Advertisement

ನಿತೀಶ್‌ ಯೂಟರ್ನ್? ಮತ್ತೆ ಬಿಹಾರ ಸಿಎಂ ಎನ್‌ಡಿಎ ತೆಕ್ಕೆಗೆ ಸೇರುವ ಸುಳಿವು

11:00 PM Mar 04, 2023 | Team Udayavani |

ಪಾಟ್ನಾ/ನವದೆಹಲಿ: ಹಲವು ಬಾರಿ “ಮೈತ್ರಿ’ ಅದಲು-ಬದಲು ಮಾಡಿಕೊಂಡು ಅಭ್ಯಾಸವಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಈಗ ಮತ್ತೊಮ್ಮೆ ಯೂಟರ್ನ್ ಹೊಡೆದು ಬಿಜೆಪಿಯ ಕೈಹಿಡಿಯಲಿದ್ದಾರಾ?

Advertisement

ಇತ್ತೀಚಿನ ಕೆಲವು ಬೆಳವಣಿಗೆಗಳು ಇಂಥದ್ದೊಂದು ಅನುಮಾನವನ್ನು ಮೂಡಿಸಿದೆ.

ಬಿಹಾರದಲ್ಲಿ ಅಧಿಕಾರವನ್ನು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೆ ವರ್ಗಾಯಿಸಿ ಎಂದು ಆರ್‌ಜೆಡಿ ನಿತೀಶ್‌ ಮೇಲೆ ಒತ್ತಡ ಹೇರುತ್ತಿದ್ದು, ಆರ್‌ಜೆಡಿ ಮತ್ತು ಜೆಡಿಯು ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುಳಿವನ್ನು ನೀಡಿದೆ. ಇದರಿಂದ ಬೇಸತ್ತು ನಿತೀಶ್‌ ಅವರು ಮತ್ತೆ ಎನ್‌ಡಿಎ ಕಡೆಗೆ ಮರಳುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಕಳೆದ ವರ್ಷ ಎನ್‌ಡಿಎ ತೊರೆದಿದ್ದ ನಿತೀಶ್‌, ಆರ್‌ಜೆಡಿ ಸೇರಿದಂತೆ ಇತರೆ ಪಕ್ಷಗಳ ಮಹಾಘಟಬಂಧನದ ಜತೆ ಸೇರಿ ಸರ್ಕಾರ ರಚಿಸಿದ್ದರು. ಆರಂಭದಲ್ಲಿ ಬಿಜೆಪಿ ನಾಯಕರು ನಿತೀಶ್‌ರೊಂದಿಗೆ ಪ್ಯಾಚ್‌ಅಪ್‌ ಮಾಡಿಕೊಳ್ಳುವ ಮಾತನಾಡಿದ್ದರೂ, ಅದು ಈಡೇರುವುದಿಲ್ಲ ಎಂಬುದು ಗೊತ್ತಾದ ಬಳಿಕ ನಿರಂತರವಾಗಿ ಬಿಜೆಪಿ ಮತ್ತು ಜೆಡಿಯು ನಡುವೆ ಸಂಘರ್ಷ, ವಾಗ್ವಾದ ನಡೆಯುತ್ತಲೇ ಇತ್ತು. ಆದರೆ, ಕಳೆದ 10 ದಿನಗಳಿಂದ ಬಿಹಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿತೀಶ್‌ ನಡೆಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಅನುಮಾನಕ್ಕೇನು ಕಾರಣ?
1. ರಾಜ್ಯಪಾಲರ ಆಯ್ಕೆ
ಇತ್ತೀಚೆಗೆ ಬಿಹಾರಕ್ಕೆ ಹೊಸ ರಾಜ್ಯಪಾಲರ ನೇಮಕ ಮಾಡುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಿತೀಶ್‌ಗೆ ಕರೆ ಮಾಡಿ, ವಿಷಯ ತಿಳಿಸಿದ್ದರು. ಇದನ್ನು ನಿತೀಶ್‌ ಕೂಡ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದರು. ಈ ಮೂಲಕ ಬಿಜೆಪಿ ತನ್ನ ಹಳೆಯ ಮಿತ್ರ ಜೆಡಿಯು ಬಗ್ಗೆ ಮೃದುಧೋರಣೆ ಹೊಂದಿರುವುದು ಸಾಬೀತಾಗಿತ್ತು.
2. ತೇಜಸ್ವಿ ಹೇಳಿಕೆಯಿಂದ ಮುಜುಗರ
ಸರ್ಕಾರಿ ಭೂಮಿಯಲ್ಲಿ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಗಾಲ್ವಾನ್‌ ಹುತಾತ್ಮ ಯೋಧನ ತಂದೆಯ ಮೇಲೆ ಬಿಹಾರ ಪೊಲೀಸರು ಹಲ್ಲೆ ನಡೆಸಿ, ಬಂಧಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸಿಎಂ ತೇಜಸ್ವಿ ಯಾದವ್‌, “ಪೊಲೀಸರು ಕೈಗೊಂಡ ಕ್ರಮ ಸರಿಯಾಗಿದೆ’ ಎಂದಿದ್ದರು. ಆದರೆ, ಇದನ್ನು ಖಂಡಿಸಿದ್ದ ನಿತೀಶ್‌ ಕುಮಾರ್‌, ಹಲ್ಲೆ ಕುರಿತು ತನಿಖೆಗೆ ಆದೇಶಿಸಿದ್ದರು.
3. ನಿತೀಶ್‌ ಬರ್ತ್‌ಡೇ
ಮಾ.1ರಂದು ನಿತೀಶ್‌ ಜನ್ಮದಿನದಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಫೋನ್‌ ಕರೆ ಮಾಡಿ ಶುಭ ಕೋರಿದ್ದರು. ಇದನ್ನು ಸದನದಲ್ಲೇ ಪ್ರಸ್ತಾಪಿಸುವ ಮೂಲಕ ನಿತೀಶ್‌, ಈಗಲೂ ಬಿಜೆಪಿ ನಾಯಕರು ನನ್ನ ಬೆನ್ನಿಗಿದ್ದಾರೆ ಎಂಬ ಪರೋಕ್ಷ ಸಂದೇಶವನ್ನು ಆರ್‌ಜೆಡಿಗೆ ರವಾನಿಸಿದ್ದರು. ಪ್ರಧಾನಿ ಮೋದಿ, ಸಚಿವ ಗಡ್ಕರಿ ಅವರೂ ನಿತೀಶ್‌ಗೆ ಟ್ವೀಟ್‌ ಮೂಲಕ ಶುಭ ಕೋರಿದ್ದರು.
4. ಕಾರ್ಮಿಕರ ಮೇಲೆ ಹಲ್ಲೆ
ತಮಿಳುನಾಡಿನಲ್ಲಿ ಬಿಹಾರದ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂಬ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿದ್ದ ವೇಳೆ, ತಕ್ಷಣ ಪ್ರತಿಕ್ರಿಯಿಸಿದ್ದ ತೇಜಸ್ವಿ ಯಾದವ್‌, ಈ ವರದಿ ಸತ್ಯಕ್ಕೆ ದೂರವಾದದ್ದು ಎಂದಿದ್ದರು. ಆದರೆ, ನಿತೀಶ್‌ ಮಾತ್ರ ವಲಸೆ ಕಾರ್ಮಿಕರ ಮೇಲೆ ಹಲ್ಲೆ ಆರೋಪದ ಪರಿಶೀಲನೆಗಾಗಿ ಸರ್ವಪಕ್ಷಗಳ ನಿಯೋಗವನ್ನು ತಮಿಳುನಾಡಿಗೆ ಕಳುಹಿಸಿದರು.
5. ಬಿಜೆಪಿ ನಾಯಕನ ಮನೆಗೆ ಭೇಟಿ
ಶನಿವಾರ ನಿತೀಶ್‌ ಅವರು ಬಿಹಾರದ ಮಾಜಿ ಡಿಸಿಎಂ ತಾರ್‌ ಕಿಶೋರ್‌ ಪ್ರಸಾದ್‌ ಅವರ ತಂದೆಯ ಶ್ರಾದ್ಧದಲ್ಲಿ ಪಾಲ್ಗೊಳ್ಳಲೆಂದು ಅವರ ನಿವಾಸಕ್ಕೆ ತೆರಳಿದ್ದರು. ಪ್ರಸಾದ್‌ ಅವರು ಆರೆಸ್ಸೆಸ್‌ ಸದಸ್ಯರೂ ಹೌದು.

Advertisement

ಮೂರೂ ರಾಜ್ಯಗಳಿಗೆ ಮೋದಿ ಭೇಟಿ
ಇತ್ತೀಚೆಗೆ ಫ‌ಲಿತಾಂಶ ಪ್ರಕಟವಾದ ತ್ರಿಪುರ, ನಾಗಾಲ್ಯಾಂಡ್‌ ಮತ್ತು ಮೇಘಾಲಯದಲ್ಲಿ ಬಿಜೆಪಿಯೇ ಸರ್ಕಾರ ರಚನೆ ಮಾಡಲಿದ್ದು, ಮೂರೂ ಸರ್ಕಾರಗಳ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಮಾ.7ರಂದು ನಾಗಾಲ್ಯಾಂಡ್‌ ಮತ್ತು ಮೇಘಾಲಯ, ಮಾ.8ರಂದು ತ್ರಿಪುರದಲ್ಲಿ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ಇದೇ ವೇಳೆ, ತ್ರಿಪುರದಲ್ಲಿ ನಡೆದ ಚುನಾವಣೋತ್ತರ ಹಿಂಸಾಚರದಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ 20 ಮಂದಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next