ಬೆಂಗಳೂರು: “ಈ ಬಾರಿ ಸಂಗೀತ ಮತ್ತು ನೃತ್ಯಕಲಾ ವಿಭಾಗದಲ್ಲಿ ನಾನೇ ಹೆಸರು ಸೂಚಿಸಿದ ಐವರಿಗೆ ಪ್ರಶಸ್ತಿ ಬಂದಿದೆ’ ಎಂದು ಹೇಳುವ ಮೂಲಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆ ಹಾಗೂ ನೃತ್ಯಗಾರ್ತಿ ನಿರುಪಮಾ ರಾಜೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
“ಸುಮಾರು 10 ದಿನಗಳ ಕಾಲ ನಾವು ವಿಧಾನ ಸೌಧ, ವಿಕಾಸ ಸೌಧದಲ್ಲಿ ಸಭೆ ನಡೆಸಿದ್ದೆವು. ರಾಜ್ಯೋತ್ಸವ ಪ್ರಶಸ್ತಿಗಾಗಿ ಸುಮಾರು 2 ಸಾವಿರ ಅರ್ಜಿಗಳು ಬಂದಿದ್ದವು. ಅವುಗಳ ಸಂಖ್ಯೆ ಕಡಿಮೆಗೊಳಿಸ ಲಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರಾದ ಸಿ.ಟಿ. ರವಿ ಅವರಿಗೆ ನಾನು, ಐವರು ಸಾಧಕರ ಹೆಸರು ಹೇಳಿದ್ದೆ. ಆ ಐವರಿಗೂ ಪ್ರಶಸ್ತಿ ಬಂದಿರುವುದು ಖುಷಿ ಕೊಟ್ಟಿದೆ’ ಎಂದು ವಿಡಿ ಯೋದಲ್ಲಿ ನಿರುಪಮಾ ರಾಜೇಂದ್ರ ಹೇಳಿದ್ದಾರೆ.
ಈ ವಿಡಿಯೋ ಫೆಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆಯ್ಕೆ ಸಮಿತಿಯಲ್ಲಿ ಇಂತಹ ಸದಸ್ಯರಿದ್ದರೆ ರಾಜ್ಯೋತ್ಸವ ಪ್ರಶಸ್ತಿಯ ಮೌಲ್ಯ ಕುಸಿಯುತ್ತದೆ ಎಂದು ಕೆಲವರು ಟೀಕಿಸಿದ್ದಾರೆ. “ಎಷ್ಟು ಜನಕ್ಕೆ ಪ್ರಶಸ್ತಿ ಕೊಡಿಸುವುದರಲ್ಲಿ ಯಶಸ್ವಿ ಆದೆ ಎಂದೆಲ್ಲ ಬಣ್ಣಿಸಿಕೊಂಡಿದ್ದಾರೆ.
ಪ್ರಶಸ್ತಿ ಸಮಿತಿ ಸದಸ್ಯರಿಗೆ ಅವರದ್ದೇ ಆದ ಜವಾಬ್ದಾರಿ ಜತೆಗೆ ನೀತಿ ಸಂಹಿತೆಯೂ ಇರುತ್ತದೆ. ಇದರ ಅರಿವು ಇವರಿಗೆ ಇಲ್ಲದಿರುವುದು, ಜವಾಬ್ದಾರಿಯ ಬಗ್ಗೆ ತಾತ್ಸಾರ ಇರುವುದು ಪ್ರಶಸ್ತಿಯ ಮೌಲ್ಯವನ್ನು ಕುಗ್ಗಿಸುತ್ತದೆ’ ಎಂದಿದ್ದಾರೆ. ತನ್ನಿಂದಾಗಿ ಇಂತಿಂಥವರಿಗೆ ಪ್ರಶಸ್ತಿ ಬಂತು ಎಂದು ಬಹಿರಂಗವಾಗಿ ಹೇಳಿಕೊಳ್ಳುವ ನಡವಳಿಕೆ ಸರಿಯಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಬಗ್ಗೆ ನಿರುಪಮಾ ರಾಜೇಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ಆದರೆ, ಪ್ರಶಸ್ತಿ ಆಯ್ಕೆ ಯಾವಾಗಲೂ ಸಾಧನೆಯ ಮಾನದಂಡಗಳ ಮೇಲೆ ನಡೆಯುತ್ತದೆ ಎಂದಷ್ಟೇ ಹೇಳಬಲ್ಲೆ.
-ಎಸ್.ರಂಗಪ್ಪ, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ