Advertisement

ಸುರತ್ಕಲ್‌: ಟೋಲ್‌ಗೇಟ್‌ ಇದ್ದಲ್ಲಿ ರಸ್ತೆಯ ಸ್ಥಿತಿ ಶೋಚನೀಯ!

10:56 PM Dec 01, 2022 | Team Udayavani |

ಸುರತ್ಕಲ್‌ : ಕೇಂದ್ರ ಸರಕಾರದ ಆದೇಶದ ಮೇರೆಗೆ ಸುರತ್ಕಲ್‌ ಟೋಲ್‌ಗೇಟನ್ನು ಬುಧವಾರ ಮಧ್ಯರಾತ್ರಿ (ಡಿ. 1)ಯಿಂದ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಸುರತ್ಕಲ್‌ ಟೋಲ್‌ ಗೇಟನ್ನು ರದ್ದುಗೊಳಿಸುವಂತೆ ಆಗ್ರಹಿಸಿ 6 ವರ್ಷಗಳಿಂದ ನಡೆಯುತ್ತಿದ್ದ ಸುದೀರ್ಘ‌ ಹೋರಾಟ ಹಾಗೂ 36 ದಿನಗಳ ಅಹೋರಾತ್ರಿ ಧರಣಿಗೆ ಮಂಗಳ ಹಾಡಲಾಗಿದೆ.

Advertisement

ಸುಂಕ ಸಂಗ್ರಹ ಕೇಂದ್ರಕ್ಕೆ ಬೀಗ ಹಾಕಲಾಗಿದೆ. ಹೆದ್ದಾರಿ ಪ್ರಾಧಿಕಾರದ ನಿಗಾ ಸಲಕರಣೆಗಳು, ಗುತ್ತಿಗೆದಾರರು ಸಂಬಂಧಪಟ್ಟ ವಸ್ತುಗಳನ್ನು ತೆರವು ಗೊಳಿಸುತ್ತಿದ್ದಾರೆ. ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 50ಕ್ಕೂ ಆಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ಗಲ್ಲಿ ರಸ್ತೆಯಂತಾದ ಹೆದ್ದಾರಿ!
ದುಬಾರಿ ಟೋಲ್‌ ಪಡೆಯಲಾಗು ತ್ತಿದ್ದರೂ ಇಲ್ಲಿನ ಟೋಲ್‌ ಕೇಂದ್ರದ ದುರಸ್ತಿಗೆ ಹೆದ್ದಾರಿ ಇಲಾಖೆ ಯಾವುದೇ ಮುತುವರ್ಜಿ ವಹಿಸದ ಕಾರಣ ಟೋಲ್‌ ಕೇಂದ್ರದ ಒಳಭಾಗದಲ್ಲಿ ಬೃಹತ್‌ ಗಾತ್ರ ಹೊಂಡಗುಂಡಿಗಳು, ಡಾಮರು ಎದ್ದು ಹೋಗಿ ಗಲ್ಲಿ ರಸ್ತೆ ಯಂತೆ ಮಾರ್ಪಟ್ಟಿದೆ. ಇನ್ನೊಂದೆಡೆ ಮಳೆ ನೀರು ನಿಲ್ಲದಂತೆ ಹಾಕಿದ್ದ ಇಂಟರ್‌ ಲಾಕ್‌ ಎದ್ದು ಹೋಗಿ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಆಹ್ವಾನಿಸುತ್ತಿದೆ. ಹೆದ್ದಾರಿಯಲ್ಲಿ ಧಾವಿಸಿ ಬರುವ ವಾಹನಗಳು ಇಲ್ಲಿ ಏಕಾಏಕಿ ಹಾಳಾಗಿರುವ ರಸ್ತೆಯಲ್ಲಿ ಅಪಘಾತ ಕ್ಕೀಡಾಗುವ ಆತಂಕ ನೆಲೆಸಿದೆ. ಟೋಲ್‌ ಸಂಗ್ರಹ ಬೂತ್‌ಗಳು ವಾಹನಗಳ ಹೊಗೆಯ ಕಾರಣದಿಂದ ಮುಚ್ಚಿಹೋಗಿ ಕಪ್ಪಾಗಿವೆ.

ಪ್ರಯಾಣ ದರ ಇಳಿಕೆಗೆ ಆಗ್ರಹ
ಟೋಲ್‌ ರದ್ದಾಗಿರುವುದರಿಂದ ಮಂಗಳೂರು – ಕಿನ್ನಿಗೋಳಿ – ಮೂಡುಬಿದಿರೆ ಮಾರ್ಗ ಹಾಗೂ ಮೂಲ್ಕಿ-ಪುನರೂರು ಆಗಿ ಹೋಗುವ ಬಸ್‌ಗಳಲ್ಲಿ ಯಾನ ದರ ಇಳಿಸ ಬೇಕೆಂದು ಕೂಗು ಎದ್ದಿದೆ. ಟೋಲ್‌ ದರ ವಿಧಿಸಿದ ವೇಳೆ ಖಾಸಗಿ ಬಸ್‌ ದರ 5 ರೂ.ಗಳಷ್ಟು ಹೆಚ್ಚಿಸಲಾಗಿತ್ತು.

ಟೋಲ್‌ಗೇಟ್‌ಗಳ ವಿವಾಹ!
ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ಸುರತ್ಕಲ್‌ ಟೋಲ್‌ಗೇಟ್‌ನ ವಿವಾಹ ನೆರವೇರಿದೆ. ಈ ಕುರಿತ ಆಮಂತ್ರಣ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಮಾಷೆಯಾಗಿ ಪರಿಣಮಿಸಿದೆ.

Advertisement

ವಿವಾಹ ಆಮಂತ್ರಣದಂತೆ ಮುದ್ರಿಸಿರುವ ಪತ್ರದಲ್ಲಿ “ಬಿಜೆಪಿ ಸರಕಾರದ ಕೃಪೆಯಿಂದ ಡಿ. 1ರಂದು ಸುರತ್ಕಲ್‌ ಎನ್‌ಐಟಿಕೆ ಬಳಿ ಆಕ್ರಮವಾಗಿದ್ದ “ಸುರತ್ಕಲ್‌ ಟೋಲ್‌ಗೇಟ್‌’ ಎಂಬ ವಧುವನ್ನು “ಹೆಜಮಾಡಿ ಟೋಲ್‌ಗೇಟ್‌’ ಎಂಬ ವರನೊಂದಿಗೆ ನರೇಂದ್ರ ಮೋದಿ ಸರಕಾರದ ಹೆದ್ದಾರಿ ಪ್ರಾಧಿಕಾರದ ಸಚಿವರಾದ ನಿತಿನ್‌ ಗಡ್ಕರಿ ಸಮ್ಮುಖದಲ್ಲಿ ನಳಿನ್‌ ಕುಮಾರ್‌ಕಟೀಲು ಅವರ ಮನವಿ ಮೇರೆಗೆ ವಿವಾಹ ಏರ್ಪಡಿಸಲಾಗಿದೆ. ತಾವುಗಳು ಬಂದು ಸುರತ್ಕಲ್‌ ಮತ್ತು ಹೆಜಮಾಡಿ ಟೋಲ್‌ ಸುಂಕವನ್ನು ಒಂದೇ ಕಡೆ ಪಾವತಿಸಿ ಶುಭ ಹಾರೈಸಬೇಕಾಗಿ ವಿನಂತಿ…’ ಎಂದು ಉಲ್ಲೇಖೀಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next