Advertisement

ನೀತಿ ಆಯೋಗ ಉಪಾಧ್ಯಕ್ಷ ಪನಗಾರಿಯಾ ರಾಜೀನಾಮೆ

08:00 AM Aug 02, 2017 | Team Udayavani |

ಬೋಧನಾ ವೃತ್ತಿಗೆ ಮರಳುವ ಸಲುವಾಗಿ ಈ ನಿರ್ಧಾರ

Advertisement

ಹೊಸದಿಲ್ಲಿ: ಯೋಜನಾ ಆಯೋಗದ ಬದಲಾಗಿ ಹುಟ್ಟಿಕೊಂಡಿದ್ದ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ್‌ ಪನಗಾರಿಯಾ ರಾಜೀನಾಮೆ ನೀಡಿದ್ದಾರೆ. ಆದರೆ ಆ. 31ರ ವರೆಗೆ ಹುದ್ದೆಯ ಲ್ಲಿರುವುದಾಗಿ ಅವರು ಹೇಳಿದ್ದಾರೆ. ಈ ಸಂಬಂಧ ನೀತಿ ಆಯೋಗದ ಅಧ್ಯಕ್ಷರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಪನಗಾರಿಯಾ, ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ. ಆರ್‌ಬಿಐ ಗವರ್ನರ್‌ ಆಗಿದ್ದ ರಘುರಾಂ ರಾಜನ್‌ ಬಳಿಕ, ಮಹತ್ವದ ಹುದ್ದೆ ತೊರೆಯುತ್ತಿರುವ ಎರಡನೇ ಅರ್ಥಶಾಸ್ತ್ರಜ್ಞ ಇವರಾಗಿದ್ದಾರೆ.

ಇಂಡೋ – ಅಮೆರಿಕನ್‌ ಮೂಲದ ಪನಗಾರಿಯಾ ಅವರು, ಅಮೆರಿಕದ ಕೊಲಂಬಿಯಾ ವಿವಿಯಲ್ಲಿ ಇಂಡಿಯನ್‌ ಪೊಲಿಟಿಕಲ್‌ ಎಕಾನಮಿ ವಿಷಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. 2015ರಲ್ಲಿ ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗ ರಚನೆಯಾದ ಮೇಲೆ ಅವರನ್ನು ಉಪಾಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಗಿತ್ತು. ಇದೀಗ ಕೊಲಂಬಿಯಾ ವಿವಿ ರಜೆ ವಿಸ್ತರಣೆಗೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ವಾಪಸ್‌ ಹೋಗಲೇಬೇಕಾದ ಅನಿವಾರ್ಯ ಎದುರಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ 65 ವರ್ಷ ವಯಸ್ಸಿನ ತಮಗೆ ಕೊಲಂಬಿಯಾ ವಿವಿಯಂಥ ಸ್ಥಳಗಳಲ್ಲಿ ಕೆಲಸ ಸಿಗುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪನಗಾರಿಯಾ ಅವರು ಈ ಹಿಂದೆ ಏಷಿಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌, ವರ್ಲ್ಡ್ ಬ್ಯಾಂಕ್, ಐಎಂಎಫ್ ಮತ್ತು ಯುಎನ್‌ಸಿಟಿಎಡಿಯಲ್ಲಿ  ಕೆಲಸ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next