Advertisement

ಎನ್‌ಎಂಪಿಟಿ: ಹಡಗು ನಿರ್ವಹಣೆಗೆ ತೊಡಕಾದ ಹೂಳು!

01:22 AM Aug 25, 2019 | sudhir |

ಮಂಗಳೂರು: ನವಮಂಗಳೂರು ಬಂದರಿನ ಬರ್ತ್‌ ನಲ್ಲಿ ಹೂಳು ತುಂಬಿ ಹಡಗುಗಳ ಆಗಮನ- ನಿರ್ಗಮನಕ್ಕೆ ಅಡಚಣೆಯಾಗುತ್ತಿದೆ. ಇದು ಬಂದರಿನ ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

Advertisement

ಮಂಗಳೂರು ಆಸುಪಾಸಿನ ಹಲವಾರು ಕೈಗಾರಿಕೆಗಳ ಆಯಾತ- ನಿರ್ಯಾತಕ್ಕೆ ನವಮಂಗಳೂರು ಬಂದರು ಮಾಧ್ಯಮದಂತಿದೆ. ಸಾಮಾನ್ಯವಾಗಿ ಇಲ್ಲಿ ಜೆಟ್ಟಿಯ ಆಳ 14 ಮೀ. ಆದರೆ ಇಷ್ಟು ಆಳ ಇರುವುದು ವರ್ಷದಲ್ಲಿ ಮಾರ್ಚ್‌ನಿಂದ ತೊಡಗಿ ಮೂರ್ನಾಲ್ಕು ತಿಂಗಳು ಮಾತ್ರ. ಉಳಿದ ಸಮಯದಲ್ಲಿ ಒಂದು ಮೀ.ನಷ್ಟು ಹೂಳು ಇರುತ್ತದೆ. ಇದನ್ನು ನಿವಾರಿಸುವುದಕ್ಕಾಗಿ ಪ್ರತೀ ವರ್ಷ ಡ್ರೆಜ್ಜಿಂಗ್‌ ನಡೆಸಲಾಗುತ್ತದೆಯಾದರೂ ಈ ಬಾರಿ ಇನ್ನೂ ನಡೆದಿಲ್ಲ.

ಈ ಮಧ್ಯೆ ಎನ್‌ಎಂಪಿಟಿಯ ಹೊಸ 16ನೇ ಜೆಟ್ಟಿ ಡ್ರೆಜ್ಜಿಂಗ್‌ ವಿಚಾರದಲ್ಲಿ ಇನ್ನೊಂದು ಸಮಸ್ಯೆಗೆ ಸಿಲುಕಿದೆ. ಜೆಟ್ಟಿ ಒಪ್ಪಂದದ ಪ್ರಕಾರ ಇರಬೇಕಿದ್ದಷ್ಟು ಆಳ ಇಲ್ಲದೆ ಹಡಗುಗಳು ಬರಲಾಗುತ್ತಿಲ್ಲ. ಕ್ಯಾಪಿಟಲ್‌ ಡ್ರೆಜ್ಜಿಂಗ್‌ ಪೂರ್ಣವಾಗಿ ಆಗದಿರುವುದರಿಂದ ದೊಡ್ಡ ಹಡಗುಗಳ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕೇಂದ್ರ ಸಚಿವ ಮನ್ಸುಖ್‌ ಮಾಂಡವಿಯಾ ಅವರಿಗೆ ದೂರು ನೀಡಿದೆ.

ಈ ಜೆಟ್ಟಿಯನ್ನು 469.46 ಕೋ.ರೂ. ವೆಚ್ಚದಲ್ಲಿ ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣೆಗಾಗಿ ಸಿದ್ಧಪಡಿಸಿ, ಚೆಟ್ಟಿನಾಡ್‌ ಮಂಗಳೂರು ಕೋಲ್‌ ಲಿ.ಗೆ ನೀಡಲಾಗಿತ್ತು. ಇದು 15.1 ಮೀ. ಆಳ ಇರಬೇಕಿದ್ದರೂ 11.90 ಮೀ. ಮಾತ್ರವಿದೆ. ಹೀಗಾಗಿ ಕಲ್ಲಿದ್ದಲು ಹೊತ್ತ ನೌಕೆಗಳಿಗೆ ಬರಲಾಗುತ್ತಿಲ್ಲ. ಅವನ್ನು 14ನೇ ಜೆಟ್ಟಿಗೆ ತಂದು, ಭಾಗಶಃ ಕಲ್ಲಿದ್ದಲು ಇಳಿಸಿ ಬಳಿಕ 16ನೇ ಜೆಟ್ಟಿಗೆ ತರಲಾಗುತ್ತದೆ.

ಹೂಳೆತ್ತದಿರುವುದೇ ಇದಕ್ಕೆ ಕಾರಣ ಎಂದು ಸಂಸ್ಥೆಯ ಅಧ್ಯಕ್ಷ ಪಿ.ಬಿ. ಅಬ್ದುಲ್‌ ಹಮೀದ್‌, ಕಾರ್ಯದರ್ಶಿ ಪ್ರಶಾಂತ್‌ ಸಿ.ಜಿ. “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಕೇಂದ್ರದ ಗಮನಕ್ಕೆ
ಎನ್‌ಎಂಪಿಟಿಯ ಬರ್ತ್‌ ನಲ್ಲಿ ಹೂಳು ತುಂಬಿ ಸರಕು ತುಂಬಿ ಆಗಮಿಸುವ ಹಡಗುಗಳಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ. ಸಮಸ್ಯೆಗೆ ಪರಿಹಾರ ನೀಡುವ ನೆಲೆಯಲ್ಲಿ ಕೇಂದ್ರ ಸರಕಾರ ತತ್‌ಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ.
– ನಳಿನ್‌ ಕುಮಾರ್‌ ಕಟೀಲು, ಸಂಸದರು

ಆಮದು ಕಚ್ಚಾತೈಲ ಕಡಿತ
ಎಂಆರ್‌ಪಿಎಲ್‌ಗೆ ಎನ್‌ಎಂಪಿಟಿಯ ಹೊರಗೆ ಪ್ರತ್ಯೇಕ ಜೆಟ್ಟಿ ಇದ್ದರೂ ಮಳೆಗಾಲದಲ್ಲಿ ಅದು ಕಾರ್ಯಾಚರಿಸುವುದಿಲ್ಲ. ಆಗ ಕಚ್ಚಾ ತೈಲವನ್ನು 10 ಮತ್ತು 11ನೇ ಜೆಟ್ಟಿಗೆ ತರಲಾಗುತ್ತದೆ. ಈ ಜೆಟ್ಟಿಯ ಆಳ 14 ಮೀ. ಇರುವಾಗ 95 ಸಾವಿರ ಮೆ. ಟನ್‌ನಷ್ಟು ಕಚ್ಚಾತೈಲ ಹೊತ್ತ ಹಡಗು ಬರಲು ಸಾಧ್ಯ. ಆದರೆ ಹೂಳು ತುಂಬಿದ್ದರಿಂದ 10 ಸಾವಿರ ಮೆ. ಟನ್‌ನಷ್ಟು ಆಮದು ಕಡಿತ ಮಾಡಬೇಕಾಗಿದೆ. ಇದರಿಂದ ನಷ್ಟವಾಗುತ್ತಿದೆ ಎಂದು ಎಂಆರ್‌ಪಿಎಲ್‌ ಮೂಲಗಳು ತಿಳಿಸಿವೆ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next