ಹೊಸದಿಲ್ಲಿ: ಕಾಂಗ್ರೆಸ್ ಕರೆದಿದ್ದ ಐ.ಎನ್.ಡಿ.ಐ.ಎ. ಒಕ್ಕೂಟದ ಸಭೆಯನ್ನು ಮುಂದೂಡಿದೆ. ಇದರ ಬೆನ್ನಲ್ಲೇ ವಿಪಕ್ಷಗಳ ಒಕ್ಕೂಟದಲ್ಲಿ ಮತ್ತೂಂದು ಬಿಕ್ಕಟ್ಟು ಏರ್ಪಟ್ಟಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆಪ ಪ್ರದರ್ಶನ ತೋರಿದ ಬೆನ್ನಲ್ಲೇ ವಿಪಕ್ಷಗಳ ಒಕ್ಕೂಟದಲ್ಲಿ ಪ್ರಧಾನಿ ರೇಸ್‌ಗೆ ಪೈಪೋಟಿ ಆರಂಭ ವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಬೇಕು ಎಂದು ವಿಪಕ್ಷಗಳ ಒಕ್ಕೂಟಕ್ಕೆ ಜೆಡಿಯು ಆಗ್ರಹಿಸಿದೆ. ಇನ್ನೊಂದೆಡೆ, ಪ್ರಧಾನಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಪರವಾಗಿ ಟಿಎಂಸಿ ಬ್ಯಾಟಿಂಗ್ ಮಾಡಿದೆ.
“ಪ್ರಧಾನಿ ಅಭ್ಯರ್ಥಿಯ ಘೋಷಣೆಯೊಂದಿಗೆ ಚುನಾವಣೆಯನ್ನು ಎದುರಿಸಬೇಕೆ ಅಥವಾ ಬೇಡವೇ ಎಂಬುದನ್ನು ಐ.ಎನ್.ಡಿ.ಐ.ಎ. ಒಕ್ಕೂಟ ತೀರ್ಮಾನಿಸಲಿದೆ. ಆದರೆ ಪ್ರಧಾನಿ ಆಗಲು ನಿತೀಶ್ ಕುಮಾರ್ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ. ಅಭಿವೃದ್ಧಿ ಮತ್ತು ಸಾಮಾಜವಾದಿ ರಾಜಕಾರಣದಿಂದ ಖ್ಯಾತಿ ಪಡೆದಿರುವ ನಿತೀಶ್ ಕುಮಾರ್, 2024ರ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದ್ದಾರೆ. ಅಲ್ಲದೇ ಜಾತಿವಾರು ಗಣತಿ ಪ್ರಕಟಿಸುವ ಧೈರ್ಯ ತೋರಿದ ನಾಯಕರಾಗಿದ್ದಾರೆ’ ಎಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಹೇಳಿದ್ದಾರೆ.
ಇನ್ನೊಂದೆಡೆ ಪ್ರಧಾನಿ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿ ಅವರ ಹೆಸರನ್ನು ಮುನ್ನೆಲೆಗೆ ತಂದಿರುವ ಟಿಎಂಸಿ, ಚುನಾವಣೆಗಳಲ್ಲಿ ಬಿಜೆಪಿಯನ್ನು ಸತತವಾಗಿ ಸೋಲಿಸುತ್ತಾ ಬಂದಿರುವ ಮಮತಾ ಬ್ಯಾನರ್ಜಿ ಅವರು, ಅಪಾರ ಆಡಳಿತದ ಅನುಭವ ಹೊಂದಿದ್ದಾರೆ. ಇಂಥವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಆಗ್ರಹಿಸಿದೆ.