Advertisement

ನಿತ್ಯೋತ್ಸವದ ಮೇಲೆ ಪ್ರೀತಿ ಜಾಸ್ತಿ!

03:52 PM May 04, 2020 | Suhan S |

ನಿಸಾರ್‌ ಅಹಮದ್‌ ಅವರೇ ಅದೊಮ್ಮೆ ಹೇಳಿದ್ದರು: ಇದು ದಶಕಗಳ ಹಿಂದಿನ ಮಾತು. ನಾನಾಗ ಕಾಲೇಜು ಅಧ್ಯಾಪಕನಾಗಿದ್ದೆ. ನನಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಟ್ರಾನ್ಸ್‌ಫ‌ರ್‌ ಆಗಿತ್ತು. ಅವತ್ತಿಗೆ ಅದು ಹೊಸಾ ಜಾಗ. ಹೊಸ ಪರಿಸರ. ಹಾಗಾಗಿ, ಕುಟುಂಬವನ್ನು ಬೆಂಗಳೂರಿನಲ್ಲಿಯೇ ಬಿಟ್ಟು ಶಿವಮೊಗ್ಗಕ್ಕೆ ಹೋದೆ. ಅಲ್ಲಿಗೆ ಹೋದಮೇಲೆ ಜೋಗನ್‌ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ?

Advertisement

ಅದೊಂದು ದಿನ ಗೆಳೆಯರೊಂದಿಗೆ ಅಲ್ಲಿಗೂ ಹೋಗಿ ಬಂದೆ. ಅಲ್ಲಿಂದ ವಾಪಸಾದ ನಂತರವೂ ಜೋಗ ಜಲಪಾತದಲ್ಲಿ ಕಂಡ ನೂರೆಂಟು ಚಿತ್ರಗಳು ಮನದೊಳಗೆ ಅಚ್ಚಳಿಯದೆ ಉಳಿದುಬಿಟ್ಟವು. ಜೋಗದ ಬಗ್ಗೆ ಒಂದು ಕವಿತೆ ಬರೆಯಬೇಕು ಎಂಬ ಉಮ್ಮೇದು ಬಂದದ್ದೇ ಆಗ. ಆನಂತರದ ಕ್ಷಣಗಳಲ್ಲಿ ಒಂದೊಂದೇ ಸಾಲುಗಳು, ಪದಗಳು ಹೊಳೆಯುತ್ತಾ ಹೋದವು. ಎಲ್ಲವನ್ನೂ ಬರೆದಿಟ್ಟುಕೊಂಡು ಬೆಂಗಳೂರಿಗೆ ಬಂದೆ ಮರುದಿನ ಬೆಳಗ್ಗೆ, ನನ್ನ ಅತ್ಯಾಪ್ತ ಮಿತ್ರರಾದ ಮೈಸೂರು ಅನಂತಸ್ವಾಮಿ ಸಿಕ್ಕಿದ್ರು. ಉಭಯಕುಶಲೋಪರಿಯ ಮಾತುಗಳಾದ ನಂತರ ಅನಂತಸ್ವಾಮಿ ಹೇಳಿದರು: ಮೇಸ್ಟ್ರೆ, ಇವತ್ತು ರಾತ್ರಿ ನನ್ನದೊಂದು ಗಾಯನ ಕಾರ್ಯಕ್ರಮವಿದೆ. ನಿಮ್ಮ ಹೊಸ ಪದ್ಯ ಇದ್ರೆ ಕೊಡಿ. ಅದಕ್ಕೆ ರಾಗ ಸಂಯೋಜನೆ ಮಾಡಿ ಹಾಡ್ತೇನೆ…’ ಈ ಮಾತು ಕೇಳಿದಾಕ್ಷಣ ಹೊಸದಾಗಿ ಸೃಷ್ಟಿಯಾಗಿದ್ದ ಪದ್ಯ ನೆನಪಿಗೆ ಬಂತು. ಅದನ್ನು ಅನಂತಸ್ವಾಮಿಯವರಿಗೆ ಕೊಟ್ಟೆ. ನನ್ನ ಹೊಸ ಪದ್ಯವನ್ನು ಅನಂತಸ್ವಾಮಿ ಹೇಗೆ ಹಾಡಬಹುದು? ಅದಕ್ಕೆ ಯಾವ ರೀತಿ ರಾಗಸಂಯೋಜನೆ ಮಾಡಿರಬಹುದು? ಈ ಹಾಡು ಕೇಳಿದ ಜನ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನೆಲ್ಲ ತಿಳಿಯುವ ಆಸೆ ನನಗಿತ್ತು. ಹಾಗಾಗಿ ಕುತೂಹಲದಿಂದಲೇ ಆ ಕಾರ್ಯಕ್ರಮಕ್ಕೆ ಹೋದೆ. ಐದಾರು ಹಾಡುಗಳಿಗೆ ದನಿಯಾದ ಅನಂತಸ್ವಾಮಿ, ನಂತರ: ಇವತ್ತು ಒಂದು ಹೊಸ ಕವಿತೆಗೆ ರಾಗಸಂಯೋಜನೆ ಮಾಡಿದ್ದೇನೆ. ಅದನ್ನು ಬರೆದ ಕವಿಗಳೂ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಮೊದಲು ಹಾಡು ಕೇಳಿ.

ಆನಂತರ ಕವಿಗಳಿಗೆ ಅಭಿನಂದನೆ ಹೇಳುವಿರಂತೆ ಅಂದರು…’ ಆನಂತರದಲ್ಲಿ ಅವರು ಹಾಡಿದ್ದೇ- ನಿತ್ಯೋತ್ಸವ, ತಾಯಿ ನಿತ್ಯೋತ್ಸವ…’ ಗೀತೆಯನ್ನು. ಹಾಡು ಮುಗಿಯುತ್ತಿದ್ದಂತೆಯೇ ಸಭಿಕರೆಲ್ಲಾ ಜೋರಾಗಿ ಚಪ್ಪಾಳೆ ಹೊಡೆದರು. ಮರುಗಳಿಗೆಯೇ, ಈ ಪದ್ಯ ನಮ್ಮ ಮೇಸ್ಟ್ರೆ ನಿಸಾರ್‌ ಅಹಮದ್‌ ಅವರದ್ದು ಎಂದು ಅನಂತಸ್ವಾಮಿ ಎಲ್ಲರಿಗೂ ತಿಳಿಸಿದರು…

ಹೀಗೆ, ಆಕಸ್ಮಿಕವಾಗಿ ಸೃಷ್ಟಿಯಾಗಿ, ಆಕಸ್ಮಿಕ ಸಂದರ್ಭದಲ್ಲಿಯೇ ಜನಸಾಮಾನ್ಯರನ್ನು ತಲುಪಿದ ಗೀತೆ ಇದು. ಈ ಕಾರಣದಿಂದಲೇ ನಿತ್ಯೋತ್ಸವ’ ಗೀತೆಯ ಮೇಲೆ ನನಗೆ ಒಂದು ಗುಲಗಂಜಿಯಷ್ಟು ಜಾಸ್ತಿ ಪ್ರೀತಿ…

 

Advertisement

ಎರಡೇ ನಿಮಿಷದಲ್ಲಿ ತೆಗೆದುಬಿಟ್ಟ ಕಣ್ರೀ… :  ಸ್ಪುರದ್ರೂಪಿ ಎಂದು ಕಣ್ಮುಚ್ಚಿಕೊಂಡು ಹೇಳಬಲ್ಲಂಥ ರೂಪುವಂತರು ನಿಸಾರ್‌ ಅಹಮದ್‌. ಅವರ ಚಿತ್ರಗಳ ಪೈಕಿ ತುಂಬಾ ಹೆಚ್ಚಾಗಿ ಬಳಕೆಯಾಗಿರುವ ಫೋಟೋ ಒಂದಿದೆ; ಅದು ಖ್ಯಾತ ಫೋಟೋಗ್ರಾಫ‌ರ್‌ ಬಿ. ಆರ್‌. ಶಂಕರ್‌ ಅವರು ತೆಗೆದ ಚಿತ್ರ. ನೇರಳೆ ಬಣ್ಣದ ಸೂಟ್‌ನ ಗಲ್ಲಕ್ಕೆ ಕೈ ಹಾಕಿಕೊಂಡು

ಕುಳಿತಿರುವ ಚಿತ್ರ ಅದು. ಅದರ ಕುರಿತು ನಿಸಾರ್‌ ಅವರಿಗೆ ಬಹಳ ಹೆಮ್ಮೆ, ಅಭಿಮಾನ. ಆ ಶಂಕರ್‌ ಇದ್ದಾನಲ್ರೀ, ನಮ್ಮ ಬಿ. ಆರ್‌. ಲಕ್ಷ್ಮಣ ರಾವ್‌ ಅವರ ತಮ್ಮ, ಅವನೊಮ್ಮೆ ಬಂದು-” ಸಾರ್‌, ನಾವು ಒಂದು ಆರ್ಟ್‌ ಗ್ಯಾಲರಿ ಮಾಡ್ತಾ ಇದ್ದೇವೆ.ನಿಮ್ಮದೊಂದು ಫೋಟೋ ಬೇಕು” ಅಂದ. ಆಯ್ತು ತೆಗೆಯಪ್ಪ ಅಂತ ರೆಡಿಯಾದೆ. ಎಂಥಾ ಸೋಜಿಗ ಅಂತೀರಿ? ರೆಡಿ,ಸ್ಟಾರ್ಟ್‌ ,ಏನೂ ಹೇಳದೆ, ಎರಡೇ ನಿಮಿಷದಲ್ಲಿ ತೆಗೆದುಬಿಟ್ಟ. ಆಮೇಲೆ ನೋಡಿದರೆ ಇಷ್ಟು ಚೆನ್ನಾಗಿ ಬಂದಿದೆ… ಇಷ್ಟು ಚೆನ್ನಾಗಿ ಬರಬಹುದು ಎಂಬ ಅಂದಾಜು ನನಗಂತೂ ಇರಲಿಲ್ಲ. ಹಾಗಾಗಿ ಈ ಫೋಟೋ ನನ್ನ ಮೆಚ್ಚಿನದ್ದು… .

ತುಷಾರಕ್ಕಾಗಿಯೇ ಬರೆದದ್ದು ನವೋಲ್ಲಾಸ! : ಉದಯವಾಣಿ ಪತ್ರಿಕಾ ಬಳಗಕ್ಕೂ, ನಿಸಾರ್‌ ಅಹಮದ್‌ ಅವರಿಗೂ ಬಿಡದ ನಂಟು. ಉದಯವಾಣಿ ಪತ್ರಿಕಾ ಬಳಗದ ಎಷ್ಟೋ ಕಾರ್ಯಕ್ರಮಗಳಿಗೆ ಅವರದ್ದೇ ಅಧ್ಯಕ್ಷತೆ. ಉದಯವಾಣಿ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯವನ್ನು, ಉದಯವಾಣಿ, ತರಂಗ, ತುಷಾರದ ಅತ್ಯುತ್ತಮ ಮುದ್ರಣವನ್ನು, ಸಂದರ್ಭ ಸಿಕ್ಕಾಗಳೆಲ್ಲಾ ನಿಸಾರ್‌ ಪ್ರಶಂಸಿಸುತ್ತಿದ್ದರು.ನಿಸಾರ್‌ ಅವರ, ”ಅಚ್ಚು ಮೆಚ್ಚು” ಲೇಖನ ಮಾಲೆ ಸರಣಿಯ ರೂಪದಲ್ಲಿ ಪ್ರಕಟವಾಗಿದ್ದು ತುಷಾರದಲ್ಲಿಯೇ. ತಮ್ಮ ಗದ್ಯ ಬರಹಕ್ಕೆ ಓದುಗರು ನೀಡಿದ ಪ್ರತಿಕ್ರಿಯೆಯಿಂದ ಖುಷಿಯಾದ ನಿಸಾರ್‌, ತುಷಾರ ಓದುಗರಿಗೆಂದೇ ” ನವೋಲ್ಲಾಸ” ಹೆಸರಿನ ಭಾವಗೀತೆಗಳ ಸಂಕಲನ ರಚಿಸಿದರು. ಇದರ ಮೊದಲ ಮುದ್ರಣವನ್ನು ಉದಯವಾಣಿ ಪತ್ರಿಕಾ ಸಮೂಹವೇ ಪ್ರಕಟಿಸಿತು.

ನಾನೂ ಲವ್‌ ಮಾಡಿದ್ದೆ ಕಣ್ರೀ… :  ಬಹುಶಃ ಉಳಿದ ಯಾವ ಪತ್ರಕರ್ತರಿಗೂ ಇಲ್ಲದಷ್ಟು ಸಲುಗೆ ನಿಸಾರ್‌ ಅಹಮದ್‌ ಅವರ ಜೊತೆ ನನಗಿತ್ತು. ವಿವಿಧ ಸಂದರ್ಭಗಳಿಗೆಂದು ಬಹುಶ 10 ಬಾರಿ ಅವರ ಸಂದರ್ಶನ ಕೇಳಿದ್ದೇನೆ. ಒಮ್ಮೆ ಕೂಡ ಅವರು – ನೋ ಅಂದಿಲ್ಲ. ”ಇಲ್ಲಪ್ಪಾ, ನಾನು ಹಾಗೆಲ್ಲಾ ಯಾರಿಗೂ ಸಂದರ್ಶನ ಕೊಡುವುದಿಲ್ಲ” ಎಂದು ಮೊದಲಿಗೆ ಹೇಳುತ್ತಿದ್ದರು. ಸ್ವಲ್ಪ ಸಮಯದ ನಂತರ-” ನೀನು ಕೇಳ್ತಾ ಇದ್ದೀಯ, ನಿನಗೆ ಹೇಗಯ್ನಾ ಇಲ್ಲ ಅನ್ನಲಿ? ಪ್ರಶ್ನೆಗಳು ರೆಡಿ ಇದ್ದವಾ? ಹಾಗಾದ್ರೆ ಒಂದು ಕೆಲಸ ಮಾಡು. ಪ್ರಶ್ನೆಗಳನ್ನು ಕೊಡು, ನಾಳೆ ಸಂಜೆ ಹೊತ್ತಿಗೆ ಉತ್ತರ ಬರೆದು ಇಟ್ಟಿರುತ್ತೇನೆ. ಬಂದು ತಗೊಂಡು ಹೋಗು” ಅನ್ನುತ್ತಿದ್ದರು. ಕೆಲವೊಮ್ಮೆ, ಯಾವುದೋ ಪ್ರಸಂಗ ಹೇಳಿ, ” ಇದು ಆಫ್ ದಿ ರೆಕಾರ್ಡ್‌ ಕಣಯ್ಯಾ. ಇದನ್ನು ಎಲ್ಲೂ ಬರೆಯಬಾರದು.ಗೊತ್ತಾಯ್ತಾ?” ಅನ್ನುತ್ತಿದ್ದರು. ಇಂಥ ಸಲುಗೆಯ ಕಾರಣದಿಂದಲೇ ಅದೊಮ್ಮೆ ಕೇಳಿಬಿಟ್ಟೆ: ”ಸಾರ್‌, ನೀವು ಯಾರನ್ನಾದ್ರೂ ಲವ್‌ ಮಾಡಿದ್ರಾ? ನಿಮ್ಮದು ಲವ್‌ ಮ್ಯಾರೇಜಾ ಸಾರ್‌?” ನೋಡಪ್ಪಾ… ಇದು ಕೂಡ ಆಫ್ ದಿ ರೆಕಾರ್ಡ್‌. ನೀನು ಎಲ್ಲೂ ಬರೆಯಬಾರದು ಅನ್ನುತ್ತಲೇ ನಿಸಾರ್‌ ಹೇಳಿದರು; ನಾನು ಕೂಡ ಲವ್‌ ಮಾಡಿದ್ದೆ. ಆಕೆಗೂ ಇಷ್ಟ ಇತ್ತು. ಆದರೆ ಅದನ್ನುನಾವು ಪರಸ್ಪರ ಹೇಳಿಕೊಳ್ಳಲೇ ಇಲ್ಲ. ಮಿಗಿಲಾಗಿ, ನನ್ನ ಹೆತ್ತವರು ನನ್ನ ಮದುವೆಯ ಬಗ್ಗೆ ತಮ್ಮದೇ ನಿರೀಕ್ಷೆ ಇಟ್ಕೊಂಡಿದ್ರು. ಅವರ ಮನಸ್ಸಿಗೆ ನೋವು ಕೊಡಬಾರದು ಅಂತ ನಾನು ಲವ್‌ ಮ್ಯಾರೇಜ್‌ ಆಗಲಿಲ್ಲ…

ನಿತ್ಯೋತ್ಸವ ಅಯ್ಯಪ್ಪ ನಿತ್ಯೋತ್ಸವ! :  ಸಾರ್‌, ನಿತ್ಯೋತ್ಸವ ಗೀತೆಯನ್ನು ಕೇಳಿದ ಜನರೆಲ್ಲಾ ಭಾವಪರವಶರಾಗುತ್ತಾರೆ. ಆ ಪದ್ಯ ಬೇರೆ ಯಾವುದೋ ಕಾರಣಕ್ಕೆ ನಿಮ್ಮನ್ನೂ ಹಾಗೆ ಕಾಡಿದ್ದುಂಟೇ?- ಹೀಗೊಮ್ಮೆ ಕೇಳಿದ್ದಕ್ಕೆ, ತುಂಬಾ ಒಳ್ಳೆಯ ಪ್ರಶ್ನೆ ಕೇಳಿದೆ ಕಣಯ್ನಾ. ಒಮ್ಮೆ ಏನಾಯ್ತು ಗೊತ್ತ? ಅವತ್ತೂಂದು ಸಂಜೆ ಪದ್ಮನಾಭ ನಗರದ ನಮ್ಮ ಮನೆಯಿಂದ ವಾಕ್‌ ಹೊರಟೆ. ಆಗಿನ್ನೂ ಬೆಂಗಳೂರು ಇಷ್ಟು ಬೆಳೆದಿರಲಿಲ್ಲ. ನಮ್ಮ ಮನೆಯಿಂದ ಒಂದೆರಡು ಕಿ ಮೀ ದೂರ ಹೋಗಿದ್ದೇನೆ: ಅಲ್ಲಿ ಒಂದಷ್ಟು ಜನ ಅಯ್ಯಪ್ಪ ಭಕ್ತರು ಮೈಮರೆತು ಭಜನೆ ಮಾಡ್ತಾ ಇದ್ದಾರೆ. ಏನಂತ? ನಿತ್ಯೋತ್ಸವ, ಅಯ್ಯಪ್ಪ ನಿತ್ಯೋತ್ಸವ ಅಂತ! ನಿತ್ಯೋತ್ಸವದ ಸಾಲುಗಳಿಗೆ ಅವರು, ಅಯ್ಯಪ್ಪನನ್ನು ಕುರಿತ ಪದಗಳನ್ನು ಸೇರಿಸಿಕೊಂಡು ಹಾಡ್ತಾ ಇದ್ರು! ನನಗೋ, ಖುಷಿ. ಬೆರಗು. ಒಂದು ಪದ್ಯ, ಈ ಮಟ್ಟಕ್ಕೆ ಜನರನ್ನು ತಲುಪಲು ಸಾಧ್ಯವಾ ಅನ್ನಿಸಿತು. ಸ್ವಲ್ಪ ಸಮಯದ ನಂತರ ಆ ಭಕ್ತರನ್ನು ಕೇಳಿದೆ- ಯಾವುದಪ್ಪಾ ಇದು ಹೊಸ ಹಾಡು? ಅಂತ… ನಮ್ಮ ಗುರುಸ್ವಾಮಿಗಳು ಇದನ್ನು ಹೇಳಿ ಕೊಟ್ಟಿದ್ದಾರೆ ಸ್ವಾಮಿ. ಬಹಳ ಚೆನ್ನಾಗಿದೆ ಇದು- ಅಂದಿದ್ದರು ಆ ಜನ. ಟೈಮ್‌ ಪಾಸ್‌ ಗೆ ಅಂತ ನಾನು ಬರೆದ ಪದ್ಯ. ಅದು. ಗಾಯಕ- ಸಂಗೀತಗಾರರ ಕೈಗೆ ಸಿಕ್ಕಿ ಭಾವಗೀತೆ ಆಯ್ತು. ಇಲ್ಲಿ ಒಬ್ಬ ಗುರುಸ್ವಾಮಿ ಗೆ ಸಿಕ್ಕಿ ಭಕ್ತಿ ಗೀತೆ ಕೂಡ ಆಯ್ತಲ್ಲ ಅನ್ನಿಸಿ ತುಂಬಾ ಖುಷಿ ಆಯ್ತು…

ಕಾರ್‌ ಇದ್ರೆ ತಾನೇ ರಗಳೆ? : ಸಾರ್‌, ನಿಮ್ಮ ವಾರಿಗೆಯ ಎಲ್ಲರ ಬಳಿಯೂ ಕಾರ್‌ ಇದೆ. ನೀವು ಯಾಕೆ ಸಾರ್‌ ಕಾರ್‌ ತಗೊಳ್ಳಲಿಲ್ಲ – ಅದೊಮ್ಮೆ ಈ ಪ್ರಶ್ನೆಯನ್ನೂ ನಿಸಾರ್‌ ಅವರಿಗೆ ಕೇಳಿದ್ದೆ. ಹೋ, ಅದೊಂದು ದೊಡ್ಡ ಕಥೆ ಕಣಯ್ನಾ, ತುಂಬಾ ಹಿಂದೆ ಕೆನರಾ ಬ್ಯಾಂಕ್‌ನವರು ಸಾಹಿತಿಗಳಿಗೆ ಕಾರ್‌ ಲೋನ್‌ ಕೊಡ್ತಾ ಇದ್ರು. ಆ ಸ್ಕೀಮ್‌ನಲ್ಲಿ ನಾನೂ ಒಂದು ಕಾರ್‌ ತಗೊಂಡಿದ್ದೆ. ಒಬ್ಬ ಡ್ರೈವರ್‌ನನ್ನೂ ಇಟ್ಕೊಂಡಿದ್ದೆ. ಒಂದುಸರ್ತಿ ನಮ್ಮ ಕಾರ್‌ ಪಾದಚಾರಿ ಒಬ್ಬರಿಗೆ ಗುದ್ದಿ ಬಿಡ್ತು. ಅವರಿಗೆ ಎಲ್ಲಾ ಚಿಕಿತ್ಸೆ ಕೊಡಿಸಿ, ಪರಿಹಾರ ಕೊಡುತ್ತೇವೆ ಅಂತ ಒಪ್ಪಿದ ನಂತರವೂ ಮತ್ತಷ್ಟು ದುಡ್ಡು ಕೀಳಲು ಆ ಜನ ನಾನಾ ಬಗೆಯ ಕಿರಿಕಿರಿ ಮಾಡಿದ್ರು. ಅದರಿಂದ ಬಹಳ ಬೇಸರ ಆಯ್ತು. ಕಾರ್‌ ಇದ್ರೆ ತಾನೇ ಇದೆಲ್ಲಾ ರಗಳೆ ಅನ್ನಿಸಿ ಅದನ್ನು ಮಾರಿಬಿಟ್ಟೆ …

Advertisement

Udayavani is now on Telegram. Click here to join our channel and stay updated with the latest news.

Next