ಪಾಟ್ನಾ/ನವದೆಹಲಿ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ಜೆಡಿಯು ನಾಯಕ ನಿತೀಶ್ ಕುಮಾರ್ ರಾಜೀನಾಮೆ ನೀಡುವ ಸಾಧ್ಯತೆ ಅಧಿಕವಾಗಿದೆ. ಇದರ ಜತೆಗೆ ಕಾಂಗ್ರೆಸ್-ಆರ್‌ಜೆಡಿ ಜತೆಗೆ ಇರುವ ಮಹಾಮೈತ್ರಿ ಕೂಟಕ್ಕೆ ವಿದಾಯ ಹೇಳಿ ಬಿಜೆಪಿ ನೇತೃತ್ವದ ಎನ್‌ಡಿಎ ಜತೆಗೆ ಕೈಜೋಡಿಸಲಿದ್ದಾರೆ. ಬಿಜೆಪಿ ಮತ್ತು ಜಿತನ್‌ರಾಮ್ ಮಾಂಝಿ ಅವರ ಎಚ್‌ಎಎಂ ಪಕ್ಷಗಳ ನೆರವಿನೊಂದಿಗೆ ಹೊಸ ಸರ್ಕಾರ ರಚನೆಯ ಬಗ್ಗೆ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸುವ ಸಾಧ್ಯತೆಗಳು ಇವೆ. ಇದರ ಜತೆಗೆ ಫೆ.4ರಂದು ಬಿಹಾರದ ಬೇಟಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಾರ್ಯಕ್ರಮದಲ್ಲಿ ಅವರೂ ಭಾಗಿಯಾಗುವ ಸಾಧ್ಯತೆಗಳು ಇವೆ.
ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲೇಬೇಕು ಎಂಬ ಹಟದಿಂದ ಕಾಂಗ್ರೆಸ್ ರಚಿಸಿರುವ ಇಂಡಿಯಾ ಮೈತ್ರಿಕೂಟ ಛಿದ್ರಗೊಳ್ಳುವತ್ತ ಸಾಗಿದೆ.
ಬಿಹಾರದಲ್ಲಿ ಸ್ಥಾನ ಹೊಂದಾಣಿಕೆ, ಮೈತ್ರಿಕೂಟದ ಸಂಚಾಲಕ ಸ್ಥಾನ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಒಕ್ಕೂಟದ ಅಧ್ಯಕ್ಷ ಎಂದು ಘೋಷಣೆ ಮಾಡಿರುವುದು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ನಿತೀಶ್ ಕುಮಾರ್ ಕಾಂಗ್ರೆಸ್ ಜತೆಗೆ ಮುನಿಸಿಕೊಂಡಿದ್ದರು. ಅದಕ್ಕೆ ಪೂರಕವಾಗಿ ಆರ್‌ಜೆಡಿಯ ಜತೆಗೆ ಕೂಡ ಭಿನ್ನಾಭಿಪ್ರಾಯವನ್ನು ಅವರು ಹೊಂದಿದ್ದರು.
ಬುಧವಾರ ನಡೆದಿದ್ದ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರು ವಂಶಪಾರಂಪರ್ಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಿಂದ ಕ್ರುದ್ಧಗೊಂಡಿದ್ದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು, ಕೆಲವರು ತಮ್ಮಲ್ಲಿರುವ ಕೊರತೆಗಳನ್ನು ಮುಚ್ಚಿಟ್ಟು ಮತ್ತೂಬ್ಬರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಇದರಿಂದ ಅವರು ಕ್ರುದ್ಧಗೊಂಡಿದ್ದರು. ಹೀಗಾಗಿ, ಮಹಾಮೈತ್ರಿಕೂಟದ ಜತೆಗಿನ ಮೈತ್ರಿ ಮುಕ್ತಾಯಗೊಳಿಸಲು ಮುಂದಾಗಿದ್ದಾರೆ.
ಬಿಜೆಪಿ ಆಕ್ರೋಶ: ನಿತೀಶ್ ಕುಮಾರ್ ವಿರುದ್ಧ ಟೀಕೆ ಮಾಡಿದ ಆರ್‌ಜೆಡಿ ನಾಯಕಿ ರೋಹಿಣಿ ಆಚಾರ್ಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
2025ರ ಅಕ್ಟೋಬರ್-ನವೆಂಬರ್‌ಗೆ ಮುಂದಿನ ಚುನಾವಣೆ :
ಬಿಹಾರ ವಿಧಾನಸಭೆಯ ಹಾಲಿ ಅವಧಿ ಮುಕ್ತಾಯಕ್ಕೆ ಇನ್ನೂ 2 ವರ್ಷಗಳು ಬಾಕಿ ಇವೆ. 2025ರ ಅಕ್ಟೋಬರ್- ನವೆಂಬರ್ ವೇಳೆಗೆ ಮುಂದಿನ ಚುನಾವಣೆ ನಡೆಯಲಿದೆ. 2022ರಲ್ಲಿ ಕೂಡ ಬಿಜೆಪಿ ಜತೆಗೆ ಮುನಿಸಿಕೊಂಡು ಕಾಂಗ್ರೆಸ್, ಆರ್‌ಜೆಡಿ ಸಖ್ಯ ಬೆಳೆಸಿದ್ದರು.