ಮಾಲೂರು: ಕಳೆದ ಎರಡು ಮೂರು ವರ್ಷಗಳಿಗಿಂತ ಈ ಬಾರಿಯ ಮುಂಗಾರು ಮಳೆ ಉತ್ತಮವಾಗಿ ಸಕಾಲಕ್ಕೆ ಬಿದ್ದ ಕಾರಣ ತಾಲೂಕಿನ ಬಹುಪಾಲು ರೈತರು ಉತ್ತಮವಾಗಿ ರಾಗಿ ಬೆಳೆ ತೆಗೆದು ಸಂತಸದಲ್ಲಿರುವ ದಿನಗಳಲ್ಲಿ ಪ್ರಸ್ತುತ ಆರಂಭವಾಗಿರುವ ಪ್ರಾಕೃತಿಕ ವಿಕೋಪ ನಷ್ಟದ ಆತಂಕ ಸೃಷ್ಟಿಸಿವೆ.
ತಾಲೂಕಿನಲ್ಲಿ ಸರಿ ಸುಮಾರು 11.750 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡಿರುವ ರೈತರು ಶೇ.99 ಬಿತ್ತನೆ ಪ್ರಮಾಣ ದಾಖಲಿಸಿದ್ದು, ಪ್ರಸ್ತುತ ಬಹುಪಾಲು ರಾಗಿಬೆಳೆಯು ಕಟಾವಿನ ಹಂತದಲ್ಲಿದೆ. ಆದರೆ ಒಂದೆರೆಡು ದಿನಗಳಿಂದ ನಿವಾರ್‌ಚಂಡಮಾರುತದಿಂದ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗುತ್ತಿದ್ದು, ಕಟಾವಿನ ಹಂತದಲ್ಲಿರುವ ರಾಗಿ ಬೆಳೆಯ ಕಾಳು ನೆಲಕ್ಕೆಬಿದ್ದು ಮೊಳಕೆಯಾಗಿ ನಷ್ಟವಾಗುವ ಭೀತಿ ರೈತರನ್ನು ಕಾಡುತ್ತಿದೆ. ಇದುವರೆಗೂ ಬೆಳೆ ನಷ್ಟದ ವರದಿಗಳ ದಾಖಲಾಗಿಲ್ಲವಾದರೂಇದೇ ರೀತಿ ಮಳೆ ಮುಂದುವರಿದಲ್ಲಿ ಕಟಾವುಮಾಡಿಹೊಲಗಳಲ್ಲಿಯೇಬಿಟ್ಟಿರುವ ರಾಗಿ ಬೆಳೆಯ ಜೊತೆಗೆ ಕಟಾವುಮಾಡಬೇಕಾಗಿರುವ ಬೆಳೆಯೂ ನಷ್ಟವಾಗುವ ಸಾಧ್ಯತೆ ಹೆಚ್ಚು.
ಸಮೀಕ್ಷೆ ಕಾರ್ಯ ಮಂದಗತಿ: ಸರ್ಕಾರದ ಸೂಚನೆಯಂತೆ ಕಂದಾಯ ಇಲಾಖೆಯ ಅಧಿಕಾರಿಗಳು ರೈತರ ಹೊಲಗಳಿಗೆ ತೆರಳಿ ನಿಗದಿ ಪ್ರದೇಶದಲ್ಲಿನ ಬೆಳೆ ಕತ್ತರಿಸಿ ತೂಕ ಮಾಡಿ ನಷ್ಟದ ಪ್ರಮಾಣ ಮತ್ತು ಬೆಳೆಯ ಅಂದಾಜುಗಳ ಸಮೀಕ್ಷೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದ್ದು, ಪ್ರಸ್ತುತ ಮಳೆಗೆ ಬೆಳೆ ನಷ್ಟವಾದಲ್ಲಿ ರೈತರು ಇಲ್ಲಿಯೂ ವಂಚಿತರಾಗುವ ಸಾಧ್ಯತೆಗಳಿವೆ.
ಕೂಲಿ ಕಾರ್ಮಿಕರ ಕೊರತೆ: ರಾಗಿ ಬೆಳೆ ಕಟಾವಿಗೆ ಒಂದೇ ಬಾರಿ ಬಂದಿರುವ ಜೊತೆಗೆ ಬಹುಪಾಲ ರೈತರು ರಾಗಿ ಬಿತ್ತಿರುವ ಕಾರಣ ಕಟಾವಿಗೆ ಕೂಲಿ ಕಾರ್ಮಿಕರ ಕೊರತೆ ಕಾಡುತ್ತಿದ್ದು, ಕೂಲಿಯ ಪ್ರಮಾಣವು ಹೆಚ್ಚಾಗಿ ಬೆಳೆಯ ಅದಾಯಕ್ಕಿಂತ ಖರ್ಚಿನ ಪ್ರಮಾಣವೇ ಅಧಿಕವಾಗುತ್ತಿದೆ. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ಬರುತ್ತಿರುವ ಬೆಳೆ ಕಟಾವು ಮಾಡಿ ಒಕ್ಕಣೆ ಮಾಡಿ ರಾಗಿ ಮಾಡುವಯಂತ್ರಗಳ ಭರಾಟೆ ಆರಂಭವಾಗಿದ್ದು, ಯಂತ್ರಗಳು ಸಹ ಪ್ರತಿ ಗಂಟೆಗ4,000 ರೂ. ದರ ನಿಗದಿಪಡಿಸಿದ್ದು, ರೈತರಿಗೆ ಯಂತ್ರಗಳ ಅಭಾವವು ಕಾಡುತ್ತಿದೆ.
ತಾಲೂಕಿನಲ್ಲಿ ಪ್ರಸ್ತುತ ವರ್ಷದಲ್ಲಿ ಶೇ.25ರಷ್ಟು ಮಾತ್ರ ರಾಗಿ ಬೆಳೆಕಟಾವು ಆಗಿದ್ದು, ಉಳಿದ ಶೇ.75 ಬೆಳೆ ಕಟಾವಿನ ಹಂತದಲ್ಲಿದೆ. ಇದುವರೆಗೂ ನಷ್ಟದ ಪ್ರಮಾಣದ ವರದಿಗಳು ದಾಖಲಾಗಿಲ್ಲವಾದರೂ ಒಂದೆರೆಡು ದಿನ ಮುಂದು ವರಿದಲ್ಲಿ ನಷ್ಟದ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಗಳ ಸೂಚನೆ ಹೊರಡಿಸಿದ್ದು, ನಷ್ಟದ ಪ್ರಮಾಣದ ಬಗ್ಗೆ ಸೂಕ್ತವರದಿ ನೀಡುವಂತೆ ಆದೇಶ ನೀಡಲಾಗಿದೆ.
– ಚಂದ್ರಪ್ಪ, ಸಹಾಯಕ ಕೃಷಿ ನಿದೇರ್ಶಕ, ಮಾಲೂರು
– ಎಂ.ರವಿಕುಮಾರ್