ಮುಂಬೈ: ರಿಲಯನ್ಸ್ ಫೌಂಡೇಶನ್ ಸ್ಥಾಪಕ ಅಧ್ಯಕ್ಷೆ, ಉದ್ಯಮಿ ನೀತಾ ಅಂಬಾನಿ ಬುಧವಾರ (ನವೆಂಬರ್ 01) ಸುಮಾರು 3,000 ಬಡ ವಿದ್ಯಾರ್ಥಿಗಳಿಗೆ ಸ್ವತಃ ಊಟವನ್ನು ಬಡಿಸುವ ಮೂಲಕ ತಮ್ಮ 60ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡರು.
ನೀತಾ ಅಂಬಾನಿ ಅವರು ಮುಂಬೈನಲ್ಲಿ ಆರ್ಥಿಕವಾಗಿ ಹಿಂದುಳಿದ, ಸೌಲಭ್ಯ ವಂಚಿತ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ನೀತಾ ಅಂಬಾನಿ ಬೃಹತ್ ಗಾತ್ರದ ಬರ್ತ್ ಡೇ ಕೇಕ್ ಕತ್ತರಿಸಿ ಮಕ್ಕಳಿಗೆ ಹಂಚಿ, ಮಕ್ಕಳ ಕೈಕುಲುಕಿ ಸಂತಸ ವ್ಯಕ್ತಪಡಿಸಿದ್ದರು.
ನೀತಾ ಅಂಬಾನಿಯವರು ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ಮನೋರಂಜನಾ ಕಾರ್ಯಕ್ರಮವನ್ನು ವೀಕ್ಷಿಸುವ ಜತೆಗೆ, ಉಡುಗೊರೆಗಳನ್ನು ಪಡೆದು ಸಂಭ್ರಮಿಸಿದ್ದರು ಎಂದು ವರದಿ ತಿಳಿಸಿದೆ.
ರಿಲಯನ್ಸ್ ಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಅವರ 60ನೇ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ 1.4 ಲಕ್ಷ ಜನರಿಗೆ ಅನ್ನಸಂತರ್ಪಣೆ ನಡೆದಿತ್ತು. ದೇಶದ 15 ರಾಜ್ಯಗಳಲ್ಲಿ ಅನ್ನ ಸಂತರ್ಪಣೆ ಹಾಗೂ ರೇಷನ್ ಕಿಟ್ಸ್ ಅನ್ನು ಜನರಿಗೆ ವಿತರಿಸಲಾಗಿತ್ತು ಎಂದು ರಿಲಯನ್ಸ್ ಫೌಂಡೇಶನ್ ಪ್ರಕಟನೆ ತಿಳಿಸಿದೆ.
ನೀತಾ ಅಂಬಾನಿಯವರು ಶಿಕ್ಷಣತಜ್ಞೆಯಾಗಿ, ದಾನಿಯಾಗಿ, ಕಲೆ, ಉದ್ಯಮ, ಕ್ರೀಡೆಗಳ ಪೋಷಕರಾಗಿ, ಮಕ್ಕಳ ಹಕ್ಕುಗಳ ಕಾಳಜಿ ಹೊಂದಿರುವ ಜೊತೆಗೆ ಲಕ್ಷಾಂತರ ಭಾರತೀಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿ ನೀತಾ ಅಂಬಾನಿಯವರದ್ದಾಗಿದೆ.