Advertisement

ವ್ಯಾಘ್ರನ ರಕ್ಷಣೆಗಿಲ್ಲ ಉಗ್ರ ಕ್ರಮ

08:00 AM Jul 29, 2019 | Suhan S |

ಬೆಂಗಳೂರು: ಇಂದು ವಿಶ್ವ ಹುಲಿ ದಿನ. ಒಂದೆಡೆ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಗಣತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೆ, ಮತ್ತೂಂದೆಡೆ ಹುಲಿಗಳ ಸಾವಿನ ಸಂಖ್ಯೆಯೂ ನಿರಂತರವಾಗಿ ಹೆಚ್ಚಳವಾಗುತ್ತಿದೆ.

Advertisement

ಪ್ರಸ್ತಕ ವರ್ಷದಲ್ಲಿ ಏಳು ತಿಂಗಳಲ್ಲಿಯೇ 10 ಹುಲಿಗಳು ಸಾವಿಗೀಡಾಗಿವೆ. ಕಳೆದ ವರ್ಷ 13 ಹುಲಿಗಳು ಹಾಗೂ ಕಳೆದ 7 ವರ್ಷಗಳಲ್ಲಿ 109 ಹುಲಿಗಳು ಸಾವಿಗೀಡಾಗಿದ್ದವು. ಇದಕ್ಕೆ ಕಾರಣ ಹುಲಿ ಸಂರಕ್ಷಣೆಗೆ ಕೇಂದ್ರ ಸರ್ಕಾರ ಯಾವುದೇ ಕಾರ್ಯಕ್ರಮ ಜಾರಿ ಮಾಡಿದರೂ ಅದನ್ನು ಯಶಸ್ವಿಯಾಗಿ ಜಾರಿಗೊಳಿಸದಿರುವುದು ಎಂದು ಅರಣ್ಯ ಇಲಾಖೆ ವಿರುದ್ಧ ಆರೋಪ ಕೇಳಿಬಂದಿದೆ. ಇವುಗಳ ಜತೆಗೆ ಸಂರಕ್ಷಿತ ಪ್ರದೇಶದ ಕೊರತೆ ಹಾಗೂ ಮಾನವ ಪ್ರಾಣಿ ಸಂಘರ್ಷ ಹೆಚ್ಚಳ ಎಂದು ಹೇಳಲಾಗುತ್ತಿದೆ.

2014ರ ಎನ್‌ಟಿಸಿಎ ಗಣತಿಯ ಪ್ರಕಾರ ರಾಜ್ಯದಲ್ಲಿ 406 ಹುಲಿಗಳಿವೆ. ಈ ಬಾರಿ ಗಣತಿ ಮುಕ್ತಾಯ ಗೊಂಡಿದ್ದು, ಸೋಮವಾರ ವರದಿ ಬಿಡುಗಡೆಯಾಗಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 500ಕ್ಕೂ ಹೆಚ್ಚು ಹುಲಿಗಳಿವೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹುಲಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ, ಅದಕ್ಕೆ ಪೂರಕವಾಗಿ ಅದರ ವಾಸದ ಪ್ರದೇಶ ಮಾತ್ರ ಹೆಚ್ಚುತ್ತಿಲ್ಲ. ವಾಸ ಸ್ಥಾನ ಕೊರತೆಯಿಂದ ಹುಲಿಗಳ ನಡುವೆ ಸಂಗಾತಿಗಳಿಗಾಗಿ ಕಾದಾಟ, ಜಾಗಕ್ಕಾಗಿ ಕಾದಾಟ ನಡೆಯುವುದು ಸಾಮಾನ್ಯವಾಗಿದೆ. ಎನ್‌ಟಿಸಿಎ ವರದಿ ಪ್ರಕಾರ ಕರ್ನಾಟಕ ಹುಲಿಗಳ ಸಾವಿನ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಮೊದಲನೇ ಸ್ಥಾನದಲ್ಲಿ ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ.

 

Advertisement

ಹುಲಿ ದಿನದ ವಿಶೇಷವೇನು?:

ಹುಲಿ ಸಂರಕ್ಷಣೆ ಮತ್ತು ಹುಲಿಗಳ ಬಗೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಷ್ಯಾದ ಸೆಂಟ್ಪೀಟರ್‌ ಬರ್ಗ್‌ನಲ್ಲಿ 2010 ರ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು ಮೊದಲ ಬಾರಿ ಆಚರಿಸಲಾಯಿತು. ಅಂತೆಯೇ ವಿಶ್ವದೆಲ್ಲೆಡೆ ಈ ಪರಿಪಾಠ ಮುಂದುವರೆಯಿತು. ಹುಲಿ ದಿನದಂದು ಎಲ್ಲೆಡೆ ಸಂರಕ್ಷಣೆ ಕುರಿತು ಚರ್ಚೆ, ಉಪನ್ಯಾಸ, ಜಾಥಾ, ವಿಚಾರ ಸಂಕಿರಣ ಹಾಗೂ ಛಾಯಾಚಿತ್ರ ಪ್ರದರ್ಶನ ನಡೆಯುತ್ತವೆ.
● ಜಯಪ್ರಕಾಶ್‌ ಬಿರಾದಾರ್‌
Advertisement

Udayavani is now on Telegram. Click here to join our channel and stay updated with the latest news.

Next