Advertisement

ಪಕ್ಷಕ್ಕೆ ಗುಡ್‌ಬೈ ಹೇಳಲು ಮುಂದಾದ ಮಹಾರಾಷ್ಟ್ರದ ನಾಯಕ ನಿರುಪಮ್‌

11:43 AM Oct 05, 2019 | Team Udayavani |

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೇವಲ 2 ವಾರಗಳು ಬಾಕಿಯಿರುವಂತೆಯೇ ಮುಂಬೈ ಕಾಂಗ್ರೆಸ್‌ನೊಳಗಿನ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್‌ ಹಂಚಿಕೆಗೆ ಸಂಬಂಧಿಸಿ ಸ್ಥಳೀಯ ನಾಯಕರ ನಡುವೆ ಇದ್ದ ಅಸಮಾಧಾನ ಹೊರಬಿದ್ದಿದ್ದು, ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸಂಜಯ್‌ ನಿರುಪಮ್‌ ಅವರಂತೂ ತಾವು ಪಕ್ಷದ ಪರ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ.

Advertisement

ಅಷ್ಟೇ ಅಲ್ಲ, ಪಕ್ಷವು ನನ್ನೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ, ನಾನು ಕಾಂಗ್ರೆಸ್‌ಗೆ ಗುಡ್‌ಬೈ ಹೇಳುವ ಸಮಯ ದೂರವಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ ಎಂದೂ ನಿರುಪಮ್‌ ಹೇಳಿದ್ದಾರೆ. ಸ್ಥಳೀಯ ನಾಯಕರ ಹೆಸರೆತ್ತದೇ ತಮ್ಮ ಅಸಮಾಧಾನವನ್ನು ಟ್ವೀಟ್‌ ಮೂಲಕ ಹೊರಹಾಕಿರುವ ಅವರು, “ಕಾಂಗ್ರೆಸ್‌ ಪಕ್ಷಕ್ಕೆ ನನ್ನ ಸೇವೆ ಅಗತ್ಯವಿಲ್ಲ ಎಂದು ಕಾಣುತ್ತಿದೆ. ನಾವು ಮುಂಬೈನಲ್ಲಿ ಒಬ್ಬ ಅಭ್ಯರ್ಥಿಯ ಹೆಸರನ್ನು ಸೂಚಿಸಿದ್ದೆ.

ಆದರೆ, ಅದನ್ನೂ ತಿರಸ್ಕರಿಸಲಾಗಿದೆ ಎಂದು ಗೊತ್ತಾಯಿತು. ಆ ವ್ಯಕ್ತಿಗೆ ಟಿಕೆಟ್‌ ನೀಡದಿದ್ದರೆ ನಾನು ಪಕ್ಷದ ಪರ ಪ್ರಚಾರದಲ್ಲಿ ತೊಡಗುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಈಗಲೂ ಅದನ್ನು ಸ್ಪಷ್ಟಪಡಿಸುತ್ತಿದ್ದೇನೆ. ಇದು ನನ್ನ ಅಂತಿಮ ತೀರ್ಮಾನ’ ಎಂದು ಬರೆದುಕೊಂಡಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ನಿರುಪಮ್‌ರನ್ನು ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಅವರು ನಿರಂಕುಶ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಕೇಂದ್ರದ ಮಾಜಿ ಸಚಿವ ಮಿಲಿಂದ್‌ ದೇವೊರಾರನ್ನು ನೇಮಕ ಮಾಡಲಾಗಿತ್ತು.

ಆದರೆ, ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ದೇವೊರಾ ಕಳೆದ ತಿಂಗಳಷ್ಟೇ ರಾಜೀನಾಮೆ ನೀಡಿದ್ದರು. ಈಗಾಗಲೇ ಹಲವು ನಾಯಕರು ಬಿಜೆಪಿ ಸೇರಿರುವ ಕಾರಣ, ಕಂಗೆಟ್ಟಿರುವ ಕಾಂಗ್ರೆಸ್‌ಗೆ ಈಗ ನಾಯಕರ ಒಳಜಗಳ ಹೊಸ ತಲೆನೋವು ಸೃಷ್ಟಿಸಿದೆ.

Advertisement

ಬಿಜೆಪಿಗೆ ಸೇರ್ಪಡೆ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರ ಪುತ್ರ, ಕಾಂಗ್ರೆಸ್‌ನ ಮಾಜಿ ಶಾಸಕ ನಿತೇಶ್‌ ರಾಣೆ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅ.21ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅವರು ಕೊಂಕಣ ಕರಾವಳಿಯ ಕಾನ್‌ಕಾವಿÉ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಛೋಟಾ ರಾಜನ್‌ ಸೋದರನಿಗೆ ಟಿಕೆಟ್‌: ಬಿಜೆಪಿ ಮಿತ್ರಪಕ್ಷ, ಕೇಂದ್ರ ಸಚಿವ ರಾಮ್‌ದಾಸ್‌ ಅಠಾವಳೆ ನೇತೃತ್ವದ ಆರ್‌ಪಿಐ ಭೂಗತ ಪಾತಕಿ ಛೋಟಾ ರಾಜನ್‌ನ ಸಹೋದರ ದೀಪಕ್‌ ನಿಕಾಲೆjಗೆ ಪಕ್ಷದ ಟಿಕೆಟ್‌ ನೀಡಿದೆ. ಹಿಂದಿನ ಚುನಾವಣೆಯಲ್ಲೂ ಇದೇ ಪಕ್ಷದಿಂದ ಚೆಂಬೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಸೋತಿದ್ದ ದೀಪಕ್‌ಗೆ ಈ ಬಾರಿ ಫಾಲ್ಟನ್‌ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.

ವಾಟ್ಸ್‌ಆ್ಯಪ್‌ ಅಡ್ಮಿನ್‌ಗಳಿಗೆ ನೋಟಿಸ್‌: ಅಸೆಂಬ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿಗಳ ಕುರಿತು ಎಚ್ಚೆತ್ತಿರುವ ಮಹಾರಾಷ್ಟ್ರ ಪೊಲೀಸರು ಈಗ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳ ಅಡ್ಮಿನ್‌ಗಳಿಗೆ ನೋಟಿಸ್‌ ಜಾರಿ ಮಾಡುತ್ತಿದ್ದಾರೆ. ಅಹಿತಕರ ಘಟನೆಗಳಿಗೆ ಕಾರಣವಾಗುವಂಥ ಯಾವು ದೇ ರಾಜಕೀಯ ಕಾಮೆಂಟ್‌ಗಳನ್ನು, ಟೀಕೆಗಳನ್ನು ಹಾಕದಂತೆ, ಸುಳ್ಳು ಸುದ್ದಿ ಹಬ್ಬಿಸದಂತೆ ಗ್ರೂಪ್‌ನ ಎಲ್ಲ ಸದಸ್ಯರಿಗೂ ಸೂಚಿಸಬೇಕು ಎಂದು ನೋಟಿಸ್‌ನಲ್ಲಿ ಅಡ್ಮಿನ್‌ಗಳಿಗೆ ಎಚ್ಚರಿಸಲಾಗಿದೆ. ಅಲ್ಲದೆ, ಯೂಟ್ಯೂಬ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೂ ನೋಟಿಸ್‌ ಕಳುಹಿಸಲಾಗುತ್ತಿದ್ದು, ಶಾಂತಿ-ಸೌಹಾರ್ದತೆಗೆ ಧಕ್ಕೆ ತರುವಂಥ ವಿಡಿಯೋಗಳನ್ನು ಪೋಸ್ಟ್‌ ಮಾಡದಂತೆ ನಿರ್ದೇಶಿಸಲಾಗಿದೆ ಎಂದು ಪುಣೆಯ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next