ಹೊಸದಿಲ್ಲಿ: ರಾಯಲ್ ಚಾಲೆಂಜರ್ ಬೆಂಗಳೂರು-ಸನ್‌ರೈಸರ್ ಹೈದರಾಬಾದ್ ವಿರುದ್ಧ ಪಂದ್ಯದ ವೇಳೆ ಕೋಪಗೊಂಡು ಅಶಿಸ್ತು ಪ್ರದರ್ಶಿಸಿದ ಅಂಪಾಯರ್ ನೈಜೆಲ್ ಲಾಂಗ್ ಮೇಲೆ ಬಿಸಿಸಿಐ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ರವಿವಾರ ನಡೆಯುವ ಫೈನಲ್‌ನಲ್ಲೂ ಅವರೇ ಅಂಪಾಯರ್ ಆಗಿರಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟ ಪಡಿಸಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ಸಲ್ಲಿಸಿದ ಅಧಿಕೃತ ದೂರಿನ ಹೊರತಾಗಿಯೂ ಐಪಿಎಲ್ ಆಪರೇಷನ್ ತಂಡದೊಂದಿಗೆ ಮಾತುಕತೆ ನಡೆಸಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಲಾಂಗ್ ಅವರಿಗೆ ಫೈನಲ್‌ನಲ್ಲಿ ಅಂಪಾಯರಿಂಗ್ ಮಾಡಲು ಅನುಮತಿ ನೀಡಿದೆ.
“ನೈಜೆಲ್ ಲಾಂಗ್ ಐಪಿಎಲ್‌ನ ಅತ್ಯುತ್ತಮ ಅಂಪಾಯರ್. ಅವರ ನಡೆ ಆ ಕ್ಷಣದ ಉದ್ರೇಕ ಅಷ್ಟೆ. ಅದು ಸಹಜ ಕೂಡ. ಲಾಂಗ್ ತಪ್ಪನ್ನು ಅರಿತುಕೊಂಡಿದ್ದು, ಸ್ವತಃ ತಾವೇ ಹಾನಿಯ ವೆಚ್ಚವನ್ನು ಭರಿಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.
ಸನ್‌ರೈಸರ್ ಇನ್ನಿಂಗ್ಸ್ ವೇಳೆ ಕೊನೆಯ ಓವರ್‌ನಲ್ಲಿ ವಿವಾದಾಸ್ಪದ ನೋ-ಬಾಲ್ ನಿರ್ಧಾರದಿಂದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ವೇಗಿ ಉಮೇಶ್ ಯಾದವ್ ಮತ್ತು ಲಾಂಗ್ ನಡುವೆ ದೀರ್ಘ ಚರ್ಚೆ ನಡೆದಿತ್ತು. ಇದರಿಂದ ತಾಳ್ಮೆ ಕಳೆದುಕೊಂಡ ಲಾಂಗ್ ಪಂದ್ಯದ ಅನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಅಂಪಾಯರ್ ಕೋಣೆಯ ಬಾಗಿಲಿಗೆ ಒದ್ದು ಹಾನಿ ಮಾಡಿದ್ದರು. ಈ ನಡೆಯ ವಿರುದ್ಧ ಕೆಎಸ್‌ಸಿಎ ಲಾಂಗ್ ವಿರುದ್ಧ ಬಿಸಿಸಿಐಗೆ ದೂರು ನೀಡಿತ್ತು. ಈ ಅಶಿಸ್ತಿನಿಂದ ಫೈನಲ್ ಪಂದ್ಯದ ಅಂಪಾಯರಿಂಗ್ ಅನ್ನು ಲಾಂಗ್ ಕಳೆದುಕೊಳ್ಳುವ ಸಾಧ್ಯತೆ ಕೂಡ ಇತ್ತು. ಆದರೆ ಇದೀಗ ಬಿಸಿಸಿಐ ಲಾಂಗ್ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೇ ಫೈನಲ್‌ಗೆ ಅವರನ್ನೇ ಅಂಪಾಯರ್ ಎಂದು ನಿರ್ಧರಿಸಿದೆ.