ಹುಬ್ಬಳ್ಳಿ: ಜವಳಿ ವರ್ತಕರ ಮೇಲೆ ಕೇಂದ್ರ ಸರಕಾರ ಹೇರಿರುವ ಶೇ.12 ಜಿಎಸ್‌ಟಿಯನ್ನು ಈ ಕೂಡಲೇ ಹಿಂಪಡೆಯಬೇಕೆಂದು ಹುಬ್ಬಳ್ಳಿ ಜವಳಿ ಮತ್ತು ಅರಿವೆ ವ್ಯಾಪಾರಸ್ಥರ ಸಂಘದಿಂದ ಬುಧವಾರ ಮೌನ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಕೆಲವು ವರ್ಷಗಳಿಂದ ಜವಳಿ ಮತ್ತು ಅರಿವೆ ವಹಿವಾಟು ಮೇಲೆ ಕೇಂದ್ರ ಸರಕಾರ ಶೇ.5 ಜಿಎಸ್‌ಟಿ ಜಾರಿ ಮಾಡಿತ್ತು. ಇದೀಗ ಅದನ್ನು ಶೇ.12ಕ್ಕೆ ಏರಿಕೆ ಮಾಡುವ ಮೂಲಕ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದು ಈ ಕೂಡಲೇ ಆದೇಶ ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಹಿಂದೆ ಕೇಂದ್ರ ಸರಕಾರ ಬಟ್ಟೆ ಮೇಲೆ ಜಿಎಸ್‌ಟಿ ಹಾಕಲು ಮುಂದಾದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತು. ಆ ಸಂದರ್ಭದಲ್ಲಿ ದೇಶಕ್ಕೆ ನಿಮ್ಮದು ಕೊಡುಗೆ ಇರಲಿ ಎನ್ನುವ ಮಾತುಗಳಿಂದ ನಮ್ಮನ್ನು ಸುಮ್ಮನಾಗಿಸಿದ್ದರು. ಇದೀಗ ಶೇ.12 ಕ್ಕೆ ಏರಿಸಲು ಮುಂದಾಗಿರುವುದು ಖಂಡನೀಯ. ಜತೆಗೆ ಬಟ್ಟೆ ವ್ಯಾಪಾರವೂ ಕೇವಲ ಶೇ.5 ರಿಂದ 10 ಲಾಭ ಇರಿಸಿಕೊಂಡು ವಹಿವಾಟು ನಡೆಸುತ್ತೇವೆ. ಇದೀಗ ಸರಕಾರ ಶೇ.12 ಏರಿಕೆ ಮಾಡಿದರೆ ಹೇಗೆ ಎಂದರು.
ಶೇ.85 ಜವಳಿ ವ್ಯಾಪಾರದ ಅಂಗಡಿಗಳು ಮತ್ತು ತಯಾರಕರು ಸಣ್ಣ ಮತ್ತು ಮಧ್ಯಮ ವರ್ಗದವರಿದ್ದು, 40 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ನಡೆಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಜವಳಿ ಮತ್ತು ಗಾರ್ಮೆಂಟ್ ಉದ್ಯಮ ಕೋವಿಡ್‌ನಿಂದ ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಸ್ಥಿತಿಯಲ್ಲಿ ಜಿಎಸ್‌ಟಿ ಹೆಚ್ಚಳ ಸರಿಯಲ್ಲ ಎಂದರು. ಸಂಘದ ಅಧ್ಯಕ್ಷ ಮುಖೇಶ ಹಿಂಗರ, ಕಾರ್ಯದರ್ಶಿ ರಾಕೇಶ ಕಟಾರಿಯಾ, ಖಜಾಂಚಿ ಗುರು ಪವಾರ, ಆನಂದ ಗಂಗಾವತಿ, ಪ್ರವೇಶ ಕೊಠಾರಿ, ಕಿರಣ ಭಂಡಾರಿ, ಮುಖೇಶ ಕೊಠಾರಿ, ಮಂಜುನಾಥ ದಾನಿ, ಸದಾನಂದ ನಡಕಟ್ಟಿನ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.