Advertisement
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಜಾನೆಯಿಂದ ವಿವಿಧ ಇಲಾಖೆಗಳ ಡಿಡಿಒಗಳು ವಿವಿಧ ಯೋಜನೆಗಳಿಗಾಗಿ ಹಣವನ್ನು ಸೆಳೆದ ಮೇಲೆ ಪ್ರತಿ ತಿಂಗಳು ಖಜಾನೆ, ಮಹಾ ಲೇಖಪಾಲರ ಕಚೇರಿಗೆ ಸೆಳೆದ ಮೊತ್ತಕ್ಕೆ ಸ್ವೀಕೃತಿಗಳನ್ನು ಸಲ್ಲಿಸಿ, ಲೆಕ್ಕ ಹೊಂದಾಣಿಕೆ ಮಾಡಬೇಕು. ಇದೊಂದು ನಿರಂತರ ಪ್ರಕ್ರಿಯೆ.
Related Articles
Advertisement
6.057 ಕೋಟಿ ರೂ.ಗಳ ಹೆಚ್ಚುವರಿ ಅನುದಾನವಾಗಿ ಕಾರ್ಯಾದೇಶಗಳ ಮೂಲಕ ಬಿಡುಗಡೆ ಮಾಡಿದ್ದರೂ ಸಹ ಯಾವುದೇ ಪ್ರಕರಣದಲ್ಲಿ ಹೆಚ್ಚುವರಿ ಅನುದಾನವು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿಗದಿಪಡಿಸಿರುವ ನ್ಯೂ ಸರ್ವೀಸ್ ಕ್ರೈಟಿರಿಯಾ ಮೀರುವುದಿಲ್ಲ. ಇದೇ ಕಂಡಿಕೆಯಲ್ಲಿ ಮಹಾ ಲೇಖಪಾಲರು ಇಷ್ಟು ಮೊತ್ತಕ್ಕೂ ಪೂರಕ ಪೂರಕ ಅಂದಾಜುಗಳ ಮೂಲಕ ಶಾಸಕಾಂಗದ ಅನುಮೋದನೆ ಪಡೆಯಲಾಗಿದೆ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಪ್ರತಿವರ್ಷವು ಇದೇ ರೀತಿಯಲ್ಲಿ ಹೆಚ್ಚುವರಿ ಅನುದಾನದ ಕಾರ್ಯಾದೇಶ ಹೊರಡಿಸಿ ನಂತರ ಶಾಸಕಾಂಗದ ಅನುಮೋದನೆ ಪಡೆಯಲಾಗುತ್ತದೆ. ಅತೀ ಅವಶ್ಯವಿರುವ ಪ್ರಕರಣಗಳಲ್ಲಿ ಮಾತ್ರ ಈ ರೀತಿಯಲ್ಲಿ ಕಾರ್ಯಾದೇಶಗಳನ್ನು ಹೊರಡಿಸಲಾಗುತ್ತದೆ ಹೊರತು ಇದನ್ನೆ ಒಂದು ಕ್ರಮವಾಗಿಸಿಕೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಮಾಣಪತ್ರ ಸಲ್ಲಿಸಿಲ್ಲ: ಪೌರಾಡಳಿತ ನಿರ್ದೇಶಕರು 254.34 ಕೋಟಿ ರೂ. ಮೊತ್ತಕ್ಕೆ ಬಳಕೆ ಪ್ರಮಾಣಪತ್ರ ಸಲ್ಲಿಸಿಲ್ಲ. ಆದರೂ ನಿರ್ದೇಶಕರ ವಿರುದ್ಧ ಕ್ರಮವಿಲ್ಲ ಎಂಬ ಆರೋಪಕ್ಕೆ ಉತ್ತರ ನೀಡಿರುವ ಸಿದ್ದರಾಮಯ್ಯ, ಅನುದಾನ ಬಳಕೆ ಪ್ರಮಾಣಪತ್ರ ಸಲ್ಲಿಕೆ ಒಂದು ನಿರಂತರ ಪ್ರಕ್ರಿಯೆ. ರಾಜ್ಯ ಹಣಕಾಸು ವರದಿಯಲ್ಲಿ ಮಹಾ ಲೇಖಪಾಲರು ಇದರ ಬಗ್ಗೆ ವರದಿ ಮಾಡಿದ ನಂತರ ಕೂಡ ಇಲಾಖೆಗಳು ಅನುದಾನ ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು. ಅಲ್ಲದೆ, 2001ರಲ್ಲಿ ಬಿಡುಗಡೆ ಮಾಡಿದ ಅನುದಾನಗಳ ಬಳಕೆ ಪ್ರಮಾಣಪತ್ರಗಳನ್ನು ಇದುವರೆಗೂ ಸಲ್ಲಿಸದೇ ಇರುವ ಕೆಲವು ಪ್ರಕರಣಗಳು ಬಾಕಿ ಇವೆ ಎಂದಿದ್ದಾರೆ.
11 ಸಾವಿರ ಕೋಟಿ ರೂ. ಎಲ್ಲಿ: 2016-17ನೇ ಸಾಲಿನಲ್ಲಿ 11,994.81 ಕೋಟಿ ರೂ.ಗಳು ಬಳಕೆಯಾಗಿಲ್ಲ. ಈ ದುಡ್ಡು ಎಲ್ಲಿ ಹೋಗಿದೆ ಎಂಬ ಬಿಜೆಪಿ ಆರೋಪಕ್ಕೆ, ಪ್ರತಿ ವರ್ಷವು ಆಯವ್ಯಯದಲ್ಲಿ ಒದಗಿಸಿರುವ ಮೊತ್ತವನ್ನು ಸಂಬಂಧಿಸಿದ ಆಡಳಿತ ಇಲಾಖೆಗಳು ಸಂಪೂರ್ಣವಾಗಿ ಖರ್ಚುಮಾಡಲು ಸಾಧ್ಯವಾಗದಿದ್ದಲ್ಲಿ, ಆ ಮೊತ್ತವನ್ನು ಆಧ್ಯರ್ಪಣೆ ಮಾಡಬೇಕಾಗುತ್ತದೆ. ಆದರೆ, ಇಲಾಖೆಗಳು ಬಳಕೆಯಾಗದೆ ಇರುವ ಸಂಪೂರ್ಣ ಮೊತ್ತಕ್ಕೆ ಆಧ್ಯರ್ಪಣೆ ಆದೇಶಗಳನ್ನು ಹೊರಡಿಸುತ್ತಿಲ್ಲ.
2008-09ರಲ್ಲಿ ಬಳಕೆಯಾಗದೇ ಇರುವ ಮೊತ್ತದಲ್ಲಿ ಕೇವಲ ಶೇ.16ರಷ್ಟು ಮೊತ್ತಕ್ಕೆ ಮಾತ್ರ ಆಧ್ಯರ್ಪಣೆ ಆದೇಶ ಹೊರಡಿಸಲಾಗಿತ್ತು. 2016-17ರಲ್ಲಿ ಕೂಡಾ ಹೆಚ್ಚು ಕಡಿಮೆ ಶೇ.16ರಷ್ಟಕ್ಕೆ ಆಧ್ಯರ್ಪಣೆ ಆದೇಶ ಹೊರಡಿಸಲಾಗಿದೆ. ಪ್ರತಿ ವರ್ಷವು ಆಯವ್ಯಯ ಮಂಡನೆಯಾದ ನಂತರ ಇಲಾಖೆಗಳ ಬೇಡಿಕೆಯನುಸಾರ ಹೆಚ್ಚುವರಿ ಅನುದಾನವನ್ನು ಪೂರಕ ಅಂದಾಜುಗಳ ಮೂಲಕ ಅಥವಾ ಮರು ಹೊಂದಾಣಿಕೆ ಒದಗಿಸಲಾಗುತ್ತದೆ.
ಈ ರೀತಿ ಹೆಚ್ಚುವರಿ ಅನುದಾನವನ್ನು ಒದಗಿಸಲು ಸಂಪನ್ಮೂಲ ಕ್ರೋಢೀಕರಣವನ್ನು ಹೆಚ್ಚಿಸಬೇಕಾಗುತ್ತದೆ ಅಥವಾ ಆಯವ್ಯಯದಲ್ಲಿ ವಿವಿಧ ಯೋಜನೆಗಳಿಗೆ ಒದಗಿಸಿರುವ ಅನುದಾನದ ಉಳಿತಾಯದಿಂದ ಭರಿಸಬೇಕಾಗುತ್ತದೆ. ರಾಜ್ಯ ಹಣಕಾಸು ವರದಿಯಲ್ಲಿ ಖರ್ಚಾಗದೇ ಉಳಿದಿದೆ ಎಂದು ತಿಳಿಸಿರುವ ಮೊತ್ತವು ಹೆಚ್ಚುವರಿ ಅನುದಾನ ಒದಗಿಸಲು ಉಳಿತಾಯ ಮಾಡಿರುವ ಮೊತ್ತವಾಗಿರುತ್ತದೆ. ಇಲಾಖೆಗಳು ವರ್ಷಾಂತ್ಯಕ್ಕೆ ಸರಿಯಾಗಿ ಆದ್ಯರ್ಪಣೆ ಆದೇಶಗಳನ್ನು ಹೊರಡಿಸಿದರೆ ಈ ರೀತಿಯ ಆಕ್ಷೇಪಣೆಗಳು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವರದಿಯಲ್ಲಿ ಮೋಸ, ಕಳ್ಳತನ ಉಲ್ಲೇಖ: ಸಿದ್ದರಾಮಯ್ಯ ಅವರು ಮಂಡಿಸಿರುವ ಆಯವ್ಯಯದ ಮೇಲೆ ಸಿಎಜಿ ವರದಿಯಲ್ಲಿ ಮೋಸ ಮತ್ತು ಕಳ್ಳತನ ಎಂಬ ಶಬ್ದಗಳು ಬಳಕೆಯಾಗಿವೆ ಎಂಬ ಆರೋಪಕ್ಕೆ ಉತ್ತರಿಸಿರುವ ಅವರು, ಮಹಾ ಲೇಖಪಾಲರು ವರದಿಯಲ್ಲಿ ಸಂಶಯವಿರುವ ಪ್ರಕರಣಗಳ ಬಗ್ಗೆ ಮೋಸ ಮತ್ತು ಕಳ್ಳತನ ಆಗಿದೆ ಎಂಬ ಬಗ್ಗೆ ಪ್ರತಿ ವರ್ಷವೂ ರಾಜ್ಯ ಹಣಕಾಸು ವರದಿಯಲ್ಲಿ ಉಲ್ಲೇಖ ಮಾಡುತ್ತಾರೆ. ಈ ಬಗ್ಗೆ ಪಿಎಸಿಯಲ್ಲಿ ವಿವರವಾದ ಚರ್ಚೆ ನಡೆದು ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಈ ವೇಳೆ ಯಾರು ಸಿಎಂ ಆಗಿದ್ರು?: 2010-11ರಲ್ಲಿ ಶೆ.32.92ರಷ್ಟು ಅಂದರೆ 22.187 ಕೋಟಿ ರೂ., 2011-12ರಲ್ಲಿ ಶೇ.33.56ರಷ್ಟು 27.057 ಕೋಟಿ, 2012-13ರಲ್ಲಿ ಶೇ.42ರಷ್ಟು 43.093 ಕೋಟಿ ಮೊತ್ತಕ್ಕೆ ಲೆಕ್ಕ ಹೊಂದಾಣಿಕೆಯಾಗದ ಪರಿಸ್ಥಿತಿ ಇತ್ತು. ಈ ಅವಧಿಗಳಲ್ಲಿ ಯಾರು ಮುಖ್ಯಮಂತ್ರಿಯಾಗಿದ್ದರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.