ನವದೆಹಲಿ: ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಲ್ಲಿ ನಡೆದ ಜೆಡಿಯು ಕಾರ್ಯಕಾರಿಣಿ ಸಭೆಯಲ್ಲಿ ಲಾಲನ್ ಸಿಂಗ್ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದ್ದು ಅವರ ರಾಜೀನಾಮೆಯನ್ನು ಪಕ್ಷವೂ ಅಂಗೀಕರಿಸಿದೆ ಎನ್ನಲಾಗಿದೆ.
ಲಾಲನ್ ಸಿಂಗ್ ರಾಜೀನಾಮೆಯಿಂದ ತೆರವಾದ ತೆರವಾದ ಅಧ್ಯಕ್ಷ ಸ್ಥಾನವನ್ನು ನಿತೀಶ್ ಕುಮಾರ್ ಅವರೇ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಜನತಾ ದಳ (ಯುನೈಟೆಡ್) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಲಾಲನ್ ಸಿಂಗ್ ಅವರು ಹುದ್ದೆಯಿಂದ ಕೆಳಗಿಳಿದ ಕೆಲವೇ ನಿಮಿಷಗಳಲ್ಲಿ ನಿತೀಶ್ ಕುಮಾರ್ ಅವರನ್ನು ಪಕ್ಷದ ಉನ್ನತ ಹುದ್ದೆಗೆ ನೇಮಿಸಲಾಯಿತು.
ಇದನ್ನೂ ಓದಿ: Nina Singh: ಸಿಐಎಸ್‌ಎಫ್‌ನ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ನೀನಾ ಸಿಂಗ್ ನೇಮಕ
ಇಂದು ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭವಾದ ನಂತರ ಸ್ವತಃ ಲಾಲನ್ ಸಿಂಗ್ ಅವರು ಅಧ್ಯಕ್ಷ ಸ್ಥಾನವನ್ನು ತೊರೆಯಲು ಬಯಸುವುದಾಗಿ ಹೇಳಿದ್ದಾರೆ. ಈ ಜವಾಬ್ದಾರಿಯನ್ನು ಬೇರೆಯವರು ನಿಭಾಯಿಸಬೇಕು ಎಂಧು ಕೇಳಿಕೊಂಡಿದ್ದಾರೆ. ಇದಾದ ಬಳಿಕ ನಿತೀಶ್ ಕುಮಾರ್ ಅವರನ್ನು ಜೆಡಿಯು ಅಧ್ಯಕ್ಷರನ್ನಾಗಿ ಮಾಡುವಂತೆ ಪಕ್ಷದ ಸದಸ್ಯರು ಮನವಿ ಮಾಡಿದ್ದಾರೆ ಪಕ್ಷದ ಸದಸ್ಯರ ಮನವಿ ಮೇರೆಗೆ ನಿತೀಶ್ ಕುಮಾರ್ ಈ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಆಲೋಚನೆಯನ್ನು ಮಾಡಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ವಾರದಿಂದ ಜೆಡಿಯುನಲ್ಲಿ ಅಧ್ಯಕ್ಷರ ರಾಜೀನಾಮೆ ಸುದ್ದಿ ಹರಿದಾಡುತ್ತಿದ್ದು ಶುಕ್ರವಾರ ಇದಕ್ಕೆ ತೆರೆ ಬಿದ್ದಿದೆ.
ಲಾಲನ್ ಸಿಂಗ್ ಅವರು ಸದ್ಯ ಪಕ್ಷದಲ್ಲಿಯೇ ನಾಯಕರಾಗಿ ಸಂಘಟನೆಯನ್ನು ಮುನ್ನಡೆಸುವ ಕೆಲಸ ಮಾಡಲಿದ್ದಾರೆ. ಅವರು ತಮ್ಮ ಸಂಸದೀಯ ಕ್ಷೇತ್ರದಲ್ಲೇ ಚುನಾವಣಾ ಸಿದ್ಧತೆಗಳನ್ನು ನೋಡಿಕೊಳ್ಳುತ್ತಾರೆ ಎನ್ನಲಾಗಿದೆ.
ಎರಡು ಜವಾಬ್ದಾರಿ ಹೊತ್ತುಕೊಂಡ ನಿತೀಶ್ ಕುಮಾರ್:
ಇಂದಿನ ಬೆಳವಣಿಗೆಯ ಬಳಿಕ ನಿತೀಶ್ ಕುಮಾರ್ ಮುಖ್ಯಮಂತ್ರಿ ಜತೆಗೆ ಪಕ್ಷದ ಅಧ್ಯಕ್ಷರ ಪಾತ್ರ ನಿರ್ವಹಿಸಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಪಕ್ಷದ ನೂತನ ಅಧ್ಯಕ್ಷರಾಗಿ ನಿತೀಶ್ ಕುಮಾರ್ ಅವರನ್ನು ಔಪಚಾರಿಕವಾಗಿ ಘೋಷಿಸಲಾಗುವುದು ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ. ನಿತೀಶ್ ಅಧ್ಯಕ್ಷರಾಗುವ ಸುದ್ದಿ ತಿಳಿದ ನಂತರ ಜೆಡಿಯು ಕಾರ್ಯಕರ್ತರು ತುಂಬಾ ಉತ್ಸುಕರಾಗಿದ್ದಾರೆ ಎಂದ ಅವರು ಲಾಲನ್ ಸಿಂಗ್ ಮತ್ತು ನಿತೀಶ್ ಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.