Advertisement

ಬೇಸರ ಕಳೆಯುವ ನೇಸರಧಾಮದಲ್ಲಿ ಕುಡಿಯಲು ನೀರಿಲ್ಲ

06:05 AM Apr 12, 2018 | Team Udayavani |

ಬೈಂದೂರು: ಇಲ್ಲಿಗೆ ಸಮೀಪದ ಒತ್ತಿನೆಣೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ಕ್ಷಿತಿಜ ನೇಸರಧಾಮ ಈಗ ಜನಾಕರ್ಷಣೆ ಕಳೆದುಕೊಂಡಿದೆ. ಜಲರಾಶಿ, ಸೂರ್ಯಾಸ್ತ ವೀಕ್ಷಣೆಯ ಸೊಬಗು ಕಾಣಲು ಬರುವ ಪ್ರವಾಸಿಗರಿಗೆ ಇಲ್ಲಿ ನೀರಿಲ್ಲ. ಜತೆಗೆ ಒತ್ತಿನೆಣೆಯ ಭೂಕುಸಿತದಿಂದ ರಸ್ತೆ ನಾಮಾವಶೇಷವಾಗಿದ್ದು, ಜನರಿಗೆ ಮಾಹಿತಿ ಇಲ್ಲವಾಗಿದೆ. 
 
ವಿಶೇಷತೆಗಳೇನು? 
1996ರಲ್ಲಿ ಪ್ರಾರಂಭವಾದ ಈ ಧಾಮದಲ್ಲಿ ಪ್ರವಾಸಿಗರಿಗೆ  5 ಕಾಟೇಜ್‌ಗಳಿದ್ದು ಅರಣ್ಯ ಇಲಾಖೆ ಅಧಿಕಾರಿಗಳಿಗಾಗಿ 2 ಕಾಟೇಜ್‌ಗಳಿವೆ. ಎಲ್ಲವೂ ಹವಾನಿಯಂತ್ರಿತ. ಇದರೊಂದಿಗೆ ಚಿಣ್ಣರ ಪಾರ್ಕ್‌, ವಿವಿಧ ಜಾತಿಯ ಸಸ್ಯ, ವೃಕ್ಷಗಳು, ಅವುಗಳ ಕುರಿತ ಮಾಹಿತಿ, ಪ್ರಕೃತಿ ಪರಿಸರ ವಾತಾವರಣಕ್ಕೆ ಸಂಬಂಧಿಸಿ ಮಾಹಿತಿ ಇದೆ. ಪೂರ್ವಸೂಚನೆ ನೀಡಿದರೆ, ಆಹಾರದ ವ್ಯವಸ್ಥೆಗೆ ಇಲಾಖಾ ಸಿಬಂದಿಯೂ ಇದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಸೂರ್ಯಾಸ್ತಮಾನ ವೀಕ್ಷಣೆಗೆ ಅಟ್ಟಳಿಗೆಯಿದೆ. ಸಮುದ್ರತೀರಕ್ಕೆ ಹೋಗಲು ಅವಕಾಶ ಇದೆ. ಇದಕ್ಕಾಗಿ ಸಾರ್ವಜನಿಕರಿಗೆ 10 ರೂ., ಮಕ್ಕಳಿಗೆ 5 ರೂ. ವಿಧಿಸಲಾಗುತ್ತದೆ. ಕೊಠಡಿಗಳಿಗೆ 1 ಸಾವಿರದಿಂದ 1,700 ರೂ.ವರೆಗೆ ದರವಿದೆ. ಬೇಸಿಗೆ ಸಂದರ್ಭ ಸಂಜೆ ಮಾತ್ರ ಭೇಟಿಯ ಲಾಭ ಪಡೆಯಬಹುದು.


ಈಗ ಜನ ಇಲ್ಲ, ಬಂದರೆ ನೀರಿಲ್ಲ
ಮೊದಲು ಸಾಮಾನ್ಯ ಜನಸಂದಣಿ ಇರುತ್ತಿತ್ತು. ಪ್ರವಾಸಿಗರು ಬರುತ್ತಿದ್ದರು. ಆದರೆ ಈಗ ದಾರಿಯೇ ಗೊತ್ತಾಗದ ಕಾರಣ ಜನರೇ ಬರುತ್ತಿಲ್ಲ ಎನ್ನುವಷ್ಟು ಕಡಿಮೆಯಾಗಿದೆ.

Advertisement

ಇಲಾಖೆಯವರು ಸೂಚನಾ ಫ‌ಲಕ ಹಾಕಿದಲ್ಲಿ  ಹೆದ್ದಾರಿ ಅಗೆತ ಆರಂಭವಾಗುತ್ತದೆ. ಮೂರ್ನಾಲ್ಕು ಬಾರಿ ಫ‌ಲಕ ಸ್ಥಳಾಂತರ ಆಯಿತು. ಈಗ ಹೆದ್ದಾರಿ ಬದಿ ಫ‌ಲಕವೇ ಇಲ್ಲ. ಆದ್ದರಿಂದ ಹೊಸಬರಿಗೆ ಅರಿವಾಗುವುದೇ ಇಲ್ಲ. ಎಪ್ರಿಲ್‌ ಆರಂಭದ ನಂತರ ಇಲ್ಲಿ  ನೀರಿನ ಸಮಸ್ಯೆ ಉಂಟಾಗುತ್ತದೆ. ಶರಧಿಯ ಜಲರಾಶಿಯನ್ನು ನೋಡಲು ಬಂದರೂ “ನೋಡಲು ಮಾತ್ರ ಕುಡಿಯಲು ನೀರಿಲ್ಲ’ ಎಂದಿದೆ. ಕೊಳವೆ ಬಾವಿ, ಬಾವಿ ವ್ಯವಸ್ಥೆ ಸಾಕಾಗದೇ ಟ್ಯಾಂಕರ್‌ ಮೂಲಕ ನೀರು ತರಿಸುವ ಸಂದರ್ಭ ಬರುತ್ತಿದೆ. ಈ ಭಾಗದ ಹೆಚ್ಚಿನ ಮನೆಗಳಿಗೂ ನೀರಿನ ಸಮಸ್ಯೆ ಇದೆ.

ಎಲ್ಲಿದೆ?
ಬೈಂದೂರು ಶಿರೂರು ರಸ್ತೆಯಲ್ಲಿ ಭಾರೀ ಭೂಕುಸಿತವಾದ ಒತ್ತಿನೆಣೆಯ ರಾಘವೇಂದ್ರ ಮಠದ ಬಳಿಯಿಂದ ಸುಮಾರು 1.5ಕಿಮೀ. ಒಳಗೆ ಕ್ಷಿತಿಜ ನೇಸರಧಾಮ ಇದೆ. ಈಗಷ್ಟೇ ರಸ್ತೆ ಅಭಿವೃದ್ಧಿ ಕಾರ್ಯಕ್ಕಾಗಿ ಜಲ್ಲಿ ಹಾಸಲಾಗಿದೆ. ಬೈಂದೂರು ಸುರಕ್ಷತಾ ಅರಣ್ಯದ ವಿಸ್ತರಣಾ ಕ್ಷೇತ್ರದಲ್ಲಿ 10 ಹೆಕ್ಟೇರ್‌ನಲ್ಲಿ ಬೆಳೆದ ಗಿಡಗಳ ನಡುವೆ ವಿಶ್ರಾಂತಿ ಧಾಮವಿದೆ. 

ದಾರಿ ಯಾವುದಯ್ಯಾ?
ಕಳೆದ ಬಾರಿ ಮುರ್ಡೇಶ್ವರಕ್ಕೆ ಹೋಗುವಾಗ ಇಲ್ಲಿಗೆ ಭೇಟಿ ನೀಡಿದ್ದೆವು. ಆದರೆ ಈ ಬಾರಿ ದಾರಿಯೇ ಸಿಗಲಿಲ್ಲ. ಆಚೀಚೆ ರಾ.ಹೆ.ಯಲ್ಲಿ ಹುಡುಕಾಟ ನಡೆಸಿ ದಾರಿ ತಪ್ಪಿ ಕೊನೆಗೆ ಇಲ್ಲಿಯವರೆಗೆ ಬರುವಂತಾಯಿತು.
 - ಪ್ರಕಾಶ್‌ ಕೆ., 
ಬರಿಮಾರು, ಪ್ರವಾಸಿಗರು 

– ಲಕ್ಷ್ಮೀ  ಮಚ್ಚಿನ

Advertisement
Advertisement

Udayavani is now on Telegram. Click here to join our channel and stay updated with the latest news.

Next