ಪಾಟ್ನಾ: ಜೆಡಿಯುನ ಹೊಸ ಅಧ್ಯಕ್ಷರನ್ನಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಪ್ತ, ರಾಜ್ಯಸಭಾ ಸದಸ್ಯ ರಾಮಚಂದ್ರ ಪ್ರಸಾದ್ ಸಿಂಗ್ (ಆರ್.ಸಿ.ಪಿ)ಅವರನ್ನು ನೇಮಕ ಮಾಡಲಾಗಿದೆ.
ಪಾಟ್ನಾದಲ್ಲಿ ಭಾನುವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಿಂಗ್ ಅವರ ನೇಮಕಕ್ಕೆ ಖುದ್ದು ನಿತೀಶ್ ಕುಮಾರ್ ಅವರೇ ಸೂಚನೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಮಾತನಾಡಿದ ನಿತೀಶ್ ಮುಂದಿನ ಹಂತದಲ್ಲಿ ಮುಖ್ಯಮಂತ್ರಿಯಾಗುವ ಆಸೆ ಇಲ್ಲ. ಜನರೇ ಮುಂದಿನ ದಿನಗಳಲ್ಲಿ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಕಳೆದು ಎರಡು ತಿಂಗಳು ಕಳೆಯುವಷ್ಟರಲ್ಲಿಯೇ ಜೆಡಿಯು ಅಧ್ಯಕ್ಷ ಸ್ಥಾನದಲ್ಲಿ ಬದಲು ಮಾಡಲಾಗಿದೆ. ಈ ಬೆಳವಣಿಗೆ ಮೂಲಕ ಬಿಜೆಪಿ-ಜೆಡಿಯು ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಅಂಶ ಕಾಣುವಂತಾಗಿದೆ. ಉತ್ತರ ಪ್ರದೇಶ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ರಾಮಚಂದ್ರ ಪ್ರಸಾದ್ ಸಿಂಗ್ 23 ವರ್ಷಗಳಿಂದ ನಿತೀಶ್ ಕುಮಾರ್ ಆಪ್ತರಾಗಿದ್ದಾರೆ.
ಕಾರ್ಯಕಾರಿಣಿ ಬಳಿಕ ಮಾತನಾಡಿದ ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಬಿಜೆಪಿ ಹೆಸರು ಉಲ್ಲೇಖೀಸದೆ, ಲವ್ ಜಿಹಾದ್ ಬಗ್ಗೆ ದೇಶದಲ್ಲಿ ಅಸೂಯೆಯ ವಾತಾವರಣ ಮೂಡಿಸಲಾಗುತ್ತದೆ ಎಂದಿದ್ದಾರೆ.