ಪ್ಯಾರಿಸ್: ಕ್ರಿಕೆಟ್‌ನಂತೆ ಟೆನಿಸ್‌ನಲ್ಲೂ ಅಸಾಧಾರಣ ನಿರ್ವಹಣೆ ನೀಡಿದ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. 1973ರಲ್ಲಿ ಮಾರ್ಗರೆಟ್ ಕೋರ್ಟ್ ಬಳಿಕ ಪ್ಯಾರಿಸ್‌ನಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯದ ಮೊದಲ ವನಿತೆ ಎಂಬ ಗೌರವಕ್ಕೆ ಬಾರ್ಟಿ ಪಾತ್ರರಾಗಿದ್ದಾರೆ. ಈ ಸಾಧನೆಯಿಂದ ವಿಶ್ವ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದ ಅವರು ಅಗ್ರಸ್ಥಾನಕ್ಕೇರುವ ಗುರಿ ಇಟ್ಟುಕೊಂಡಿದ್ದಾರೆ.
ಕೇವಲ 3 ವರ್ಷಗಳ ಹಿಂದೆ ಬಾರ್ಟಿ ವೃತ್ತಿಪರ ಕ್ರಿಕೆಟ್ ಆಡುತ್ತಿದ್ದರು. ಆಸ್ಟ್ರೇಲಿಯ ರಾಷ್ಟ್ರೀಯ ತಂಡದಲ್ಲಿ ಆಡುವ ಸಾಧ್ಯತೆಯೂ ಇತ್ತು. ಆದರೆ ವಿಧಿ ಅವರನ್ನು ಬೇರೆಯೇ ದಾರಿಯಲ್ಲಿ ಕೊಂಡೊಯ್ದಿತ್ತು ಎಂದು ಅವರ ಮಾಜಿ ಕ್ರಿಕೆಟ್ ಕೋಚ್ ಆ್ಯಂಡಿ ರಿಚರ್ಡ್ಸ್ ನೆನಪಿಸಿಕೊಳ್ಳುತ್ತಾರೆ.
ಬಾರ್ಟಿ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದನ್ನು ಕೇಳಿದ ಅವರ ಮಾಜಿ ಕ್ರಿಕೆಟ್ ಕೋಚ್ ರಿಚರ್ಡ್ಸ್ ಖುಷಿಯಲ್ಲಿ ಅತ್ತರು. ಅವರು ಈ ಪ್ರಶಸ್ತಿಗೆ ಅರ್ಹರು. ಅವರು ಅಂತಹ ವ್ಯಕ್ತಿ, ಶ್ರೇಷ್ಠ ಸ್ಪರ್ಧಿ ಮತ್ತು ನೈಜ ಗಿಫೆrಡ್ ಆ್ಯತೀಟ್‌ಗಳಲ್ಲಿ ಒಬ್ಬರು ಎಂದು ಪ್ರತಿಕ್ರಿಯಿಸಿದ್ದಾರೆ.
5 ವರ್ಷಗಳ ಹಿಂದೆ ಯುಎಸ್ ಓಪನ್ ಆಡಿದ ಬಳಿಕ ಬಾರ್ಟಿ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಉಳಿದರು. ಜೂನಿಯರ್ ಟೆನಿಸ್‌ನಲ್ಲಿ ಭಾರೀ ಯಶಸ್ಸು ಸಾಧಿಸಿದರು. 2011ರ ವಿಂಬಲ್ಡನ್ ಬಾಲಕಿಯರ ಪ್ರಶಸ್ತಿ ಗೆದ್ದ ಅವರು 3 ಬಾರಿ ಡಬಲ್ಸ್ ಫೈನಲ್ನಲ್ಲೂ ಆಡಿದ್ದರು.
ಟೆನಿಸ್‌ನಿಂದ ಕ್ರಿಕೆಟ್‌ನತ್ತ
ಒತ್ತಡ ಮತ್ತು ನಿರೀಕ್ಷೆಯಿಂದ ಹೊರಬರಲು ಅವರು ಟೆನಿಸ್‌ನಿಂದ ದೂರ ಉಳಿಯಲು ನಿರ್ಧರಿಸಿದರು. 2014ರಲ್ಲಿ ಟೆನಿಸ್ ರಂಗ ಬಿಟ್ಟು ಕ್ರಿಕೆಟ್ ಅಂಗಳಕ್ಕಿಳಿದರು. ತವರಿನಲ್ಲಿ ವೃತ್ತಿಪರ ತಂಡವೊಂದಕ್ಕೆ ಸೇರಿಕೊಂಡರು. ವನಿತಾ ಬಿಗ್ ಬ್ಯಾಶ್ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಪರ ಆಡಿದರು. 9 ಪಂದ್ಯಗಳನ್ನಾಡಿದ ಅವರ ಗರಿಷ್ಠ ಗಳಿಕೆ 39 ರನ್.