Advertisement

2G, 3G, 4G ಪಕ್ಷಗಳು ಬೇಡ: ಕೈ, ಡಿಎಂಕೆ ವಿರುದ್ಧ ಅಮಿತ್‌ ಶಾ ವಾಗ್ಧಾಳಿ

10:14 PM Jun 11, 2023 | Team Udayavani |

ಚೆನ್ನೈ/ವೆಲ್ಲೂರ್‌: “ಕಾಂಗ್ರೆಸ್‌, ಡಿಎಂಕೆ ಕುಟುಂಬ ರಾಜಕಾರಣವನ್ನು ಬೆಂಬಲಿಸುತ್ತವೆ. ಅವುಗಳೆಲ್ಲ 2ಜಿ, 3ಜಿ, 4ಜಿ ಪಕ್ಷಗಳು’ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಕಟುವಾಗಿ ಟೀಕೆ ಮಾಡಿದ್ದಾರೆ. ತಮಿಳುನಾಡು ಪ್ರವಾಸದಲ್ಲಿರುವ ಅವರು ವೆಲ್ಲೂರ್‌ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

Advertisement

ತಮಿಳುನಾಡಿನಲ್ಲಿ ಕುಟುಂಬ ರಾಜಕಾರಣಕ್ಕೆ ಬೆಂಬಲ ನೀಡುವ ಪಕ್ಷಗಳನ್ನು ಕಿತ್ತೂಗೆಯುವ ಕಾಲ ಬಂದಿದೆ. ಕಾಂಗ್ರೆಸ್‌ ಮತ್ತು ಡಿಎಂಕೆ ಕುಟುಂಬ ರಾಜಕಾರಣಕ್ಕೆ ಬೆಂಬಲ ನೀಡುತ್ತವೆ. ಇಲ್ಲಿ ನಾನು 2ಜಿ ಸ್ಪೆಕ್ಟ್ರಂ ಹಂಚಿಕೆಯ ಬಗ್ಗೆ ಮಾತನಾಡುತ್ತಿಲ್ಲ. ಆ ಎರಡು ಪಕ್ಷಗಳು 2ಜಿ, 3ಜಿ, 4ಜಿ ಪಕ್ಷಗಳು. ಇಲ್ಲಿ ಜಿ ಎಂದರೆ ತಲೆಮಾರಿನ ವಿಚಾರದ ಬಗ್ಗೆ ಮಾತನಾಡಿದ್ದೇನೆ ಎಂದರು ಅಮಿತ್‌ ಶಾ.

ಡಿಎಂಕೆಯ ಮಾರನ್‌ ಕುಟುಂಬ ಎರಡು ದಶಕಗಳಿಂದ ಭ್ರಷ್ಟಾಚಾರ ನಡೆಸುತ್ತಾ ಬಂದಿದೆ. ಕರುಣಾನಿಧಿ ಕುಟುಂಬ ಮೂರು ತಲೆಮಾರುಗಳಿಂದ ಅಕ್ರಮ ನಡೆಸುತ್ತಾ ಬಂದಿದೆ. ಇನ್ನು ಗಾಂಧಿ ಕುಟುಂಬ 4ಜಿ. ಅಂದರೆ ಮಾಜಿ ಸಂಸದ ರಾಹುಲ್‌ ಗಾಂಧಿಯವರು ಆ ಕುಟುಂಬದ ನಾಲ್ಕನೇ ತಲೆಮಾರು. ಅಷ್ಟೂ ಅವಧಿಯಿಂದ ಅವರು ಅಧಿಕಾರವನ್ನು ಅನುಭವಿಸುತ್ತಾ ಬರುತ್ತಿದ್ದಾರೆ ಎಂದು ದೂರಿದರು.

ಕೇಂದ್ರ ಸರ್ಕಾರದ ಸಾಧನೆಗಳನ್ನು ಉಲ್ಲೇಖೀಸಿದ ಅವರು ಡಿಎಂಕೆ ಮತ್ತು ಕಾಂಗ್ರೆಸ್‌ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ ವಿಶೇಷ ಸ್ಥಾನಮಾನ ರದ್ದುಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು ಎಂದು ನೆನಪಿಸಿಕೊಂಡರು. 2004ರಿಂದ 2014ರ ಅವಧಿಯಲ್ಲಿ ಎರಡೂ ಪಕ್ಷಗಳು ಕೋಟ್ಯಂತರ ರೂ. ಅವ್ಯವವಹಾರ ನಡೆಸಿವೆ. ಒಂಭತ್ತು ವರ್ಷಗಳ ಎನ್‌ಡಿಎ ಸರ್ಕಾರದಲ್ಲಿ ಭ್ರಷ್ಟಾಚಾರದ ಪ್ರಕರಣವೇ ನಡೆದಿಲ್ಲ ಎಂದರು.

ತಮಿಳು ನಾಯಕ ಪ್ರಧಾನಿಯಾಗಲಿ
ಮುಂದಿನ ವರ್ಷಗಳಲ್ಲಿ ತಮಿಳುನಾಡಿನ ನಾಯಕರೊಬ್ಬರು ದೇಶದ ಪ್ರಧಾನಮಂತ್ರಿ ಹುದ್ದೆಗೆ ಏರಬೇಕು ಎಂದು ಗೃಹ ಸಚಿವ ಅಮಿತ್‌ ಶಾ ಪ್ರತಿಪಾದಿಸಿದ್ದಾರೆ. ಚೆನ್ನೈನಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಈ ಅಂಶವನ್ನು ಪ್ರಮುಖವಾಗಿ ಉಲ್ಲೇಖೀಸಿದ್ದಾರೆ ಎಂದು ಮೂಲಗಳು ಹೇಳಿವೆ. “ಹಿಂದಿನ ಎರಡು ಸಂದರ್ಭಗಳಲ್ಲಿ ತಮಿಳುನಾಡಿನ ನಾಯಕರು ಪ್ರಧಾನಿಯಾಗುವ ಅವಕಾಶ ತಪ್ಪಿಹೋಗಿತ್ತು. ಅದಕ್ಕೆ ಆಡಳಿತಾರೂಢ ಡಿಎಂಕೆಯೇ ಕಾರಣ. ಮುಂದಿನ ವರ್ಷಗಳಲ್ಲಿ ಹಾಗೆ ಆಗದಂತೆ ನೋಡಿಕೊಳಬೇಕು. 2024ರ ಚುನಾವಣೆಯಲ್ಲಿ 39 ಸ್ಥಾನಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಲೇಬೇಕು’ ಎಂದು ಶಾ ಸೂಚನೆ ನೀಡಿದ್ದಾರೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.

Advertisement

ಕರ್ನಾಟಕದ ಸೋಲಿಂದ ಲೋಕಸಭೆಗೆ ಶೀಘ್ರ ಎಲೆಕ್ಷನ್‌
ಸೇಲಂ: ಲೋಕಸಭೆಗೆ ಅವಧಿಗೆ ಮುನ್ನ ಚುನಾವಣೆ ನಡೆದರೂ ಅಚ್ಚರಿ ಇಲ್ಲ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ. ಸೇಲಂನಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮುಕ್ತಾಯಗೊಂಡ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಜತೆಗೆ ದೇಶಾದ್ಯಂತ ಆ ಪಕ್ಷದ ವರ್ಚಸ್ಸು ಇಳಿಮುಖವಾಗುತ್ತಿದೆ. ಹೀಗಾಗಿ, ಅಚ್ಚರಿಯ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಎಂದೆ. ತಮಿಳುನಾಡು ಸೇರಿದಂತೆ ದೇಶದ ಹಲವೆಡೆ ಅಮಿತ್‌ ಶಾ ಪ್ರವಾಸ ಮಾಡುತ್ತಿರುವುದೂ ಇದಕ್ಕೆ ಪುಷ್ಟಿ ನೀಡುತ್ತಿದೆ ಎಂದರು.

ಈ ಹಿನ್ನೆಲೆಯಲ್ಲಿ ಡಿಎಂಕೆ ಕಾರ್ಯಕರ್ತರು ಮೈಮರೆಯಬಾರದು, ಈಗಲೇ ಚುನಾವಣೆಗೆ ಸಿದ್ಧರಾಗಬೇಕು’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ. 9 ವರ್ಷಗಳ ಅವಧಿಯ ಎನ್‌ಡಿಎ ಸರ್ಕಾರದಲ್ಲಿ ತಮಿಳುನಾಡಿಗೆ ಏನು ಲಾಭವಾಗಿದೆ ಎಂದು ಪ್ರಶ್ನಿಸಿದರು. ಅದಕ್ಕೆ ತಿರುಗೇಟು ನೀಡಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ 2024ರ ಲೋಕಸಭೆ ಚುನಾವಣೆ ಜತೆಗೇ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದಿದ್ದಾರೆ.

ಬಿಜೆಪಿ ಪ್ರತಿಭಟನೆ:
ಚೆನ್ನೈ ವಿಮಾನನಿಲ್ದಾಣದಲ್ಲಿ ಶನಿವಾರ ಸಂಜೆ ಅಮಿತ್‌ ಶಾ ಇಳಿದ ಕೂಡಲೇ ದಿಢೀರ್‌ ವಿದ್ಯುತ್‌ ವ್ಯತ್ಯಯ ಆಗಿದೆ. ವಿಮಾನನಿಲ್ದಾಣದ ಹೊರಗಡೆಯ ವಿದ್ಯುತ್‌ ದೀಪಗಳು ಕೂಡಲೇ ಆರಿವೆ. ಇದರಿಂದ ಸಿಟ್ಟಾದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಡಿಎಂಕೆ ವಕ್ತಾರ ಟಿಕೆಎಸ್‌ ಇಳಂಗೋವನ್‌, ಸೆಖೆ ಹೆಚ್ಚಾಗಿರುವುದರಿಂದ ಕಳೆದ ಒಂದು ತಿಂಗಳಿಂದ ವಿದ್ಯುತ್‌ ಬಳಕೆ ಹೆಚ್ಚಾಗಿದೆ. ಕೆಲವೊಮ್ಮೆ ಹೀಗಾಗುತ್ತದೆ, ಇದೇನು ಉದ್ದೇಶಪೂರ್ವಕ ಕೃತ್ಯವಲ್ಲ. ಬೇಕಾದರೆ ಬಿಜೆಪಿ ಇದನ್ನು ಸಿಬಿಐನಿಂದಲೇ ತನಿಖೆ ಮಾಡಿಸಬಹುದು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next