ಸಕಲೇಶಪುರ : ಚತುಷ್ಪಥ ರಸ್ತೆ ಕಾಮಗಾರಿಗಾಗಿ ರಸ್ತೆ ಬಂದ್ ಕುರಿತು ತೀರ್ಮಾನ ಕೈಗೊಳ್ಳಲು ಗುರುವಾರ ಆಯೋಜಿಸಲಾಗಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಶಿರಾಡಿ ಘಾಟ್
ರಸ್ತೆ ಕಾಮಗಾರಿ ವೀಕ್ಷಣೆ ಕಾರ್ಯಕ್ರಮ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಮುಂದೂಡಲಾಗಿದೆ.
ಸಕಲೇಶಪುರದಿಂದ ಮಾರನಹಳ್ಳಿವರೆಗಿನ ಉದ್ದೇಶಿತ ಚತುಷ್ಪಥ ರಸ್ತೆ ಕಾಮಗಾರಿಗಾಗಿ ಗುತ್ತಿಗೆದಾರರು ಸುಮಾರು 6 ತಿಂಗಳ ಕಾಲಾವಧಿ ರಾಷ್ಟ್ರೀಯ ಹೆದ್ದಾರಿ 75ನ್ನು ಬಂದ್ ಮಾಡಲು ಅವಕಾಶ ಕೇಳಿದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಗೋಪಾಲಯ್ಯ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಕೆ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಗಿರೀಶ್, ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗುರುವಾರ ತಾಲೂಕಿನಲ್ಲಿ ಶಿರಾಡಿ ಘಾಟ್‌ನಲ್ಲಿ ರಸ್ತೆ ಕಾಮಗಾರಿ ವೀಕ್ಷಣೆಗೆ ತೀರ್ಮಾನಿಸಿದ್ದರು.
ಈ ಹಿನ್ನೆಲೆಯಲ್ಲಿ ಶಿರಾಡಿ ರಸ್ತೆ ಉಳಿಸಿ ಹೋರಾಟ ಸಮಿತಿಯಿಂದ ರಸ್ತೆ ಬಂದ್ ವಿರೋಧಿಸಿ ಬೃಹತ್ ಜನಾಂದೋಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಶಿರಾಡಿ ರಾಷ್ಟ್ರೀಯ ಹೆದ್ದಾರಿ 75ರ ವಿಚಾರವಾಗಿ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ಈ ಯೋಜನೆಯ ಪ್ರಾಜೆಕ್ಟ್ ಡೈರೆಕ್ಟರ್ ಸೇರಿದಂತೆ ಇತರ ಉನ್ನತ ಅಧಿಕಾರಿಗಳ ಸಭೆ ಕರೆದಿರುವುದರಿಂದ ಶಿರಾಡಿ ಜನಾಂದೋಲನ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಸಭೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ರೂಪುರೇಷೆಗಳನ್ನು ರೂಪಿಸಲಾಗುವುದು ಎಂದು ಶಿರಾಡಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜೀತ್ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ : ರಾತ್ರಿ ಹಸುಗಳನ್ನು ಕದ್ದು ಸಂತೆಗೆ ಮಾರಾಟ :ಜಿಲ್ಲೆಯ 10 ದನಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು