Advertisement

ಮತ್ತೆ ಥ್ರಿಲ್ಲರ್‌ ಚಿತ್ರದಲ್ಲಿ ನಿರೂಪ್‌

09:57 AM Mar 07, 2020 | mahesh |

ಅನೂಪ್‌ ಭಂಡಾರಿ ನಿರ್ದೇಶನದ “ರಂಗಿತರಂಗ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿರೂಪ್‌ ಭಂಡಾರಿ, ಆ ನಂತರದ ದಿನಗಳಲ್ಲಿ “ರಾಜರಥ’, “ಆದಿಲಕ್ಷ್ಮೀ ಪುರಾಣ’ ಸಿನಿಮಾಗಳಲ್ಲಿ ನಟಿಸಿದ್ದು ಗೊತ್ತೇ ಇದೆ. ಅದರ ಜೊತೆಯಲ್ಲಿ ಅವರು, “ಅಮರ್‌’ ಚಿತ್ರದಲ್ಲೂ ಅತಿಥಿ ನಟರಾಗಿ ಕಾಣಿಸಿಕೊಂಡರು. ಮುಂದೆ ಯಾವ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಪ್ರಶ್ನೆ ಇತ್ತು. ಅದಕ್ಕೆ ಉತ್ತರ, ಪುನಃ ಥ್ರಿಲ್ಲರ್‌ ಜಾನರ್‌ ಸಿನಿಮಾ ಮಾಡುತ್ತಿದ್ದಾರೆ. ಹೌದು, ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಆದರೂ, ನಿರೂಪ್‌ ಭಂಡಾರಿ ಮಾಡಿರುವ ಹೊಸ ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರ ಹೊಸ ಇಮೇಜ್‌ ತಂದುಕೊಡಲಿದೆ ಎಂಬ ಭರವಸೆ ಕೂಡ ನಿರೂಪ್‌ ಅವರಿಗಿದೆ.

Advertisement

ಅಂದಹಾಗೆ, ಅವರ ಹೊಸ ಥ್ರಿಲ್ಲರ್‌ ಜಾನರ್‌ ಚಿತ್ರದ ಬಗ್ಗೆ ನಿರೂಪ್‌ ಭಂಡಾರಿ ಹೇಳುವುದೇನು ಗೊತ್ತಾ? “ನಾನೀಗ ಒಪ್ಪಿಕೊಂಡಿರುವ ಹೊಸ ಚಿತ್ರ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಇನ್ನು, ಆ ಚಿತ್ರವನ್ನು ಶೀತಲ್‌ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಆ ಚಿತ್ರಕ್ಕಿನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಆದರೆ, ಆ ಚಿತ್ರಕ್ಕೆ “ವಿಂಡೊ ಸೀಟ್‌’ ಎಂಬ ಹೆಸರಿಡಲಾಗಿದೆ ಎಂದು ಸುದ್ದಿಯಾಗುತ್ತಿದೆ. ಅದಿನ್ನೂ ಪಕ್ಕಾ ಆಗಬೇಕಷ್ಟೇ. ಇನ್ನು ಆ ಚಿತ್ರದಲ್ಲಿ ಸಂಜನಾ ಹಾಗು ಅಮೃತಾ ಅಯ್ಯಂಗಾರ್‌ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಆದಿಲಕ್ಷ್ಮೀ ಪುರಾಣ’ ಬಳಿಕ ಒಂದಷ್ಟು ಕಥೆಗಳು ಹುಡುಕಿ ಬಂದಿದ್ದು ನಿಜ. ಅಲ್ಲಿ ನನ್ನ ಪಾತ್ರ ಹೈಲೈಟ್‌ ಆಗಿರುವುದಕ್ಕಿಂತ ಚಿತ್ರವೇ ವಿಭಿನ್ನವಾಗಿರಬೇಕು. ಹೊಸ ಬಗೆಯ ಕಥೆ ಇದ್ದರೆ, ಮಜಾ ಇರುತ್ತೆ ಎಂದು ನಂಬಿದವನು ನಾನು. ಹಾಗಾಗಿ ಹೊಸ ಆಲೋಚನೆವುಳ್ಳ ಕಥೆ ಎದುರು ನೋಡುತ್ತಿದ್ದೇನೆ. “ರಂಗಿತರಂಗ’ ಥ್ರಿಲ್ಲರ್‌ ಸಿನಿಮಾ ಆಗಿತ್ತು. “ರಾಜರಥ’ ದಲ್ಲಿ ಕಾಲೇಜ್‌ ವಿದ್ಯಾರ್ಥಿ ಪಾತ್ರ ಮಾಡಿದ್ದೆ. “ಆದಿಲಕ್ಷ್ಮೀ ಪುರಾಣ’ ಚಿತ್ರದಲ್ಲಿ ಕಾಪ್‌ ಆಗಿ ಕಾಣಿಸಿಕೊಂಡಿದ್ದೆ. ಅದೊಂದು ರೀತಿ ಮತ್ತೂಂದು ಕಾಮಿಡಿ ಜಾನರ್‌ ಸಿನಿಮಾ ಆಗಿತ್ತು. ಈಗ ಪುನಃ ನಾನು “ರಂಗಿತರಂಗ’ ನಂತರ ಥ್ರಿಲ್ಲರ್‌ ಸಿನಿಮಾ ಮಾಡಿದ್ದೇನೆ. ಶೀತಲ್‌ ಶೆಟ್ಟಿ ಅವರು ಆ ಕಥೆ ಹೇಳಿದಾಗ, ಇದರಲ್ಲಿ ಹೊಸತನವಿದೆ. ಪಾತ್ರದಲ್ಲಿ ಗಟ್ಟಿತನವಿದೆ ಎನಿಸಿತು. ಇನ್ನು, ಆ ಪಾತ್ರಕ್ಕೆ ಸಾಕಷ್ಟು ಸ್ಕೋಪ್‌ ಕೂಡ ಇದ್ದುದರಿಂದಲೇ ನಾನು ಒಪ್ಪಿದೆ. ಕಥೆಯಲ್ಲಿ ಮೂರು ಟ್ವಿಸ್ಟ್‌ಗಳಿವೆ. ಅದು ಹೇಗಿರುತ್ತೆ ಎಂಬುದಕ್ಕೆ ಸಿನಿಮಾ ಬರುವವರೆಗೆ ಕಾಯಬೇಕು’ ಎನ್ನುತ್ತಾರೆ ನಿರೂಪ್‌ ಭಂಡಾರಿ.

ಶೀತಲ್‌ ಶೆಟ್ಟಿ ಸಿನಿಮಾ ಸೇರಿದಂತೆ ಸದ್ಯಕ್ಕೆ ಒಂದಷ್ಟು ಕಥೆ ಕೇಳಿರುವ ನಿರೂಪ್‌, “ಇತ್ತೀಚೆಗೆ ಕೇಳಿದ ನಾಲ್ಕು ಕಥೆಗಳಲ್ಲಿ ಎರಡು ಕಥೆ ಹೊಸತನದಿಂದ ಕೂಡಿವೆ. ಬೇರೆ ವಿಷಯ ಇರುವುದರಿಂದ ಅದನ್ನು ಸ್ಕ್ರೀನ್‌ ಪ್ಲೇ ಸಮೇತ ಕೇಳಬೇಕೆಂದಿದ್ದೇನೆ. ಇನ್ನು, ಇದರ ನಡುವೆ, ಅನೂಪ್‌ ಭಂಡಾರಿ ಅವರು ಮಾಡುತ್ತಿರುವ ಸುದೀಪ್‌ ಚಿತ್ರದ ಕಥೆಯಲ್ಲೂ ನಾನು ಕೆಲಸ ಮಾಡಿದ್ದೇನೆ. ನಾನು ಕೇಳಿದ

ಒಂದಷ್ಟು ಕಥೆಗಳಲ್ಲಿ ಒಂದೇ ರೀತಿಯ ಪಾತ್ರವೇ ಇದ್ದುದರಿಂದ ಒಪ್ಪಿಲ್ಲ. ಕೆಲವು ಸ್ಟೋರಿ ಲೈನ್‌ ಇಷ್ಟವಾದರೆ, ಸ್ಕ್ರೀನ್‌ ಪ್ಲೇ ಮಿಸ್‌ ಆಗಬಹುದು. ಹಾಗಾಗಿ, ಸ್ಕ್ರಿಪ್ಟ್ ಫಾರ್ಮೆಟ್‌ ಬಂದರೂ, ಶೂಟಿಂಗ್‌ ಸ್ಕ್ರಿಪ್ಟ್ ಕೇಳಿಕೊಂಡೇ ಮಾಡುವುದೋ, ಬಿಡುವುದೋ ಎಂಬುದನ್ನ ನಿರ್ಧಾರ ಮಾಡ್ತೀನಿ. ನಾನು ಒಂದು ರೀತಿ ಲಕ್ಕಿ ಎನ್ನಬಹುದು. ಯಾಕೆಂದರೆ, “ಆದಿಲಕ್ಷ್ಮೀ ಪುರಾಣ’ ಚಿತ್ರ ನಿರ್ದೇಶಿಸಿದ್ದೂ ನಿರ್ದೇಶಕಿ ಪ್ರಿಯಾ. ಹೊಸ ಚಿತ್ರ ನಿರ್ದೇಶಿಸಿರುವುದು ಶೀತಲ್‌ ಶೆಟ್ಟಿ. ಈ ಇಬ್ಬರು ಮಹಿಳಾ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು ವಿಶೇಷ’ ಎನ್ನುವ ನಿರೂಪ್‌, ನನಗೂ ನಿರ್ದೇಶನದ ಆಸೆ ಇದೆ. “ರಂಗಿತರಂಗ’ ಸಂದರ್ಭದಲ್ಲೇ ಸಹಾಯಕ ನಿರ್ದೇಶನದ ಕೆಲಸ ಮಾಡಿದ್ದೆ. ಹಾಗಾಗಿ ನಿರ್ದೇಶನದ ಆಸೆಯೇನೋ ಇದೆ. ಸದ್ಯಕ್ಕೆ ನಟನೆ ಮೇಲೆ ಒತ್ತು ನೀಡಿದ್ದೇನೆ. ಮುಂದೆ ಸಮಯ ಸಿಕ್ಕಾಗ, ಖಂಡಿತ ನಿರ್ದೇಶಿಸುವ ಆಸೆಯಂತೂ ಇದೆ’ ಎಂಬುದು ಅವರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next