ಚೆನ್ನೈ : ವಿಧಿಯ ಲೀಲೆಯಿಂದ ತಮಿಳು ನಾಡಿನ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾಗಿ ಜೈಲು ಪಾಲಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ಅವರಿಗೆ ಜೈಲಿನಲ್ಲಿ ಟಿವಿ ಹೊರತುಪಡಿಸಿ ಬೇರೆ ಯಾವುದೇ ಸೌಕರ್ಯವನ್ನು ಒದಗಿಸಲಾಗಿಲ್ಲ ಎಂದು ಬೆಂಗಳೂರಿನಲ್ಲಿರುವ ಕೇಂದ್ರ ಬಂಧೀಖಾನೆ ಪರಪ್ಪನ ಅಗ್ರಹಾರದ ಡಿಐಜಿ ಅವರು ಚೆನ್ನೈನ ವಕೀಲರೊಬ್ಬರು ಮಾಹಿತಿ ಹಕ್ಕು ಕಾಯಿದೆಯಡಿ ಕೇಳಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ.
ಶಶಿಕಲಾ ಅವರನ್ನು ಚೆನ್ನೈ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆಯೂ ಇಲ್ಲವೆಂದು ಅವರು ತಿಳಿಸಿದ್ದಾರೆ.
ಜೈಲಿನಲ್ಲಿ ಶಶಿಕಲಾ ಅವರಿಗೆ ಪ್ರತ್ಯೇಕ ಬಾತ್ ರೂಮ್ ಅಥವಾ ವಾಟರ್ ಹೀಟರ್, ಏರ್ ಕಂಡೀಶನರ್, ಕಾಟ್, ಮ್ಯಾಟ್ರೆಸ್ ಮುಂತಾಗಿ ಯಾವುದೇ ಸೌಕರ್ಯವನ್ನು ಒದಗಿಸಲಾಗಿಲ್ಲ ಎಂದವರು ಹೇಳಿದ್ದಾರೆ.
ಶಶಿಕಲಾ ಮತ್ತು ಆಕೆಯ ಇಬ್ಬರು ಸಂಬಂಧಿಗಳು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಅಕ್ರಮ ಸಂಪತ್ತು ಗಳಿಕೆ ಕೇಸಿಗೆ ಸಂಬಂಧಪಟ್ಟು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕಾರಾಗೃಹ ವಾಸದ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಎಂ ಪಿ ರಾಜವೇಲಾಯುಧಂ ಅವರು ಕಳೆದ ಫೆ.20ರಂದು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರವಾಗಿ ಡಿಐಜಿ ಅವರು, “ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿಯಾಗಿರುವ ತನ್ನ ಸೋದರ ಸಂಬಂಧಿ ಟಿ ಟಿ ವಿ ದಿನಕರನ್ ಅವರನ್ನು 35ರಿಂದ 40 ನಿಮಿಷಗಳ ಕಾಲ ಭೇಟಿಯಾಗುವುದಕ್ಕೆ ಶಶಿಕಲಾ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು’ ಎಂಬುದನ್ನು ದೃಢಪಡಿಸಿದ್ದಾರೆ.