Advertisement

ಮತ ಜಾಗೃತಿಗೆ ನಿವೇದಿತಾಗೌಡ ಸ್ವೀಪ್‌ ಐಕಾನ್‌

12:50 PM Apr 22, 2018 | Team Udayavani |

ಮೈಸೂರು: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಳ, ಮತದಾರರ ನೋಂದಣಿ ಮತ್ತು ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾಗೌಡರನ್ನು ಜಿಲ್ಲೆಯ ಸ್ವೀಪ್‌ ಸಮಿತಿ ಐಕಾನ್‌ ಆಗಿ ಚುನಾವಣಾ ಆಯೋಗದ ಅನುಮೋದನೆಯೊಂದಿಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಪ್ರಸ್ತುತ 33 ಲಕ್ಷ ಜನಸಂಖ್ಯೆಯಿದ್ದು, ಕಳೆದ ಚುನಾವಣೆಗಿಂತ ಶೇ.10 ಹೆಚ್ಚಾಗಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟಾರೆ 24.32 ಲಕ್ಷ ಮತದಾರರಿದ್ದು, 2013ರ ಚುನಾವಣೆಗೆ ಹೋಲಿಸಿದರೆ ಅಂದಾಜು ಶೇ.12 ಹೆಚ್ಚಾಗಿದೆ.

2013ರ ಚುನಾವಣೆಯಲ್ಲಿ ಜಿಲ್ಲೆಯ ಒಟ್ಟಾರೆ ಮತದಾನ ಪ್ರಮಾಣ ಶೇ.73, ಹೀಗಾಗಿ ಅರ್ಹ ಯುವ ಮತದಾರರನ್ನು ನೋಂದಾಯಿಸಲು ಹಾಗೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು 6500ಕ್ಕೂ ಹೆಚ್ಚು ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.

ಮತದಾನ ಅರಿವು: ವಿಶೇಷವಾಗಿ ಮೈಸೂರು ನಗರದ ಚಾಮರಾಜ, ಕೃಷ್ಣರಾಜ ಮತ್ತು ನರಸಿಂಹರಾಜ ಕ್ಷೇತ್ರಗಳಲ್ಲಿ 2013ರಲ್ಲಿ ನಡೆದ ಚುನಾವಣೆಯಲ್ಲಿ ಕ್ರಮವಾಗಿ ಶೇ.55.11, ಶೆ.68.49, ಶೇ.54.44 ಮತದಾನವಾಗಿದ್ದು, ಈ ಪ್ರಮಾಣವನ್ನು ಉತ್ತಮಪಡಿಸಲು ಆಯಾಯ ಪ್ರದೇಶಗಳಲ್ಲಿ ಸ್ವೀಪ್‌ ಸಮಿತಿಯಿಂದ ಮನೆಮನೆಗೆ ಭೇಟಿ ನೀಡಿ ಮತದಾನ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ.

ಜಿಲ್ಲೆಯ 17500ಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಸಂಘಗಳ ಸಭೆ ನಡೆಸಿ ಅರಿವು ಮೂಡಿಸಲಾಗಿದೆ. ಚಾಮುಂಡಿಬೆಟ್ಟದಲ್ಲಿ ದಸರಾ ಮಾದರಿಯಲ್ಲಿ “ನಿಮ್ಮ ಮತ ನಿಮ್ಮ ಹಕ್ಕು’ ಎಂಬ ವಿದ್ಯುತ್‌ ಬಲ್ಬ್ಗಳ ಫ‌ಲಕವನ್ನು ಏ.27ರಿಂದ ಮೇ 11ರವರೆಗೆ ಹಾಕಲಾಗುವುದು.

Advertisement

ಜಿಲ್ಲೆಯ 2687 ಮತಗಟ್ಟೆ ಹಂತದ ಸಮಿತಿಗಳನ್ನು ರಚಿಸಿ ಮತದಾನದ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಯುವ ಮತದಾರರನ್ನು ಆಕರ್ಷಿಸಲು ಸಾಮಾಜಿಕ ಜಾಲತಾಣಗಳಲ್ಲೂ ಮತದಾನ ಜಾಗೃತಿ ಸಂದೇಶಗಳನ್ನು ರವಾನಿಸಲಾಗುತ್ತಿದೆ ಎಂದರು.

ಗಿರಿಜನರ ವಲಸೆ ತಡೆ: ಜಿಲ್ಲೆಯ ಎಚ್‌.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಮತ್ತು ಮೈಸೂರು ತಾಲೂಕುಗಳಲ್ಲಿ ಒಟ್ಟಾರೆ 212 ಗಿರಿಜನ ಹಾಡಿಗಳಿವೆ. ಕಳೆದ ಚುನಾವಣೆಯಲ್ಲಿ ಗಿರಿಜನ ಹಾಡಿಗಳಲ್ಲಿ ಮತದಾನ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಗಿರಿಜನರನ್ನು ಮತದಾನ ಮುಗಿಯುವವರೆಗೆ ವಲಸೆ ಹೋಗದಂತೆ ಅರಿವು ಮೂಡಿಸುವ ಜತೆಗೆ ಕೂಲಿ ಕಾರ್ಮಿಕರ ವಲಸೆ ತಡೆಗೆ ನರೇಗಾ ವತಿಯಿಂದ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಅಲ್ಲದೆ, ಗಿರಿಜನ ಮತದಾರರು ಹೆಚ್ಚಿರುವ ಎಚ್‌.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಗಿರಿಜನ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಅಂಗವಿಕಲರ ಮತದಾನಕ್ಕೆ ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ವೀಲ್‌ ಚೇರ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಮೈಸೂರು ನಗರ ಪ್ರದೇಶದಲ್ಲಿ ಯುವಜನ ಸೇವೆ, ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ವತಿಯಿಂದ ಏ.24ರಂದು ಸಂಜೆ ಕೆ.ಆರ್‌.ವೃತ್ತದಿಂದ ಮತದಾನದ ಅರಿವು ಮೂಡಿಸಲು ಜಾಗೃಠಿಜಿ ಜಾಥಾ ನಡೆಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next