ಬೆಂಗಳೂರು: ಮದ್ಯ ಖರೀದಿಗೆ ಆಧಾರ್ ಕಡ್ಡಾಯ ಮಾಡಲು ಅಬಕಾರಿ ಇಲಾಖೆ ಸಿದ್ಧತೆ ನಡೆಸಿದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮಂಗಳೂರಿನ ರಾಷ್ಟ್ರೀಯ ಪರಿಸರ ಒಕ್ಕೂಟ ಸಂಸ್ಥೆ ಖಾಲಿ ಮದ್ಯದ ಬಾಟಲ್‌ಗಳಿಂದ ಪರಿಸರ ಮಾಲಿನ್ಯ ತಡೆಯುವ ಸಲುವಾಗಿ ನೀಡಿದ್ದ ಕೆಲವು ಸಲಹೆಗಳನ್ನು ಆಧರಿಸಿ, ಇದರ ಬಗ್ಗೆ ಅಭಿಪ್ರಾಯ ನೀಡುವಂತೆ ಜಿಲ್ಲಾ ಅಬಕಾರಿ ಉಪ ಆಯುಕ್ತರು, ಅಧೀನ ಅಧಿಕಾರಿಗಳಿಗೆ ನೀಡಿದ್ದ ಜ್ಞಾಪನಾ ಪತ್ರ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.
ಈ ಬಗ್ಗೆ
“ಉದಯವಾಣಿ’ಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ (ಕೇಂದ್ರ ಸ್ಥಾನ ಮತ್ತು ಆಡಳಿತ) ವೆಂಕಟರಾಜಾ ಅವರನ್ನು ಸಂಪರ್ಕಿಸಿದಾಗ, ಮದ್ಯ ಖರೀದಿಗೆ ಆಧಾರ್ ಕಡ್ಡಾಯದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆದಿಲ್ಲ. ಈ ಬಗ್ಗೆ ಆಯುಕ್ತರ ಜತೆ ಚರ್ಚಿಸಿ ಇಲಾಖೆಯಿಂದ ಸ್ಪಷ್ಟೀಕರಣ ನೀಡಲಾಗುತ್ತದೆ ಎಂದು ಹೇಳಿದರು. ಖಾಲಿ ಮದ್ಯದ ಬಾಟಲ್‌ಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಯಲು, ಮದ್ಯ ಖರೀದಿಗೆ ಆಧಾರ್ ಕಡ್ಡಾಯ ಮಾಡಬೇಕು.
ಒಮ್ಮೆ ಮದ್ಯ ಖರೀದಿಸಿದ ವ್ಯಕ್ತಿ ಮತ್ತೂಮ್ಮೆ ಬಂದಾಗ ಈ ಹಿಂದೆ ಖರೀದಿಸಿದ್ದ ಖಾಲಿ ಬಾಟಲ್ ನೀಡಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಖಾಲಿ ಬಾಟಲ್ ಕಂಡು ಬಂದರೆ ಅದರಲ್ಲಿನ ಬಾರ್ ಕೋಡ್ ಸ್ಕ್ಯಾನ್ ಮಾಡಿ ಮಾರಾಟ ಮಾಡಿದ ಅಂಗಡಿಗೆ ದಂಡ ವಿಧಿಸುವುದು ಸೇರಿದಂತೆ ಹಲವು ಸಲಹೆಗಳನ್ನು ರಾಷ್ಟ್ರೀಯ ಒಕ್ಕೂಟ ಸಂಸ್ಥೆ ನೀಡಿತ್ತು.
ಇದರ ಬಗ್ಗೆ ಅಭಿಪ್ರಾಯ ಕೋರಿ ಮಂಡ್ಯ ಅಬಕಾರಿ ಉಪ ಆಯುಕ್ತರು, ಮಳವಳ್ಳಿ ಅಬಕಾರಿ ವೃತ್ತ ನಿರೀಕ್ಷಕರಿಗೆ ಅಭಿಪ್ರಾಯ ಕೋರಿ ಜ್ಞಾಪನಾ ಪತ್ರ ನೀಡಿದ್ದರು. ಅದಕ್ಕೆ ಉತ್ತರಿಸಿದ್ದ ಅಬಕಾರಿ ವೃತ್ತ ನಿರೀಕ್ಷಕರು, ಈ ಬಗ್ಗೆ ಹಿರಿಯ ಆಧಿಕಾರಿಗಳಿಗೆ ಮಾಹಿತಿ ನೀಡಿ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂಬರಹ ನೀಡಿದ್ದರು. ಇದು ಬಹಿರಂಗಗೊಂಡು ಚರ್ಚೆಗೆ ಗ್ರಾಸವಾಗಿತ್ತು.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಸೇರಿ ಇನ್ನಿತರ ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಹೆಚ್ಚಿಸಿರುವ ಕುರಿತು ರಾಜ್ಯಸರ್ಕಾರದ ಅಧಿಸೂಚನೆ ಬಂದ ಬಳಿಕ ಹೆಚ್ಚಿನ ದಂಡ ವಸೂಲಾತಿ ಬಗ್ಗೆ ಕ್ರಮ ವಹಿಸಲಾಗುವುದು.
-ಡಾ. ಬಿ.ಆರ್ ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ, ಸಂಚಾರ ವಿಭಾಗ