Advertisement
ರಾಜ್ಯದ ನಾನಾ ಭಾಗದ ಮಹಿಳೆಯರು ಎದುರಾದ ಎಲ್ಲಾ ಅಡೆತಡೆಗಳನ್ನು ಲೆಕ್ಕಿಸದೇ ಯಶಸ್ವಿ ಪರ್ವತಾ ರೋಹಣ ನಡೆಸಿ ಸಾಹಸ ಮೆರೆದಿದ್ದಾರೆ. 14,500 ಅಡಿಗಳಷ್ಟು ಎತ್ತರದ ಹಿಮಾಲಯದ “ಬರಾದಸರ್ ಪಾಸ್’ನ ನೆತ್ತಿಗೇರಿ ಬಂದಿದ್ದಾರೆ. ಮೈಸೂರು, ಕೊಡಗು, ಶಿವಮೊಗ್ಗ, ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತಿತರ ಕಡೆಯ 13 ವರ್ಷದಿಂದ 65 ವರ್ಷದ 27 ಮಹಿಳೆಯರು 15 ದಿನದ ಚಾರಣದಲ್ಲಿ ಯಶಸ್ವಿಯಾಗಿ ಹಿಮಾಲಯವನ್ನೇರಿ “ನಾರಿ ಶಕ್ತಿ’ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಮೈಸೂರಿನ ಟೈಗರ್ ಅಡ್ವೆಂಚರ್ ಫೌಂಡೇಷನ್ ಹಾಗೂ ದ ಮೌಂಟೆನ್ ಗೋಟ್ ಈ ಪರ್ವತಾರೋಹಣ ಆಯೋಜಿಸಿತ್ತು.
ಹಿಮಾಲಯ ಪರ್ವತದ ಚಾರಣಕ್ಕೂ ಮುನ್ನ ದಿಲ್ಲಿಗೆ ಭೇಟಿ ನೀಡಿದ್ದ ಈ 27 ಮಹಿಳಾ ತಂಡ ಸಂಸತ್ ಭವನ, ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿತ್ತು. ಅನಂತರ ಹೃಷಿಕೇಶದಲ್ಲಿ ಅಲಕನಂದಾ ನದಿಯಲ್ಲಿ ಅಲ್ಲಿನ ಹವೆಗೆ ಒಗ್ಗುವಂತೆ ತರಬೇತಿ ಪಡೆದು, ಬಳಿಕ ಡೆಹ್ರಾಡೂನ್ ತಲುಪಿದ ತಂಡ, ಅಲ್ಲಿಂದ ಸಂಕ್ರಿ ಬೇಸ್ ಕ್ಯಾಂಪ್‌ನಲ್ಲಿ ಚಳಿಗೆ ದೇಹ ಒಗ್ಗಿಸಿಕೊಳ್ಳಲು ತರಬೇತಿ ಪಡೆದುಕೊಂಡಿತು. ಪಿನ್-ಸುಪಿನ್ ಕಣಿವೆಗಳ ನಡುವಿನ ಬರಾದಸರ್ ಪಾಸ್ ಪರ್ವತ, ಉತ್ತರಾಖಂಡ್ ಮತ್ತು ಹಿಮಾಚಲದ ಗಡಿಯಲ್ಲಿರುವ ಹಿಮಾಚ್ಛಾದಿತ ಪರ್ವತ. ಮೈನಸ್ 5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ 9 ದಿನಗಳ ಕಾಲ ಪರ್ವತ ಏರಿಬಂದಿದ್ದು ವಿಶೇಷ. ಪರ್ವತಾರೋಹಣ ಆರಂಭಕ್ಕೂ ಮುನ್ನ ಹಿಮಾಲಯ ಏರುವ ಬಗ್ಗೆ ಸಾಕಷ್ಟು ಅನುಮಾನವಿತ್ತು. ಚಾರಣದ ಸಂದರ್ಭದಲ್ಲಿ ಬೆನ್ನುನೋವು ಕಾಣಿಸಿಕೊಂಡಿತ್ತು. ಲೆಕ್ಕಿಸದೇ ಪರ್ವತಾರೋಹಣಕ್ಕೆ ಮನಸ್ಸು ಮಾಡಿದೆ. 15 ದಿನಗಳನ್ನು ನೆನೆದರೆ ಈಗಲೂ ಖುಷಿಯಾಗುತ್ತದೆ.
ಸುಮಾ ಮಹೇಶ್, ಇನ್ನರ್ ವೀಲ್ ಕ್ಲಬ್ ಮೈಸೂರು ಕೇಂದ್ರದ ಮಾಜಿ ಅಧ್ಯಕ್ಷೆ