ಪಟ್ನಾ/ಹೊಸದಿಲ್ಲಿ: ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿ ಕೇಂದ್ರ ತನಿಖಾ ಸಂಸ್ಥೆಗಳಿಂದ ದಾಳಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್‌ರಿಂದ ಡಿಸಿಎಂ ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕು ಎಂಬ ಪಟ್ಟಿಗೆ ಜರ್ಝರಿತರಾದಂತಾಗಿದ್ದಾರೆ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್. ಬಿಹಾರದಲ್ಲಿನ ಮಹಾ ಮೈತ್ರಿ ಮುರಿಯಲು ಅವಕಾಶ ಕೊಡುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳು ಹೇರುವ ಒತ್ತಡಕ್ಕೂ ಬಗ್ಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಬಿಹಾರ ಸರಕಾರದ ಭವಿಷ್ಯ ತಮ್ಮ ಪುತ್ರ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆ ನೀಡಿದರೆ ಮಾತ್ರ ಎಂದಾದರೆ ಆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದಿದ್ದಾರೆ ಲಾಲು ಯಾದವ್. ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯತ್ತ ವಾಲುತ್ತಿದ್ದಾರೆ ಎಂಬ ರಾಜಕೀಯ ಕ್ಷೇತ್ರದ ಪಿಸುಗುಟ್ಟುವಿಕೆಯ ನಡುವೆಯೇ ಆರ್‌ಜೆಡಿ ಮುಖ್ಯಸ್ಥ ಜೆಡಿಯು ನಾಯಕನ ಕಾಲೆಳೆದಿದ್ದಾರೆ.
ಕೆಲ ದಿನಗಳ ಹಿಂದೆ ಲಾಲು ಯಾದವ್ ಜತೆಗಿನ ಖಾಸಗಿ ಮಾತುಕತೆ ವೇಳೆ ರಾಜೀನಾಮೆಗೆ ಗಡುವು ವಿಧಿಸಿದ್ದಾರೆಯೇ ಎಂಬ ವಿಚಾರಕ್ಕೆ ಅವರು ಮೌನವಾಗಿಯೇ ಉಳಿದಿದ್ದಾರೆ. ಆದರೆ ಮುಖ್ಯಮಂತ್ರಿ ಕಚೇರಿಯಿಂದ ಡಿಸಿಎಂಗೆ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವ ಸೂಚನೆ ಕೊಟ್ಟು, ತ್ಯಾಗಪತ್ರ ಪಡೆದುಕೊಳ್ಳುವುದನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಬಿಐಗೆ ಪ್ರೋತ್ಸಾಹ: ಗುರುತರ ಆರೋಪವಿಲ್ಲದೆ ಪುತ್ರನ ವಿರುದ್ಧ ಕೇಸು ಹಾಕಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದರೆ, ಬಿಜೆಪಿ ಮತ್ತು ಸಿಬಿಐಗೆ ಮತ್ತಷ್ಟು ಕುಮ್ಮಕ್ಕು ನೀಡಲಾಗುತ್ತದೆ ಎನ್ನುವುದು ಲಾಲು ವಾದ.
ತೇಜಸ್ವಿ, ಭದ್ರತಾ ಸಿಬಂದಿ ವಿರುದ್ಧ ಮನವಿ: ಮಾಧ್ಯಮ ಸಿಬಂದಿ ಜತೆ ಅನುಚಿತವಾಗಿ ವರ್ತಿಸಿದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ಭದ್ರತಾ ಸಿಬಂದಿ ವಿರುದ್ಧ ಪೊಲೀಸ್ ಮಹಾ ನಿರ್ದೇಶಕ ಪಿ.ಕೆ.ಠಾಕೂರ್‌ಗೆ ಮನವಿ ಸಲ್ಲಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ ಆರೋಪಕ್ಕಾಗಿ ಸಚಿವ, ಸಹೋದರ ತೇಜ್ ಪ್ರತಾಪ್ ಯಾದವ್ ವಿರುದ್ಧವೂ ದೂರು ಸಲ್ಲಿಕೆಯಾಗಿದೆ. ಮುದ್ರಣ ಮತ್ತು ವಿವಿಧ ಚಾನೆಲ್‌ಗಳಿಗೆ ಸೇರಿದ ಪತ್ರಕರ್ತರು 72 ಗಂಟೆಗಳ ಒಳಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನಾವು ಹೇಳಿದ್ದೇ ನಡೆಯೋದು
ಇದಕ್ಕೂ ಮುನ್ನ ಮಾತನಾಡಿದ್ದ ಆರ್‌ಜೆಡಿ ಶಾಸಕ ಭಾಯ್ ವಿರೇಂದ್ರ ತೇಜಸ್ವಿ ಯಾದವ್, ‘ಹುದ್ದೆ ತ್ಯಾಗ ಮಾಡುವುದಿಲ್ಲ. ಆರ್‌ಜೆಡಿಗೆ 80 ಸ್ಥಾನಗಳಿಗೆ. ಹೀಗಾಗಿ ಅವರದ್ದೇ ಮಾತು ನಡೆಯುತ್ತದೆ. ಹೀಗಾಗಿ ನಮಗೆ ಜೆಡಿಯು ಸಲಹೆ ಬೇಕಾಗಿಲ್ಲ’ ಎಂದು ಗುಟುರು ಹಾಕಿದ್ದಾರೆ.