ಉಡುಪಿ: ಸಂಪೂರ್ಣ ಜೀರ್ಣೋದ್ಧಾರಗೊಂಡ ಶ್ರೀ ಭಗವಾನ್ ನಿತ್ಯಾನಂದಸ್ವಾಮಿ ಮಂದಿರ ಮಠದಲ್ಲಿ ಪ್ರತಿಷ್ಠಾಪಿಸಲ್ಪಡುವ ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹದ ಮೆರವಣಿಗೆಯು ರವಿವಾರ ಅದ್ದೂರಿಯಿಂದ ಜರಗಿತು.
ಕೊಡವೂರು ಶಿರ್ಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಬೆಂಗಳೂರು ಎಂಇಎಂಜಿ ಅಧ್ಯಕ್ಷ ಡಾ| ರಂಜನ್ ಪೈಯವರು ದೀಪ ಪ್ರಜ್ವಲಿಸಿ, ಮುಂಬಯಿ ಉದ್ಯಮಿ ಕೆ.ಕೆ.ಆವರ್ಶೇಕರ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮಾಹೆ ವಿ.ವಿ.ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ನಿತ್ಯಾನಂದ ಸ್ವಾಮಿ ಮಂದಿರ ಮಠದ ಅಧ್ಯಕ್ಷ ಕೊಡವೂರು ದಿವಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ , ಕಾಞಂಗಾಂಡ್ ಶ್ರೀ ನಿತ್ಯಾನಂದ ಟ್ರಸ್ಟ್‌ನ ಕೆ. ಮೋಹನಚಂದ್ರನ್ ನಂಬಿಯಾರ್, ಎಂ. ನರಸಿಂಹ ಶೆಣೈ ಉಪಸ್ಥಿತರಿದ್ದರು.
ಜನಪ್ರತಿನಿಧಿಗಳು, ಪ್ರಮುಖ ಉದ್ಯಮಿಗಳು, ಗಣ್ಯರು ಸಹಿತ ನೂರಾರು ಮಂದಿ ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಮಂದಿರದಿಂದ ಹೊರಟ ಶೋಭಾಯಾತ್ರೆ ವಾಹನದ ಮೂಲಕ ಗೋವಿಂದ ಕಲ್ಯಾಣ ಮಂಟಪಕ್ಕೆ ಬಂದು ಅಲ್ಲಿಂದ ಕಾಲ್ನಡಿಗೆ ಮೂಲಕ ಜೋಡುಕಟ್ಟೆ, ಡಯಾನ ಸರ್ಕಲ್ ಮಾರ್ಗವಾಗಿ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠಕ್ಕೆ ತರಲಾಯಿತು.
ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ವಿವಿಧ ವೇಷಭೂಷಣಗಳು, ಪುರುಷ, ಮಹಿಳೆಯರ ಚಂಡೆ ವಾದನ, ಡೊಳ್ಳು ಕುಣಿತ, ಕೊಂಬು, ಕಹಳೆ, ನೂರಕ್ಕೂ ಮಿಕ್ಕಿ ಭಜನಾ ತಂಡಗಳಿಂದ ಭಜನೆ, ಸ್ಯಾಕ್ಸೋಫೋನ್ ವಾದನ, ಕೇರಳದ ಚಂಡೆ ವಾದನ, ಕೇರಳದ ಮಹಿಳೆಯರಿಂದ ಮುತ್ತುಕುಡ ಗಮನ ಸೆಳೆಯಿತು.