ಪಣಂಬೂರು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್‌ಎಚ್ 66ರ ಸುರತ್ಕಲ್‌ನ ಟೋಲ್ ಗೇಟ್ ತೆರವು ಕುರಿತಾಗಿ ಸ್ಪಷ್ಟ ನಿರ್ಧಾರ ಹಾಗೂ ದಿನಾಂಕ ಪ್ರಕಟಿಸಲು ಶುಕ್ರವಾರ ಪಣಂಬೂರಿನ ಎಸಿಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮತ್ತೂಮ್ಮೆ ವಿಫಲ ವಾಗಿರುವುದರಿಂದ ಅ. 18ರಂದು ಮುತ್ತಿಗೆ ನಡೆಯಲಿದೆ ಎಂದು ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸ್ಪಷ್ಟಪಡಿಸಿದೆ.
ಅ. 18ರ ಟೋಲ್ ಮುತ್ತಿಗೆ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರವಾಗಿ ಪಣಂಬೂರು ಪೊಲೀಸ್ ಉಪ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಹೋರಾಟಗಾರರು ತೆರವು ಬಗ್ಗೆ ಸ್ಪಷ್ಟ ದಿನವನ್ನು ತಿಳಿಸುವಂತೆ ಒತ್ತಾಯಿಸಿದರೂ ಅಧಿಕಾರಿಗಳು ತೆರವಿನ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.
ತೆರವು ಪ್ರಕ್ರಿಯೆಗೆ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿವೆ. ತೆರವುಗೊಳಿಸಲು ತೀರ್ಮಾನ ಆಗಿದೆ. ಇನ್ನು ಕೆಲವು ದಿನಗಳಲ್ಲಿ ತೆರವು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಲ್ಲಿಯವರಗೆ ಹೋರಾಟ ಕೈಬಿಡುವಂತೆ ಅಧಿಕಾರಿಗಳು ಹೋರಾಟ ಸಮಿತಿಯನ್ನು ವಿನಂತಿಸಿಕೊಂಡರು. ಇದಕ್ಕೆ ಹೋರಾಟ ಸಮಿತಿ ಒಪ್ಪಲಿಲ್ಲ.
ಕಳೆದ ಆರು ವರ್ಷಗಳಲ್ಲಿ ತೆರವು ಬಗ್ಗೆ ಹಲವು ಭರವಸೆಗಳನ್ನು ನೀಡಲಾಗಿದೆ. ಆದರೆ ಯಾವುದೂ ಜಾರಿಗೆ ಬಂದಿಲ್ಲ. ಈಗಲೂ ಭರವಸೆ ಜಾರಿಗೆ ಬರುತ್ತದೆ ಎಂಬ ವಿಶ್ವಾಸ ನಮಗಿಲ್ಲ. ಹಾಗಾಗಿ ಟೋಲ್ ಸಂಗ್ರಹ ಸ್ಥಗಿತಗೊಳ್ಳದೆ ಹೋರಾಟ ಹಿಂಪಡೆಯಲು ಸಾಧ್ಯವಿಲ್ಲ. ಟೋಲ್ ತೆರವುಗೊಳ್ಳುವುದಾದರೆ ಟೋಲ್ ಸಂಗ್ರಹವನ್ನು ತತ್‌ಕ್ಷಣ ಕೈಬಿಡಬೇಕು ಎಂದು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.
ಸಹಾಯಕ ಆಯುಕ್ತ ಮದನ್ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಎಸಿಪಿ ಮಹೇಶ್ ಕುಮಾರ್, ಹೆದ್ದಾರಿ ಪ್ರಾಧಿಕಾರದ ಯೋಜನ ನಿರ್ದೇಶಕ ಲಿಂಗೇಗೌಡ, ಹೋರಾಟ ಸಮಿತಿ ಅಧ್ಯಕ್ಷ ವೈ. ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬಳ್ಳಾರಿ ನಗರ ಪ್ರವೇಶಿಸಿದ ಭಾರತ್ ಜೋಡೊ ಯಾತ್ರೆ : ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಸಾಥ್