ಪಾಟ್ನ:ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ರಾಜ್ಯದ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಕೆಂಡಾಮಂಡಲರಾದ ಘಟನೆ ನಡೆದಿದೆ.
“ಇಡೀ ದೇಶ, ಜಗತ್ತು ಸೇರಿದಂತೆ ಎಷ್ಟು ಪ್ರದೇಶಗಳಲ್ಲಿ ಪ್ರವಾಹ ಬಂದಿಲ್ಲ ಹೇಳಿ? ಪಾಟ್ನದಲ್ಲಿ ಮಾತ್ರ ಮಳೆ, ಪ್ರವಾಹದಿಂದ ಸಮಸ್ಯೆಯಾಗಿದೆಯಾ? ಅಮೇರಿಕದಲ್ಲಿ ಏನಾಯಿತು? ಮುಂಬೈಯಲ್ಲಿ ಏನಾಯ್ತು ಅಂತ ಪತ್ರಕರ್ತರನ್ನು ಮರುಪ್ರಶ್ನಿಸಿರುವುದಾಗಿ ವರದಿ ತಿಳಿಸಿದೆ.
ರಾಜ್ಯದಲ್ಲಿನ ಅನಾಹುತ, ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ರಕ್ಷಣಾ ಕಾರ್ಯ ಕೂಡಾ ಮುಂದುವರಿದಿದೆ. ಈ ಬಗ್ಗೆ ಏನೂ ಗೊತ್ತಿಲ್ಲದೆ ಪ್ರಶ್ನಿಸಲು ಹೋಗಬಾರದು ಎಂದು ನಿತೀಶ್ ಕಿಡಿಕಾರಿದರು.
ಬಿಹಾರದಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಈವರೆಗೆ 42 ಮಂದಿ ಸಾವನ್ನಪ್ಪಿದ್ದಾರೆ. ಒಂಬತ್ತು ಜನರು ಗಾಯಗೊಂಡಿದ್ದಾರೆ. ಪಾಟ್ನದಲ್ಲಿ ಅತೀ ಹೆಚ್ಚು ಹಾನಿ ಸಂಭವಿಸಿದೆ. ರಾಜ್ಯದ ಹಲವು ನಗರಗಳು ಸಂಪೂರ್ಣ ಜಲಾವೃತವಾಗಿದೆ.
ರಾಜೇಂದ್ರ ನಗರದಲ್ಲಿ ತುಂಬಿಕೊಂಡಿರುವ ನೀರನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಎಲ್ಲಾ ಇಲಾಖೆಗಳಿಗೂ ತ್ವರಿತ ಗತಿಯಲ್ಲಿ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ. ನೀರು ಹೊರಬಿಡಲು ಬೇಕಾದ ಹೆಚ್ಚುವರಿ ಪಂಪ್ ಗಳಿಗಾಗಿ ಬೇಡಿಕೆ ಇಡಲಾಗಿದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದು ನಿತೀಶ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು.