Advertisement

ಘಟಬಂಧನ್‌ ಛಿದ್ರ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‌ ರಾಜೀನಾಮೆ

06:35 AM Jul 27, 2017 | Team Udayavani |

ಪಟ್ನಾ/ಹೊಸದಿಲ್ಲಿ: ಬಿಹಾರದಲ್ಲಿ ಆಡಳಿತ ನಡೆಸುತ್ತಿದ್ದ “ಮಹಾ ಘಟಬಂಧನ್‌’ ಛಿದ್ರವಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ ನೀಡಿದ್ದಾರೆ. ನಿತೀಶ್‌ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾ ಸಿದರೆ, ಕಾಂಗ್ರೆಸ್‌ ಬೇಸರವಾಗಿದೆ ಎಂದಿದೆ.

Advertisement

ಉಪ ಮುಖ್ಯಮಂತ್ರಿ ಹಾಗೂ ಲಾಲು ಪ್ರಸಾದ್‌ ಪುತ್ರ ತೇಜಸ್ವಿ ಯಾದವ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ನಿತೀಶ್‌ ರಾಜೀನಾಮೆ ನೀಡಿದ್ದಾರೆ. ಆರೋಪ ಕೇಳಿಬಂದಾಗಲೆ ಕಳಂಕ ಮುಕ್ತನಾಗಿ ಬನ್ನಿ, ನಿಮ್ಮ ನಿಲುವೇನು ಎಂಬ ಬಗ್ಗೆ ಸಾರ್ವಜನಿಕವಾಗಿ ಹೇಳಿ ಎಂದು ಲಾಲು ಮತ್ತು ತೇಜಸ್ವಿ ಯಾದವ್‌ಗೆ ಸೂಚಿಸಲಾಗಿತ್ತು. ಆದರೆ ಲಾಲು ಆಗಲಿ, ತೇಜಸ್ವಿ ಯಾದವ್‌ ಆಗಲಿ ತನ್ನ ಮಾತಿಗೆ ಬೆಲೆ ನೀಡದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರಾಜೀನಾಮೆ ನೀಡಲಾಯಿತು ಎಂದು ನಿತೀಶ್‌ ಕುಮಾರ್‌ ಹೇಳಿದ್ದಾರೆ.

ನಿತೀಶ್‌ ರಾಜೀನಾಮೆ ನೀಡುತ್ತಿದ್ದಂತೆ, ಟ್ವೀಟಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಭ್ರಷ್ಟಾಚಾರ ವಿರುದ್ಧದ ನಿತೀಶ್‌ ಹೋರಾಟಕ್ಕೆ ಸ್ವಾಗತ’ ಎಂದಿದ್ದಾರೆ. ಇದಕ್ಕೆ ನಿತೀಶ್‌ ಕುಮಾರ್‌ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆಯೇ ದಿಲ್ಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಸಿತು. 

ಇಂದು ಪ್ರಮಾಣ: ನಿತೀಶ್‌ ಕುಮಾರ್‌ ಅವರಿಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಪತ್ರ ಕಳುಹಿಸಿದ ಹಿನ್ನೆಲೆಯಲ್ಲಿ ನಿತೀಶ್‌ ಗುರುವಾರ ಸಂಜೆ ಮತ್ತೆ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸ ಲಿದ್ದಾರೆ.

ಇದರೊಂದಿಗೆ ಬಿಹಾರದಲ್ಲಿ ಜೆಡಿಯು- ಬಿಜೆಪಿ ಸರಕಾರ ಮತ್ತೆ ಅಸ್ತಿತ್ವಕ್ಕೆ ಬರಲಿದೆ. ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರದ ಇತರ ಕೆಲವು ಸಚಿವರುಗಳು ಭಾಗವಹಿಸಲಿದ್ದಾರೆ.

Advertisement

ಇದಕ್ಕೂ ಮೊದಲು ಬಿಜೆಪಿ ಬೆಂಬಲದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, “ಇಲ್ಲ’ವೆಂದು ಹೇಳದ ನಿತೀಶ್‌, ಬಿಹಾರದ ಹಿತಕ್ಕಾಗಿ ಏನು ಬೇಕೋ ಅದನ್ನೇ ಮಾಡಲಾಗುತ್ತದೆ. ಮುಂದೆ ಏನಾಗುತ್ತದೆ ಎಂಬ ಬಗ್ಗೆ ಕಾದು ನೋಡಿ. ಏನು ಆಗಬೇಕೋ ಅದೇ ಆಗುತ್ತದೆ ಎಂದು ಹೇಳಿ ಹಳೆಯ ದೋಸ್ತಿ ಜತೆ ಹೋಗುವ ಬಗ್ಗೆ ಸುಳಿವು ನೀಡಿದ್ದರು. 

ಅಚ್ಚರಿಯ ಬೆಳವಣಿಗೆಯಲ್ಲಿ ಬುಧವಾರ ಜೆಡಿಯು ಮತ್ತು ಆರ್‌ಜೆಡಿ ಪಕ್ಷ ಗಳು ಪ್ರತ್ಯೇಕವಾಗಿ ಸಭೆ ನಡೆಸಿದ್ದವು. ಲಾಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೇಜಸ್ವಿ ರಾಜೀನಾಮೆ ಕೊಡುವುದು ಬೇಡ ಎಂಬ ನಿರ್ಧಾರ ತೆಗೆದುಕೊಳ್ಳ ಲಾಯಿತು. ಸಭೆಯ ಬಳಿಕ ಪ್ರತಿಕ್ರಿಯೆ ನೀಡಿದ ಲಾಲು ಪ್ರಸಾದ್‌  ನಮ್ಮ ಕಡೆಯಿಂದ ಯಾರೂ ರಾಜೀನಾಮೆ ಕೊಡಲ್ಲ ಎಂದು ಹೇಳಿದರು. ಇದಷ್ಟೇ ಅಲ್ಲ, ಬೇಕಾದರೆ ನಿತೀಶ್‌ ತೇಜಸ್ವಿ ಯಾದವ್‌ರನ್ನು ಸಂಪುಟ ದಿಂದ ವಜಾ ಮಾಡಲಿ ಎಂದು ಹೇಳಿದರು.

ನಿತೀಶ್‌ ರಾಜೀನಾಮೆ ಬಳಿಕ ಮಾತನಾಡಿದ ಲಾಲು, ಅವರ ವಿರುದ್ಧವೂ ಆರೋಪ ವಿಲ್ಲವೇ ಎಂದು ಹೇಳಿದರು. ಚುನಾವಣಾ ಕೇಂದ್ರದಲ್ಲಿÊನ ಮಹಿಳೆ ಸಾವಿನ ಕುರಿತಂತೆ ನಿತೀಶ್‌ಕುಮಾರ್‌ ವಿರುದ್ಧ ಕೊಲೆ ಆರೋಪವಿಲ್ಲವೇ? ಇದರಿಂದ ಅವರೂ ಮುಕ್ತರಾಗ ಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ಆರ್‌ಜೆಡಿ ದೊಡ್ಡ ಪಕ್ಷವಾಗಿದ್ದು, ಜನ ತೇಜಸ್ವಿ ಯಾದವ್‌ಗೆ ಬೆಂಬಲ ನೀಡಿದ್ದಾರೆ ಎಂದೂ ಹೇಳಿದರು.

ರಾಜೀನಾಮೆಗೆ ನಿರ್ಧಾರ: ಅತ್ತ ಲಾಲು ತಮ್ಮ ಶಾಸಕರ ಸಭೆ ನಡೆಸಿದರೆ, ಇತ್ತ ನಿತೀಶ್‌ಕುಮಾರ್‌ ತಮ್ಮ ನಿವಾಸದಲ್ಲಿ ಜೆಡಿಯು ಶಾಸಕರೊಂದಿಗೆ ಸಭೆ ನಡೆಸಿದರು. ಇದಾದ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿದ ಅವರು, ರಾಜ್ಯಪಾಲ ಕೇಸರಿನಾಥ್‌ ತ್ರಿಪಾಠಿ ಅವರಿಗೆ ರಾಜೀನಾಮೆ ಸಲ್ಲಿಸಿದರು. ಬಳಿಕ  ಮಾತನಾಡಿದ ಅವರು, ನಾನು ತೇಜಸ್ವಿಗೆ ರಾಜೀನಾಮೆ ಕೊಡುವಂತೆ ಸೂಚಿಸಿರಲೇ ಇಲ್ಲ. ಆದರೆ ಸಾರ್ವಜನಿಕವಾಗಿ ನಿಮ್ಮ ವಿರುದ್ಧವಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿ ಎಂದು ಹೇಳಿದ್ದೆ ಅಷ್ಟೆ. ಈ ಬಗ್ಗೆ ಅವರು ಯಾವುದೇ ತೀರ್ಮಾನ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ. ಇದಷ್ಟೇ ಅಲ್ಲ, ಮಹಾಘಟಬಂಧನ್‌ ಉಳಿಸುವ ಸಲುವಾಗಿ ಮೈತ್ರಿಕೂಟದಲ್ಲಿರುವ ಎಲ್ಲರ ಮನವೊಲಿಕೆಗೆ ಪ್ರಯತ್ನಿಸಿದ್ದೇನೆ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಜತೆಗೂ ಮಾತನಾಡಿದ್ದೇನೆ. ಆದರೆ ಯಾವುದೇ ಉಪಯೋಗವಾಗದೇ ಇರುವ ಹಿನ್ನೆಲೆಯಲ್ಲಿ ಕಡೆಗೆ ಈ ನಿರ್ಧಾರಕ್ಕೆ ಬರಲಾಯಿಕು ಎಂದು ಹೇಳಿದರು.

ಕಾಂಗ್ರೆಸ್‌ ಅಸಮಾಧಾನ: ಬಿಹಾರದಲ್ಲಿನ ಮಹಾಘಟಬಂಧನ್‌ನಲ್ಲಿನ ಬಿರುಕು ಸಂಬಂಧ ಮಾತನಾಡಿರುವ ಕಾಂಗ್ರೆಸ್‌, ನಿತೀಶ್‌ ನಿರ್ಧಾರ ಅಸಮಾಧಾನ ತಂದಿದೆ ಎಂದಿದ್ದಾರೆ. ಪಕ್ಷದ ವಕ್ತಾರ ರಣದೀಪ್‌ ಸುಜೇìವಾಲ ಅವರು, ಮಹಾಘಟಬಂಧನ್‌ಗೆ ಬಿಹಾರದ ಜನತೆ ಐದು ವರ್ಷಗಳಿಗಾಗಿ ಆಶೀರ್ವದಿಸಿದೆ. ಆದರೆ 2 ವರ್ಷಗಳಲ್ಲೇ ಇದು ಮುರಿದು ಹೋಗಿದ್ದು ಬೇಸರ ತಂದಿದೆ. ನಿತೀಶ್‌ ಅವರ ಬಗ್ಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಭಾರಿ ಗೌರವವಿದೆ ಎಂದಿದ್ದಾರೆ.

ಬಿಜೆಪಿಯಿಂದ ಬೆಂಬಲ ಘೋಷಣೆ
ನಿತೀಶ್‌ ಕುಮಾರ್‌ ರಾಜೀನಾಮೆ ನೀಡುತ್ತಿದ್ದಂತೆ, ಪ್ರಧಾನಿ ಮೋದಿ ಅವರ ಪ್ರಶಂಸೆಯಿಂದ ಮೊದಲ್ಗೊಂಡು, ಬಿಜೆಪಿ ಪಾಳಯದಲ್ಲಿ ಉತ್ಸಾಹದಾಯಕ ಚಟುವಟಿಕೆಗಳೇ ನಡೆದವು. ತತ್‌ಕ್ಷಣವೇ ದಿಲ್ಲಿಯಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆಸಿ, ಬಿಹಾರದಲ್ಲಿ ಮಧ್ಯಾಂತರ ಚುನಾವಣೆಗೆ ಹೋಗುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಯಿತು. ಅಲ್ಲದೆ ಮೂರು ಮಂದಿಯ ಸಮಿತಿಯೊಂದನ್ನು ರಚಿಸಿ ಬಿಹಾರದಲ್ಲಿರುವ ಬಿಜೆಪಿ ಶಾಸಕರ ಜತೆ ಚರ್ಚಿಸುವಂತೆ ಸೂಚಿಸಲಾಗಿದೆ. ಈ ಮಧ್ಯೆ, ಪಟ್ನಾದಲ್ಲಿ  ಮಾತನಾಡಿದ ಬಿಜೆಪಿ ನಾಯಕ ಸುಶೀಲ್‌ ಮೋದಿ, ಜೆಡಿಯುಗೆ ಬೆಂಬಲ 
ನೀಡಲು ನಿರ್ಧರಿಸಲಾಗಿದೆ ಎಂದರಲ್ಲದೆ ಈ ಬಗ್ಗೆ ರಾಜ್ಯಪಾಲರಿಗೂ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next