ಬೆಳಗಾವಿ: ಪ್ರವಾಹದ ನೀರಿನಲ್ಲಿ ಸುಮಾರು 2.5 ಕಿ.ಮೀ. ಈಜುತ್ತ ದಡ ಸೇರುವ ಮೂಲಕ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗಿಯಾದ ಯುವಕ ಬೆಳ್ಳಿ ಪದಕ ಗಳಿಸುವ ಮೂಲಕ ಸಾಹಸ ಮೆರೆದಿದ್ದಾನೆ.
ಬೆಳಗಾವಿ ತಾಲೂಕಿನ ಮಣ್ಣೂರ ಗ್ರಾಮದ ನಿಶಾನ್ ಮನೋಹರ ಕದಮ ಎಂಬ 19 ವರ್ಷದ ಯುವಕ ಪ್ರವಾಹವನ್ನೇ ಎದುರಿಸಿ ದಡ ಸೇರಿ ಪದಕ ಗೆದ್ದು ಬೀಗಿದ್ದಾನೆ.
ಜಿಲ್ಲೆಯಾದ್ಯಂತ ಅಪ್ಪಳಿಸಿದ ಭೀಕರ ಪ್ರವಾಹ ಬೆಳಗಾವಿ ತಾಲೂಕಿನ ಮಣ್ಣೂರ ಗ್ರಾಮಕ್ಕೂ ತಟ್ಟಿತ್ತು. ಕಳೆದ 10-15 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಾರ್ಕಂಡೇಯ ನದಿಗೆ ಪ್ರವಾಹ ಬಂದಿತ್ತು. ಇದರಿಂದ ಇಡೀ ಊರಿನ ಸುತ್ತಲೂ ನೀರು ಆವರಿಸಿಕೊಂಡಿತ್ತು. ಊರಿನಿಂದ ಮುಖ್ಯ ರಸ್ತೆಗೆ ಬರಲು ಮೂರು ಮಾರ್ಗಗಳಿದ್ದರೂ ಎಲ್ಲ ಕಡೆಯೂ ನದಿ ನೀರಿನಿಂದ ರಸ್ತೆಗಳೆಲ್ಲ ಕಡಿತಗೊಂಡಿದ್ದವು.
ಆ. 8ರಿಂದ 12ರ ವರೆಗೆ ಆಯೋಜನೆಗೊಂಡಿದ್ದ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ನಿಶಾನ್ ಕದಮ ಹೋಗಬೇಕಾಗಿತ್ತು. ಧಾರಾಕಾರ ಮಳೆ ಸುರಿದು ರಸ್ತೆಗಳೆಲ್ಲ ಬಂದ್ ಆಗಿದ್ದರಿಂದ 3 ದಿನ ಬಾಕ್ಸಿಂಗ್ ತರಬೇತಿಗೂ ಹೋಗಿರಲಿಲ್ಲ. ಅ. 7ರಂದು ನಿಶಾನ್ ಊರಿನಿಂದ ಮುಖ್ಯ ರಸ್ತೆಗೆ ಹೋಗಿ ಆಲ್ಲಿಂದ ಬೆಳಗಾವಿ ನಗರ ತಲುಪಿ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆ ಇತ್ತು. ಒಂದೆಡೆ ಈ ಹಳ್ಳಿಯ ಸುತ್ತಲೂ ಮಾರ್ಕಂಡೇಯ ನದಿ ನೀರು ಆವರಿಸಿದ್ದರಿಂದ ಹೇಗೆ ಹೋಗುವುದು ಎಂಬ ಆತಂಕಗೊಂಡಿದ್ದನು.
ಮಗ ನಿಶಾನ್ ಈ ಸಾಹಸಕ್ಕೆ ತಂದೆ ಮನೋಹರ ಸಾಥ್ ನೀಡಿದರು. ಪುತ್ರನ ಕೈ ಹಿಡಿದು ಈಜುತ್ತ ಹೋದರು. ಕೆಲವೊಂದು ಕಡೆಗೆ ನೀರಿನ ಆಳ, ಇನ್ನೊಂದು ಕಡೆಗೆ ಎದೆ ಭಾಗದವರೆಗೆ ನೀರು ಆವರಿಸಿಕೊಂಡಿತ್ತು. ತಂದೆ ಮನೋಹರ ಅವರೊಂದಿಗೆ ನಿಶಾನ್ ಸುಮಾರು 2.5 ಕಿ.ಮೀ. ಈಜುತ್ತ ಹೋದನು. ತಂದೆ ಹಾಗೂ ಮಗ ಇಬ್ಬರೂ ಬೆನ್ನಿಗೆ ಹಗ್ಗ ಕಟ್ಟಿಕೊಂಡು ಈಜಿದರು. ನೀರು ರಭಸವಾಗಿ ಹರಿಯುತ್ತಿರುವುದರಿಂದ ರಕ್ಷಣೆಗಾಗಿ ಹಗ್ಗ ಕಟ್ಟಿಕೊಂಡಿದ್ದರು. ತಂದೆ ಮನೋಹರ ಹೆಗಲಿಗೆ ಬ್ಯಾಗ್ ಕಟ್ಟಿಕೊಂಡಿದ್ದರು. ಪ್ಲಾಸ್ಟಿಕ್‌ನಿಂದ ಬ್ಯಾಗ್ ಪ್ಯಾಕ್ ಮಾಡಿದ್ದರು. ಬಳಿಕ ಇಷ್ಟೆಲ್ಲ ಕಷ್ಟಪಟ್ಟು ಉಚಗಾಂವ ಕ್ರಾಸ್ ತಲುಪಿ ಅಲ್ಲಿಂದ ಬೆಳಗಾವಿ ಮೂಲಕ ಬೆಂಗಳೂರು ತಲುಪಿದರು. ಮಗನನ್ನು ಬಿಟ್ಟು ಮನೋಹರ ಅವರು ಮತ್ತೆ ಈಜುತ್ತ ತಮ್ಮೂರಿಗೆ ವಾಪಸ್ಸು ಮರಳಿದರು.
ಬೆಳಗಾವಿಯ ಜ್ಯೋತಿ ಪಪೂ ಕಾಲೇಜಿನಲ್ಲಿ ದ್ವಿತೀಯ ಪಿಯು ಮುಗಿಸಿರುವ ನಿಶಾನ್ ಕದಮ ಎರಡು ವರ್ಷಗಳಿಂದ ನಗರದ ಎಂ.ಜಿ. ನ್ಪೋರ್ಟಿಂಗ್ ಅಕಾಡೆಮಿಯಲ್ಲಿ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದಾನೆ. ನಿಶಾನ್‌ನನ್ನು ಮೊದಲು ಭಜನಾ ಮಂಡಳಕ್ಕೆ ಸೇರಿಸಲಾಗಿತ್ತು. ಅದರಲ್ಲಿ ಆಸಕ್ತಿ ಇಲ್ಲದ್ದಕ್ಕೆ ಬಿಟ್ಟು ಬಂದಿದ್ದನು. ಬಳಿಕ ಟಿವಿಯಲ್ಲಿ ಬಾಕ್ಸಿಂಗ್ ನೋಡುವ ಹವ್ಯಾಸ ಬೆಳೆಸಿಕೊಂಡು ಬಾಕ್ಸಿಂಗ್‌ನಲ್ಲಿಯೇ ಮುಂದುವರಿದು ಅಕಾಡೆಮಿಗೆ ಸೇರಿಕೊಂಡನು. ನಿತ್ಯ 30 ಕಿ.ಮೀ. ಓಟ ಹಾಗೂ ಸೈಕ್ಲಿಂಗ್ ಮಾಡುತ್ತಿದ್ದನು ಎಂದು ನಿಶಾನ್‌ನ ತಂದೆ ಮನೋಹರ ಹೇಳಿದರು.
ಅರ್ಜುನ ಪ್ರಶಸ್ತಿ ಪುರಸ್ಕೃತ ಮುಕುಂದ ಕಿಲ್ಲೇಕರ ಅವರ ಬಳಿ ತರಬೇತಿ ಪಡೆಯುತ್ತಿದ್ದರು. ಗಜೇಂದ್ರ ತ್ರಿಪಾಟಿ ಕೂಡ ಇವರಿಗೆ ಕೋಚ್ ಆಗಿದ್ದಾರೆ. ಕರ್ನಾಟಕ ರಾಜ್ಯ ಆಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಹಾಗೂ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆದ ರಾಜ್ಯ ಮಟ್ಟದ ಸ್ಪರ್ಧೆಗೆ ಬೆಳಗಾವಿ ಜಿಲ್ಲೆಯಿಂದ 7 ಜನ ಸ್ಪರ್ಧಾಳುಗಳು ಆಯ್ಕೆಗೊಂಡಿದ್ದರು. ಇದರಲ್ಲಿ ನಾಗೇಶ ಪಾಟೀಲ ಚಿನ್ನ, ನಿಶಾನ್ ಕದಮ ಬೆಳ್ಳಿ, ಪೃಥ್ವಿರಾಜ ಚೌಹಾನ ಹಾಗೂ ಬದ್ರುದ್ದಿನ್ ದರ್ಗಾ ತಲಾ ಒಂದು ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
● ಭೈರೋಬಾ ಕಾಂಬಳೆ