Advertisement

Modi ಪಾದ ಸ್ಪರ್ಶಿಸಲು ಹೋದ ನಿತೀಶ್‌ ಕುಮಾರ್‌!; ಎಂದಿಗೂ  ಜತೆಗೇ ಇರುವೆ

12:51 AM Jun 08, 2024 | Team Udayavani |

ಹೊಸದಿಲ್ಲಿ: ನಾನು ಎಂದಿಗೂ ಮೋದಿ ಜತೆಗೇ ಇರುವೆ ಎಂದು ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ಎನ್‌ಡಿಎ ಸಭೆಯಲ್ಲಿ ಹೇಳಿದರು. ಕಳೆದ ಒಂದು ದಶಕದಲ್ಲಿ ಅವರು 6 ಬಾರಿ ಕೂಟಗಳನ್ನು ಬದಲಿಸಿದ್ದು, “ಪಲ್ಟಾ ಕುಮಾರ್‌’ ಎಂದು ಗೇಲಿಗೆ ಒಳಗಾಗಿದ್ದಾರೆ. ಹಾಗಾಗಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Advertisement

ಏನೇ ಆಗಲಿ ನಾವು ನಿಮ್ಮೊಂದಿಗೆ ಶಾಶ್ವತವಾಗಿ ಇರಲಿದ್ದೇವೆ. ಪ್ರಧಾನಿ ಹುದ್ದೆಗಾಗಿ ಸಂಯುಕ್ತ ಜನತಾ ದಳ ನರೇಂದ್ರ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಬೆಂಬಲಿಸುತ್ತದೆ. ನೀವು ರವಿವಾರ ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದೀರಿ. ನಾನಾದರೆ ಇಂದೇ(ಶುಕ್ರವಾರ) ನೀವು ಪ್ರಮಾಣ ವಚನ ಸ್ವೀಕರಿಸಬೇಕೆಂದು ಬಯಸುತ್ತೇನೆ. ಎಷ್ಟು ಸಾಧ್ಯವೋ ಅಷ್ಟು ಬೇಗ ನಿಮ್ಮ ಪ್ರಮಾಣ ವಚನ ಸ್ವೀಕಾರ ನಡೆಯಲಿ ಎಂದು ಹೇಳಿದರು.
ವಿಪಕ್ಷಗಳು ದೇಶಕ್ಕಾಗಿ ಯಾವುದೇ ಕೆಲಸವನ್ನು ಮಾಡಿಲ್ಲ. ಬಿಹಾರದ ಎಲ್ಲ ಬಾಕಿ ಕೆಲಸಗಳನ್ನು ಮಾಡಲಾಗುವುದು. ನಾವು ಎಲ್ಲರೂ ಒಂದಾಗಿದ್ದು ಮತ್ತು ಮೋದಿಯೊಂದಿಗೆ ನಾವೆಲ್ಲರೂ ಒಟ್ಟಾಗೆ ಕೆಲಸ ಮಾಡೋಣ ಎಂದು ಹೇಳಿದರು.

ಪಾದ ಸ್ಪರ್ಶಿಸಲು ಹೋದ ನಿತೀಶ್‌ ಕುಮಾರ್‌!
ಎನ್‌ಡಿಎ ಸಭೆಯನ್ನು ಭಾಷಣ ಮಾಡಿ ವಾಪಸ್‌ ತಮ್ಮ ಕುರ್ಚಿಯತ್ತ ಹೋಗುವಾಗ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ನರೇಂದ್ರ ಮೋದಿ ಅವರು ಕುಳಿತಿದ್ದ ಕುರ್ಚಿಯತ್ತ ತೆರಳಿ, ಮೋದಿ ಅವರ ಪಾದ ಸ್ಪರ್ಶಿಸಿ ನಮಸ್ಕರಿಸಲು ಮುಂದಾದರು. ಆಗ ಮೋದಿ ನಿತೀಶ್‌ ಅವರನ್ನು ತಡೆದು ಕೈಕುಲುಕಿ ಕಳುಹಿಸಿಕೊಟ್ಟರು.

ದೇಶಕ್ಕೆ ಸರಿಯಾದ ಟೈಮ್‌ನಲ್ಲಿ ಸರಿಯಾದ ನಾಯಕತ್ವ: ನಾಯ್ಡು
ಪ್ರಾದೇಶಿಕ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವುದರ ಜತೆಗೆ ಸರಕಾರವು ಸಮಾನಾಂತರವಾಗಿ ಸಾಗಬೇಕು. ಸಮಾಜದ ಎಲ್ಲ ಸ್ತರಗಳಿಗೆ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಟಿಡಿಪಿ ನಾಯಕ ಎನ್‌.ಚಂದ್ರಬಾಬು ನಾಯ್ಡು ಅವರು ಹೇಳಿದರು. ಎನ್‌ಡಿಎ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಇಂದು ಸರಿಯಾದ ಸಮಯದಲ್ಲಿ ಸರಿಯಾದ ನಾಯಕನನ್ನು ಹೊಂದಿದೆ ಎಂದು ಮೋದಿಯನ್ನು ಬಣ್ಣಿಸಿದರು. ಭಾರತಕ್ಕೆ ಇದೊಂದು ಅತ್ಯುತ್ತಮ ಅವಕಾಶವಾಗಿದ್ದು, ಒಂದು ವೇಳೆ ಈಗ ತಪ್ಪಿಸಿಕೊಂಡರೆ, ಶಾಶ್ವತವಾಗಿ ಅಭಿವೃದ್ಧಿಯ ಅವಕಾಶವನ್ನು ತಪ್ಪಿಸಿಕೊಳ್ಳಲಿದ್ದೇವೆ ಎಂದು ನಾಯ್ಡು ಹೇಳಿದರು.

ನಾವು ಮೋದಿ ಜತೆಗೇ ಇದ್ದೇವೆ: ಎಚ್‌ಡಿಕೆ
ನಾವು ಮೋದಿ ಅವರೊಂದಿಗೆ ಇದ್ದೇವೆ. ನಾವು ಎನ್‌ಡಿಎಯೊಂದಿಗೆ ಮಾತ್ರವೇ ಕೈಜೋಡಿಸುತ್ತಿದ್ದೇವೆ ಎಂದು ಜೆಡಿಎಸ್‌ ನಾಯಕ ಹಾಗೂ ಮಂಡ್ಯ ಕ್ಷೇತ್ರದ ನೂತನ ಸಂಸದ ಎಚ್‌. ಡಿ.ಕುಮಾರಸ್ವಾಮಿ ಹೇಳಿದರು. ಕೇವಲ ನಾನು ಮಾತ್ರವಲ್ಲ, ಅಭಿವೃದ್ಧಿಗೆ ಸಂಬಂಧಿಸಿದಂತೆ ಇಡೀ ದೇಶವೇ ಮೋದಿ ಅವರಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಇನ್ನೂ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಿದೆ ಎಂದು ಅವರು ತಿಳಿಸಿದರು. ನಾವು ಯಾವುದೇ ಬೇಡಿಕೆ ಇಟ್ಟಿಲ್ಲ. ಸ್ಥಿರ ಸರ‌ಕಾರ ಬೇಕು. ಹಾಗಾಗಿ ನಾವು ಅವರೊಂದಿಗೆ ಹೋಗುತ್ತಿದ್ದೇವೆ.

Advertisement

ಪವನ್‌ ತಂಗಾಳಿಯಲ್ಲ, ಬಿರುಗಾಳಿ: ಮೋದಿ ಬಣ್ಣನೆ
ಎನ್‌ಡಿಎ ಸಭೆಯ ವೇಳೆ ಮೋದಿ, ಆಂಧ್ರದ ಜನಸೇನಾ ನಾಯಕ ಹಾಗೂ ನಟ ಪವನ್‌ ಕಲ್ಯಾಣ್‌ ಅವರನ್ನು ಹಾಡಿ ಹೊಗಳಿದರು. ಭಾಷಣ ಮಾಡುತ್ತಿದ್ದಾಗ ತಮ್ಮ ಹತ್ತಿರವೇ ಇದ್ದ ಪವನ್‌ ಕಲ್ಯಾಣ್‌ ಅವರನ್ನು ಉದ್ದೇಶಿಸಿ, “ಪವನ್‌ ತಂಗಾಳಿಯಲ್ಲ, ಬಿರುಗಾಳಿ’ ಎಂದು ಬಣ್ಣಿಸಿದರು. ಎನ್‌ಡಿಎಗೆ ಆಂಧ್ರ ಪ್ರದೇಶವು ಅದ್ಭುತ ಗೆಲುವು ನೀಡಿದೆ ಎಂದು ಹೇಳಿದರು.

ಮೋದಿ, ಚಿರಾಗ್‌ ಪಾಸ್ವಾನ್‌ ಸಂತಸದ ಕ್ಷಣ
ಸಭೆಯಲ್ಲಿ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಮತ್ತು ಮೋದಿ ಸಂತಸದ ಕ್ಷಣ ಹಂಚಿಕೊಂಡ ಘಟನೆ ನಡೆಯಿತು. ಸಭೆಯಲ್ಲಿ ಚಿರಾಗ್‌ ತಮ್ಮ ಬೆಂಬಲ ಘೋಷಿಸಿ ವಾಪಸ್‌ ತಮ್ಮ ಆಸನದತ್ತ ತೆರಳುವಾಗ ಮೋದಿ ಹತ್ತಿರ ಬಂದು ಆಶೀರ್ವಾದ ಪಡೆಯಲು ಮುಂದಾದರು. ಆಗ ಮೋದಿ ಅವರನ್ನು ಕುಳಿತ ಲ್ಲಿಂದಲೇ ತಬ್ಬಿ, ಬೆನ್ನು ತಟ್ಟಿ, ಸಂತಸದ ಕ್ಷಣ ಹಂಚಿಕೊಂಡರು.

ನಕಲಿ ಸುದ್ದಿಗಳ ಜಾಲಕ್ಕೆ ಬೀಳಬೇಡಿ
ವಿಪಕ್ಷ ಒಕ್ಕೂಟ ಹರಡುವ ಸಚಿವಗಿರಿ ಮತ್ತು ಇಲಾಖೆಗೆಳ ಹಂಚಿಕೆ ಕುರಿತಾದ ನಕಲಿ ಸುದ್ದಿಗಳ ಜಾಲಕ್ಕೆ ಬೀಳಬೇಡಿ ಎಂದು ನರೇಂದ್ರ ಮೋದಿ ಅವರು ಎನ್‌ಡಿಎ ಸಂಸದರಿಗೆ ಹೇಳಿದರು. ಸಚಿವರ ನೇಮಕಾತಿ ಕುರಿತು ಸುಳ್ಳು ಸುದ್ದಿಗಳು ಹರಡಲಾ ಗುತ್ತಿದ್ದು, ನಂಬದಂತೆ ಸೂಚಿಸಿದರು. ಕೆಲವರು ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳಿ, ಹಣ ಪಡೆದುಕೊಳ್ಳಬಹುದು ಎಂದು ಹೇಳಿದರು.

ಶಿವಸೇನೆ ಹಾಗೂ ಬಿಜೆಪಿಯ ಸಂಬಂಧ ಫೆವಿಕಾಲ್‌ನಷ್ಟೇ ಗಟ್ಟಿ. ಅದ ರಲ್ಲಿ ಎಂದೂ ಬಿರುಕು ಬೀಳು ವು ದಿಲ್ಲ . ವಿರೋಧ ಪಕ್ಷಗಳು ಎಷ್ಟೇ ಸುಳ್ಳು, ಅಪಪ್ರಚಾರ ಮಾಡಿದರೂ, ಮೋದಿ ಅವರನ್ನು ಜನತೆ ಸ್ವೀಕರಿಸಿದ್ದಾರೆ.
-ಏಕನಾಥ್‌ ಶಿಂಧೆ, ಮಹಾರಾಷ್ಟ್ರ ಸಿಎಂ

ಮೋದಿ ಅವರೇ ನೀವು ಇಡೀ ದೇಶವನ್ನೇ ಪ್ರೇರೇಪಿಸುತ್ತಿದ್ದೀರಿ. ಎಲ್ಲಿಯವರೆಗೆ ನೀವು ಈ ದೇಶದ ಪ್ರಧಾನಮಂತ್ರಿ ಆಗಿರುವಿರೋ ಅಲ್ಲಿಯವರೆಗೂ ನಮ್ಮ ದೇಶ ಯಾರ ಮುಂದೆಯೂ ತಲೆ ಬಾಗುವುದಿಲ್ಲ.
-ಪವನ್‌ ಕಲ್ಯಾಣ್‌,ಜನಸೇನಾ ಪಕ್ಷದ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next