ಪಟ್ನಾ/ಮುಂಬಯಿ: ದೇಶದ ಹಲವು ಭಾಗಗಳಲ್ಲಿ ಕಂಡುಬರುತ್ತಿರುವ ಕೃಷಿಕರ ಸಮಸ್ಯೆಗಳಿಗೆ ಸಾಲ ಮನ್ನಾ ಮಾತ್ರವೇ ಪರಿಹಾರ ವಲ್ಲ ಎಂದು ಬಿಹಾರ ಸಿಎಂ ನಿತೀಶ್‌ಕುಮಾರ್ ಹೇಳಿದ್ದಾರೆ. ಕೇಂದ್ರದ ಎನ್‌ಡಿಎ ಸರಕಾರವು ನೀಡಿರುವ ಆಶ್ವಾಸನೆಯಂತೆ ರೈತರಿಗೆ ಉತ್ಪಾದನಾ ವೆಚ್ಚ ಮತ್ತು ಕನಿಷ್ಠ ಬೆಂಬಲ ಬೆಲೆ ನೀಡಿದರೆ ಕೃಷಿಕರ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದಿದ್ದಾರೆ ನಿತೀಶ್. ಲೋಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶಾದ್ಯಂತ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ವಲಯದ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿದೆ. ಆದರೆ, ರೈತರು ತಾವು ಬೆಳೆದ ಬೆಳೆಗೆ ನ್ಯಾಯಯುತವಾದ ದರವನ್ನು ಪಡೆಯುತ್ತಿಲ್ಲ. ಸಮಸ್ಯೆಯಿರುವುದು ಇಲ್ಲಿ. ಸಾಲ ಮನ್ನಾ ಮಾಡಿದಾಕ್ಷಣ ಎಲ್ಲ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಕೇಂದ್ರ ಸರಕಾರವು ರೈತರ ಬೆಳೆಗಳ ಉತ್ಪಾದನಾ ವೆಚ್ಚ ಮತ್ತು ಶೇ.50ರಷ್ಟು ಬೆಂಬಲ ಬೆಲೆ ನೀಡಿದರೆ ಸಮಸ್ಯೆಯೇ ಇರುವುದಿಲ್ಲ’ ಎಂದು ಹೇಳಿದ್ದಾರೆ.
ಶ್ರೀಮಂತರಿಗಿಲ್ಲ ಮನ್ನಾ
ಏತನ್ಮಧ್ಯೆ, ಮಹಾರಾಷ್ಟ್ರ ಸರಕಾರ ಘೋಷಿಸಿರುವ ರೈತರ ಸಾಲ ಮನ್ನಾದಲ್ಲಿ ಶ್ರೀಮಂತ ರೈತರನ್ನು ಹೊರಗಿಡುವ ಸಾಧ್ಯತೆಯಿದೆ ಎಂದು ಹಿರಿಯ ಸಚಿವರೊಬ್ಬರು ಸೋಮವಾರ ಮಾಹಿತಿ ನೀಡಿದ್ದಾರೆ. ಸರಕಾರವು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಿದ್ದು, ಸಾಲ ಮನ್ನಾ ಯೋಜನೆ ಅನುಷ್ಠಾನ ಕುರಿತು ಆ ಸಮಿತಿಯೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಶ್ರೀಮಂತ ರೈತರನ್ನು ಸಾಲ ಮನ್ನಾ ವ್ಯಾಪ್ತಿಯಿಂದ ಹೊರಗಿಡಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ.