Advertisement
ಪಟ್ನಾ/ಹೊಸದಿಲ್ಲಿ: ಮಹಾಮೈತ್ರಿ ಮುರಿದು ಬಿಜೆಪಿ ಜತೆಗೆ ಸೇರಿಕೊಂಡು ಸರಕಾರ ರಚನೆ ಮಾಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ರಮ ಜೆಡಿಯು ನಾಯಕ ಶರದ್ ಯಾದವ್‌ಗೆ ಅತೃಪ್ತಿ ತಂದಿದೆ. ಇಷ್ಟು ಮಾತ್ರವಲ್ಲ ಪಕ್ಷದ ಇಬ್ಬರು ಹಿರಿಯ ಸಂಸದರೂ ಬಹಿರಂಗವಾಗಿಯೇ ಟೀಕಿಸಿದ್ದಾರೆ. ಹಲವು ದಿನಗಳಿಂದ ಬೆಳವಣಿಗೆ ಮೇಲೆ ನಿಗಾ ಇರಿಸಿದ್ದ ಶರದ್ ಯಾದವ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿತೀಶ್ ಕುಮಾರ್ ಮತ್ತು ಸುಶೀಲ್‌ಕುಮಾರ್ ಮೋದಿ ಪಟ್ನಾದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಹೊಸದಿಲ್ಲಿಯಲ್ಲಿ ಶರದ್ ಯಾದವ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
Related Articles
ಮಹಾ ಮೈತ್ರಿ ಕೂಟ ಮುರಿದ ನಿತೀಶ್ ಕುಮಾರ್ ಕ್ರಮವನ್ನು ಅವಕಾಶವಾದಿತನ ಎಂದು ಹರಿ ಹಾಯ್ದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ರಾಜ್ಯಪಾಲರ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಬಿಜೆಪಿ ವಿರುದ್ಧ ನಿತೀಶ್ ಹೇಳಿದ್ದ ಮಾತುಗಳೆಲ್ಲ ಸುಳ್ಳು ಎಂದು ಈಗ ಸಾಬೀತಾಗಿದೆ. ತಮ್ಮ ಹಾಗೂ ಕುಟುಂಬದ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳು ನಡೆಸಿದ ದಾಳಿಯೆಲ್ಲವೂ ಪೂರ್ವ ನಿರ್ಧರಿತ ಎಂದು ಆರೋಪಿಸಿದ್ದಾರೆ. ಕೋಮುವಾದಿ ಶಕ್ತಿಗಳಿಗೆ ಎದುರಾಗಿ ಬಿಹಾರದ ಜನರು ನೀಡಿದ್ದ ತೀರ್ಪಿಗೆ ವಂಚನೆ ಮಾಡಿದ್ದಾರೆ ಎಂದು ಅವರು ಖಾರವಾಗಿ ನುಡಿದಿದ್ದಾರೆ.
Advertisement
ಅವಕಾಶವಾದಿತನ, ಮೋಸ ಎಂದ ಕಾಂಗ್ರೆಸ್ಇತ್ತ ಕಾಂಗ್ರೆಸ್ ಪಾಳಯವೂ ನಿತೀಶ್ ವಿರುದ್ಧ ವ್ಯಾಪಕ ಟೀಕಾ ಪ್ರಹಾರ ನಡೆಸಿದ್ದು, ನಿತೀಶ್ ಅವಕಾಶವಾದಿತನ ರಾಜಕೀಯ ಮಾಡಿದ್ದಾರೆ ಮತ್ತು ಬಿಹಾರದ ಜನರ ತೀರ್ಮಾನಕ್ಕೆ ಮೋಸ ಮಾಡಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಕರಾಳ ದಿನ ಎಂದು ಬಣ್ಣಿಸಿದೆ. ಈ ಬಗ್ಗೆ ಹೇಳಿಕೆ ನೀಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ, ;ದೊಡ್ಡ ದೊಡ್ಡ ಮಾತುಗಳು, ಮತ್ತು ಪ್ರಾಮಾಣಿಕತೆಯ ಮಾತುಗಳೆಲ್ಲ ಈಗ ಬೆತ್ತಲಾಗಿದೆ. ಯಾವುದೇ ರೀತಿಯಲ್ಲಾದರೂ, ಎಷ್ಟೇ ವೆಚ್ಚಾದರೂ ಅಧಿಕಾರ ಹಿಡಿಯಬೇಕೆನ್ನುವ ನೀತಿ ಇದಾಗಿದೆ’ ಎಂದು ಹರಿಹಾಯ್ದಿದ್ದಾರೆ. ಬಿಜೆಪಿ ವಿರುದ್ಧ ಬಿಹಾರ ಜನ ಚುನಾವಣೆಯಲ್ಲಿ ತೀರ್ಮಾನ ನೀಡಿದ್ದು, ಈಗ ಮತ್ತೆ ಅವರೊಂದಿಗೆ ಜೆಡಿಯು ಅಧಿಕಾರ ಹಿಡಿದಿರುವುದು ದೊಡ್ಡ ರಾಜಕೀಯ ಸಂಚು ಎಂದು ಅವರು ಬಣ್ಣಿಸಿದ್ದಾರೆ. ಬಿಹಾರ ಹಿತಾಸಕ್ತಿಗಾಗಿ ಮೈತ್ರಿ
ಬಿಹಾರದ ಹಿತಾಸಕ್ತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಯೇ ಕಾಂಗ್ರೆಸ್-ಆರ್‌ಜೆಡಿ ಮೈತ್ರಿಗೆ ವಿದಾಯ ಹೇಳಬೇಕಾಯಿತು. ಬಿಜೆಪಿ ಜತೆಗೆ ಸೇರಬೇಕಾಯಿತು ಎಂದು ಮುಖ್ಯಮಂತ್ರಿ ನಿತೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದಾಗಿ ರಾಜ್ಯದ ಅಭಿವೃದ್ಧಿಯೇ ಆಗಲಿದೆ ಎಂದಿದ್ದಾರೆ. ಪ್ರಮಾಣ ಸ್ವೀಕಾರದ ಬಳಿಕ ಮಾತನಾಡಿದ ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿಲ್ಲ. ಸಂಬಂಧಿಸಿದ ಎಲ್ಲರ ಜತೆಗೂ ಮಾತುಕತೆ ನಡೆಸಿಯೇ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಶರದ್ ಯಾದವ್ ಮತ್ತು ಇತರ ಜೆಡಿಯು ನಾಯಕರು ಅತೃಪ್ತಿ ಹೊಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಾತುಗಳು ಮಹತ್ವ ಪಡೆದಿವೆ. ರಾಹುಲ್ ಗಾಂಧಿ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ನಿತೀಶ್ ಅವರಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುವುದಾಗಿ ಹೇಳಿದ್ದಾರೆ. ಲಾಲು ಯಾದವ್ ವಿರುದ್ಧ ಇ.ಡಿ ಕೇಸು
ನೂತನ ಮೈತ್ರಿಕೂಟ ಸರಕಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಜಾರಿ ನಿರ್ದೇಶನಾಲಯ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಡಿಯಲ್ಲಿ ಕೇಸು ದಾಖಲಿಸಿದೆ. ಯುಪಿಎ ಅವಧಿಯಲ್ಲಿ ಲಾಲು ರೈಲ್ವೆ ಸಚಿವರಾಗಿದ್ದ ವೇಳೆ ಇಬ್ಬರು ಉದ್ಯಮಿಗಳಿಗೆ ಹೋಟೆಲ್ ನಡೆಸಲು ಪರವಾನಿಗಿ ನೀಡಿದ್ದಕ್ಕೆ ಪ್ರತಿಯಾಗಿ ಅವರಿಗೆ ಜಮೀನು ನೀಡಲಾಗಿತ್ತು ಎಂಬ ಆರೋಪದಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ 8 ಸಾವಿರ ಕೋಟಿ ರೂ. ಮೌಲ್ಯದ ಭೂ ಹಗರಣದಲ್ಲಿ ಪುತ್ರಿ ಮಿಸಾ ಭಾರತಿ ಅವರಿಗೂ ನೋಟಿಸ್ ನೀಡಲಾಗಿದ್ದು, ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿದ ಆರೋಪಗಳನ್ನು ಮಾಡಲಾಗಿದೆ. ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಇಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ
2013ರಲ್ಲಿ ಬಿಜೆಪಿಯ ‘ಪ್ರಭಾವಿ’ ನಾಯಕ, ಮೋದಿ ಅವರನ್ನು ಬದ್ಧ ವೈರಿಯಂತೆ ಬಿಂಬಿಸಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಈಗ ಅದೇ ಮೋದಿಯವರ ಆಪ್ತ ಮಿತ್ರ. 2013ರಲ್ಲಿ ಬಿಜೆಪಿ ಜತೆಗಿನ 17 ವರ್ಷಗಳ ಸಖ್ಯ ಮುರಿದುಕೊಂಡ ನಿತೀಶ್, ಮೂಲ ತತ್ವಗಳೊಂದಿಗೆ ರಾಜಿಯಾಗಲು ಸಾಧ್ಯವೇ ಇಲ್ಲ ಎಂದಿದ್ದರು. ಲಾಲುರನ್ನು ‘ಶೈತಾನ್’, ನನ್ನನ್ನು ‘ಅಹಂಕಾರಿ’ ಎಂದು ಮೋದಿ ಕರೆದಿದ್ದಾರೆ. ಇದು ಪ್ರಧಾನಿಯಾದವರಿಗೆ ಶೋಭೆ ತರುವುದಿಲ್ಲ ಎಂದು 2015ರಲ್ಲಿ ಹರಿಹಾಯ್ದಿದ್ದರು. ನಂತರ ‘ಸಂಘ’ ಮುಕ್ತ ಭಾರತಕ್ಕಾಗಿ ಬಿಜೆಪಿಯೇತರ ಪಕ್ಷಗಳು ಒಂದಾಗಬೇಕು ಎಂದು 2016ರಲ್ಲಿ ಕರೆ ನೀಡಿದ್ದ ನಿತೀಶ್, ಅದೇ ಬಿಜೆಪಿ (ಮೋದಿ) ಜತೆ ಕೈಜೋಡಿಸಿದ್ದಾರೆ. ‘ರಾಜಕೀಯದಲ್ಲಿ ಯಾರೂ ಮಿತ್ರರಲ್ಲ; ಯಾರೂ ಶತ್ರುಗಳಲ್ಲ’ ಎಂಬ ಗಾದೆ ಮಾತನ್ನು ಪ್ರಸ್ತುತ ನಿತೀಶ್ ಅವರ ನಡೆ ಸತ್ಯವಾಗಿಸಿದೆ. ಬಿಹಾರ ಸಿಎಂ ಅವಕಾಶವಾದಿ ರಾಜಕಾರಣಿ. ಬಿಹಾರದ ಜನರು ಜೆಡಿಯು- ಕಾಂಗ್ರೆಸ್-ಆರ್‌ಜೆಡಿ ಮೈತ್ರಿಗೆ ಅಧಿಕಾರ ನೀಡಿದ್ದರು. ಅಧಿಕಾರದ ಆಸೆಗೆ ತತ್ವ-ಸಿದ್ಧಾಂತಗಳನ್ನು ಗಾಳಿಗೆ ತೂರಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಸರಿಯಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ. ಸ್ವಾರ್ಥ ಸಾಧನೆಗಾಗಿ ನಿತೀಶ್ ಕುಮಾರ್ ಕೋಮುವಾದಿ ಬಿಜೆಪಿ ಜತೆಗೆ ಕೈಜೋಡಿಸಿದ್ದಾರೆ. ಅದರ ವಿರುದ್ಧವೇ ಕೆಲ ಸಮಯದ ಹಿಂದೆ ಅವರು ಹೋರಾಟ ಮಾಡುತ್ತಿದ್ದರು. ಮೂರು ನಾಲ್ಕು ತಿಂಗಳಿಂದ ಇಂಥ ಪ್ರಯತ್ನ ನಡೆಯುತ್ತಿದೆ.
– ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ಕಳೆದೆರಡು ದಿನಗಳಲ್ಲಿ ಬಿಹಾರದಲ್ಲಾದ ಕ್ಷಿಪ್ರ ಬೆಳವಣಿಗೆ ದುರದೃಷ್ಟಕರವಾದದ್ದು. ಈ ಋಣಾತ್ಮಕ ಬೆಳವಣಿಗೆಯಿಂದ ನಾವೆಲ್ಲರೂ ಆಘಾತ ಕ್ಕೊಳಗಾಗಿದ್ದೇವೆ.
– ಸುರವರಮ್ ಸುಧಾಕರ ರೆಡ್ಡಿ, ಸಿಪಿಐ ನಾಯಕ ನನ್ನ ವಿರುದ್ಧ ರಾಜಕೀಯ ಹಗೆತನ ತೋರಿಸಲಾಗುತ್ತಿದೆ. ರಾಜಕೀಯವಾಗಿ ನನ್ನ ಏಳಿಗೆ ಸಹಿಸದ ಜೆಡಿಯು ಮತ್ತು ಬಿಜೆಪಿ ಪಕ್ಷಗಳಿಗೆ ಹೊಟ್ಟೆಕಿಚ್ಚು ತಂದಿದೆ.
– ತೇಜಸ್ವಿ ಯಾದವ್, ಮಾಜಿ ಉಪಮುಖ್ಯಮಂತ್ರಿ