಡಿದ್ದಾರೆ. ಇವೆಲ್ಲದರ ಬಗ್ಗೆ ಈಗಾಗಲೇ ಸೈಬರ್ ಕ್ರೈಮ್‌ಗೆ ದೂರು ನೀಡಲಾಗಿದೆ. ಮುಂದಿನದನ್ನ ಅವರು ನೋಡಿಕೊಳ್ಳುತ್ತಾರೆ.
ಈ ಸಮಯದಲ್ಲಿ ನಾನು ಯಾರೊಬ್ಬ ನಿರ್ದಿಷ್ಟ ನಟನ ಬಗ್ಗೆಯಾಗಲಿ ಅಥವಾ ನನ್ನ ಬಗ್ಗೆಯೇ ಆಗಲಿ ಮಾತನಾಡಲಾರೆ. ಹಾಗೆ ಮಾಡುವುದಾದರೆ ನನಗೆ ನನ್ನದೇ ಕಾರಣಗಳಿವೆ. ಆದರೆ ಅದ್ಯಾವುದು ಅಗತ್ಯವಿಲ್ಲ ಎನ್ನುವುದನ್ನು ನಾನು ಅರ್ಥೈಸಿಕೊಂಡಿದ್ದೇನೆ. ನನ್ನ ಜೀವನದಲ್ಲಿ ಕೆಲವೇ ವ್ಯಕ್ತಿಗಳ ಜತೆ ವಾದಕ್ಕೆ ಇಳಿಯುತ್ತೇನೆ. ನಮ್ಮೆಲ್ಲರಿಗೂ ನಮ್ಮದೇ ಆದ ಹಂತಗಳಿರುತ್ತವೆ. ಯಾವ ವ್ಯಕ್ತಿ ಇದನ್ನು ಅರ್ಥ ಮಾಡಿಕೊಂಡು ಉತ್ತಮ ಮನುಷ್ಯನಾಗಲು ಬಯಸುತ್ತಾನೋ, ಅವನು ಜಗತ್ತಿನಲ್ಲಿ ಜನರನ್ನು ಗೆಲ್ಲುತ್ತಾನೆ.
ಒಂದು ವೇಳೆ ಸಂದರ್ಭ ಬಂದರೆ, ನನಗೆ ಯಾರೊಬ್ಬರಿಗೂ ಕ್ಷಮೆ ಕೇಳಲು, ಅಥವಾ ಕ್ಷಮೆ ಸ್ವೀಕರಿಸಲು ಮುಜುಗರವಿಲ್ಲ. ಎರಡನ್ನೂ ಮುಕ್ತವಾಗಿ ಮತ್ತು ಸಾರ್ವಜನಿಕವಾಗಿ ಖುಷಿಯಿಂದ ಮಾಡುತ್ತೇನೆ. ಕೆಲವು ಮಾತುಗಳನ್ನು ಕೇಳಿಸಿಕೊಳ್ಳದಿರುವುದೇ ಉತ್ತಮ, ನಾನು ಏನು ಎನ್ನುವುದನ್ನು ಬೇರೆ ಯಾರಿಗೊ ಸಾಬೀತು ಮಾಡಿ ತೋರಿಸುವ ಅವಶ್ಯಕತೆ ಇಲ್ಲ’ ಎಂದು ಹೇಳಿದ್ದಾರೆ.
ಬೆದರಿಕೆಗೆ ಜಗ್ಗಲ್ಲ ಪೈಲ್ವಾನ್: ಈ ನಡುವೆಯೇ “ಪೈಲ್ವಾನ್’ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಮಾಡಿರುವ ಟ್ವೀಟ್ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ದರ್ಶನ್ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸ್ವಪ್ನ ಕೃಷ್ಣ ಕೂಡಾ ಟ್ವೀಟ್ ಮಾಡಿದ್ದು, ಎಲ್ಲ ಅಭಿಮಾನಿಗಳಿಗೆ ಸಿಹಿ ಸುದ್ದಿ…. ಬೆದರಿಕೆಗೆ ಜಗ್ಗೊನಲ್ಲ ನಮ್ಮ ಪೈಲ್ವಾನ .. ಪೈಲ್ವಾನ್‌ನ ಕಾಲ್ ಎಳಿಯೋಕೆ ಬಂದವರ ಸ್ಥಾನ ಕಾಲ್ ಕೆಳಗೆನೇ..’ ಎಂದು ಟ್ವೀಟ್ ಮಾಡಿದ್ದಾರೆ.