Advertisement

ದುರುಪಯೋಗ ಸಲ್ಲದು: ವೈವಾಹಿಕ ಅತ್ಯಾಚಾರ

11:58 AM Aug 31, 2017 | |

ಲೈಂಗಿಕ ಕ್ರಿಯೆ ಮದುವೆಯ ಒಂದು ಮುಖ್ಯ ಮತ್ತು ಅವಿಭಾಜ್ಯ ಅಂಗವಾಗಿರುವುದರಿಂದ ಅದನ್ನು ಅಪರಾಧ ಎಂದು ಹೇಳಿದರೆ ಅನೇಕ ಸಮಸ್ಯೆಗಳು ಎದು ರಾಗಬಹುದು. ಇದನ್ನು ಕೋರ್ಟ್‌ನಲ್ಲಿ ಸಾಬೀತು ಮಾಡುವುದು ಕಷ್ಟ.

Advertisement

ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುವುದು ಅಸಾಧ್ಯ ಎಂಬುದಾಗಿ ಕೇಂದ್ರ ಸರಕಾರ ದಿಲ್ಲಿ ಹೈಕೋರ್ಟಿಗೆ ಸಲ್ಲಿಸಿದ ಅಫಿಡವಿತ್‌ನಲ್ಲಿ ತಿಳಿಸುವುದರೊಂದಿಗೆ ಕಳೆದ ಅನೇಕ ವರ್ಷಗಳಿಂದ ಈ ಕುರಿತಾಗಿ ನಡೆಯುತ್ತಿದ್ದ ಚರ್ಚೆಗೆ ಮರು ಜೀವ ಸಿಕ್ಕಿದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಿದರೆ ಅದು ವಿವಾಹದ ಪಾವಿತ್ರ್ಯವನ್ನೇ ಅಸ್ಥಿರಗೊಳಿಸಬಹುದು. ಈ ವಿಚಾರದಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಕುರುಡಾಗಿ ಅನುಸರಿಸಲಾಗದು ಎನ್ನುವುದು ಕೇಂದ್ರ ಸರಕಾರದ ವಾದ. ಒಂದು ವೇಳೆ ಅತ್ಯಾಚಾರವೆಂದು ಪರಿಗಣಿಸುವ ಕಾನೂನು ರಚನೆಯಾದರೆ ಅದನ್ನು ಮಹಿಳೆಯರು ಪುರುಷರಿಗೆ ಕಿರುಕುಳ ನೀಡಲು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ಹೇಳಿದೆ. ಈ ವಾದದಲ್ಲಿ ಹುರುಳಿದೆ. ಈಗಾಗಲೇ ವರದಕ್ಷಿಣೆ ಕಾಯಿದೆಯನ್ನು ಯಾವ ರೀತಿ ಪತಿ ಹಾಗೂ ಅವರ ಮನೆಯವರಿಗೆ ಕಿರುಕುಳ ನೀಡಲು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎನ್ನುವುದನ್ನು ನೋಡಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಗಂಡ ಹೆಂಡತಿ ನಡುವೆ ಮುಚ್ಚಿದ ಕೋಣೆಯೊಳಗೆ ನಡೆಯುವ ಖಾಸಗಿ ಕ್ರಿಯೆಯನ್ನು ಅತ್ಯಾಚಾರ ಎಂದು ಕರೆದರೆ ಮದುವೆ ಮತ್ತು ಕೌಟುಂಬಿಕ ವ್ಯವಸ್ಥೆಯನ್ನೇ ನಿರರ್ಥಕಗೊಳಿಸಿದಂತೆ. ಆಧುನಿಕರು ಎಂದು ಕರೆಸಿಕೊಳ್ಳುವ ಕೆಲ ಮಂದಿಯನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲರೂ ಈಗಲೂ ಈ ಕುಟುಂಬ ವ್ಯವಸ್ಥೆಯನ್ನೇ ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಲೈಂಗಿಕ ಕ್ರಿಯೆ ಮದುವೆಯ ಒಂದು ಮುಖ್ಯ ಮತ್ತು ಅವಿಭಾಜ್ಯ ಅಂಗವಾಗಿರುವುದರಿಂದ ಅದನ್ನು ಅಪರಾಧ ಎಂದು ಹೇಳಿದರೆ ಅನೇಕ ಸಮಸ್ಯೆಗಳು ಎದುರಾಗಬಹುದು. ಇಷ್ಟಕ್ಕೂ ನಾಲ್ಕು ಗೋಡೆಗಳ ನಡುವೆ ನಡೆದ ಕ್ರಿಯೆಯನ್ನು ಕೋರ್ಟಿನಲ್ಲಿ ಸಾಬೀತುಪಡಿಸುವುದಾದರೂ ಹೇಗೆ ಎಂಬ ಪ್ರಶ್ನೆಯೂ ಇದೆ. 

ಪ್ರಸ್ತುತ ನಮ್ಮ ಕಾನೂನಿನಲ್ಲಿಯೇ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ವಿರೋಧಾಭಾಸವಿದೆ. ಭಾರತೀಯ ದಂಡ ಸಂಹಿತೆಯಲ್ಲಿ ಅತ್ಯಾಚಾರಕ್ಕೆ ಸಂಬಂಧಪಟ್ಟಿರುವ 375(2) ಕಲಂ ಪ್ರಕಾರ ಹೆಂಡತಿ ಜತೆಗೆ ಗಂಡ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ. ಹೆಂಡತಿ 15ರಿಂದ 17 ವಯಸ್ಸಿನವಳಾಗಿದ್ದರೂ ಅವಳ ಜತೆಗೆ ನಡೆಸುವ ಲೈಂಗಿಕ ಕ್ರಿಯೆ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಇದೇ ವೇಳೆ ಇನ್ನೊಂದು ಕಾನೂನು ಮಹಿಳೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೆ ಅವಳ ಒಪ್ಪಿಗೆ ಇದ್ದು ಅಥವಾ ಇಲ್ಲದೆ ನಡೆಸುವ ಎಲ್ಲ ರೀತಿಯ ಲೈಂಗಿಕ ಕ್ರಿಯೆ ಅಪರಾಧ ಎನ್ನುತ್ತದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಬೇಕೆಂದು ವಾದಿಸುವವರು ಇದಕ್ಕೆ ಭಾರತದ ಪಿತೃಪ್ರಧಾನ ಸಮಾಜ ವ್ಯವಸ್ಥೆಯನ್ನು ದೂರುತ್ತಾರೆ. ಮದುವೆಯ ಬಳಿಕ ಹೆಂಡತಿ ಗಂಡನ ಸೊತ್ತು ಎನ್ನುವ ಮನೋಭಾವ ಸಮಾಜದಲ್ಲಿದೆ. ಹೀಗಾಗಿ ಹೆಂಡತಿಯ ಒಪ್ಪಿಗೆ ಇಲ್ಲದೆಯೂ ಅವಳ ಜತೆಗೆ ಲೈಂಗಿಕ ಕ್ರಿಯೆ ನಡೆಸುವ ಅಧಿಕಾರವನ್ನು ಗಂಡ ಪಡೆದಿರುತ್ತಾನೆ. ಆದರೆ ಇದು 14, 15, 19 ಮತ್ತು 21ನೇ ಪರಿಚ್ಛೇದದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಇತ್ತೀಚೆಗಿನ ಸುಪ್ರೀಂ ಕೋರ್ಟ್‌ ನೀಡಿದ ಖಾಸಗಿತನದ ತೀರ್ಪಿನ ಪ್ರಕಾರವೂ ಹೆಂಡತಿಯ ಅನುಮತಿಯಿಲ್ಲದೆ ಅವಳ ದೇಹವನ್ನು ಬಳಸಿಕೊಳ್ಳುವುದು ಖಾಸಗಿತನದ ಉಲ್ಲಂಘನೆಯಾಗುತ್ತದೆ ಎನ್ನಲಾಗಿದೆ.

ದೇಶವನ್ನೇ ತಲ್ಲಣಗೊಳಿಸಿದ ದಿಲ್ಲಿಯ ಸಾಮೂಹಿಕ ಅತ್ಯಾಚಾರದ ಪ್ರಕರಣದ ಬಳಿಕ ನ್ಯಾ| ವರ್ಮ ನೇತ್ವತ್ವದ ಆಯೋಗ ವೈವಾಹಿಕ ಅತ್ಯಾಚಾರವನ್ನೂ ಅಪರಾಧವೆಂದು ಪರಿಗಣಿಸಬೇಕೆಂಬ ಶಿಫಾರಸು ಮಾಡಿದ ಅನಂತರ ಈ ವಾದ ತೀವ್ರಗೊಂಡಿದೆ. ಇಂಡಿಪೆಂಡೆಂಟ್‌ ಥಾಟ್‌ ಸೇರಿದಂತೆ ಹಲವು ಎನ್‌ಜಿಒಗಳು ಕೂಡ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲು ಹೋರಾಡುತ್ತಿವೆ. ವಿಶೇಷವೆಂದರೆ, ಸಚಿವೆ ಮೇನಕಾ ಗಾಂಧಿ ಮೊದಲು ಇದೇ ನಿಲುವು ಇಟ್ಟುಕೊಂಡಿದ್ದರು, ಆದರೆ ಸಚಿವೆಯಾದ ಮೇಲೆ ನಿಲುವಿನಲ್ಲಿ ಬದಲಾಗಿದೆ.ನಮಗೆ ಗಂಡ-ಹೆಂಡತಿ ನಡುವಿನ ಪವಿತ್ರ ಸಂಬಂಧವನ್ನು ಅತ್ಯಾಚಾರ ಎಂದು ಹೇಳುವ ಪಾಶ್ಚಾತ್ಯರ ವ್ಯಾವಹಾರಿಕ ಸಂಸ್ಕೃತಿಯೂ ಬೇಡ. ಮದುವೆ ಯಾಗಿದೆ ಎಂಬ ಏಕೈಕ ಕಾರಣಕ್ಕೆ ಹೆಂಡತಿಯ ದೇಹದ ಮೇಲೆ ತನಗಿಷ್ಟ ಬಂದಂತೆ ಅಧಿಕಾರ ಚಲಾಯಿಸುವ ಪುರುಷ ಪ್ರಧಾನ ಸಂಸ್ಕೃತಿಯೂ ಬೇಡ. ಕೌಟುಂಬಿಕ ವ್ಯವಸ್ಥೆಯ ಪಾವಿತ್ರ್ಯವನ್ನು ಕಾಪಿಡುವ ಜತೆಗೆ ಹೆಣ್ಣಿನ ಶೋಷಣೆ ತಡೆವ ಮಧ್ಯಮ ಹಾದಿ ಬೇಕು.

Advertisement

Udayavani is now on Telegram. Click here to join our channel and stay updated with the latest news.

Next