ಹೊಸದಿಲ್ಲಿ: ರಫೇಲ್ ಡೀಲ್ ವಿವಾದದ ಬಗ್ಗೆ ಹಾಲಿ-ಮಾಜಿ ರಕ್ಷಣಾ ಸಚಿವರ ನಡುವೆ ಮಂಗಳವಾರ ಮಾತಿನ ಯುದ್ಧವೇ ನಡೆದಿದೆ. ಯುಪಿಎ ಸರಕಾರ ನಡೆಸಿದ ಡೀಲ್‌ಗಿಂತ ಶೇ.9ರಷ್ಟು ಕಡಿಮೆ ಮೊತ್ತದಲ್ಲಿ ಎನ್‌ಡಿಎ ಸರಕಾರ ವಿಮಾನಗಳನ್ನು ಖರೀದಿಸಿದೆ. ಜತೆಗೆ ಯುಪಿಎ ಅವಧಿಯಲ್ಲೂ ಎಚ್‌ಎಎಲ್ ಅನ್ನು ಒಪ್ಪಂದದಿಂದ ಹೊರಗೆ ಇರಿಸಲಾಗಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇನ್ನೊಂದೆಡೆ, ರಕ್ಷಣಾ ಖಾತೆ ಮಾಜಿ ಸಚಿವ ಎ.ಕೆ. ಆ್ಯಂಟನಿ ಮಾತನಾಡಿ, ನೀವು ಕಡಿಮೆ ಮೊತ್ತದಲ್ಲಿ ಡೀಲ್ ಮುಗಿಸಿದ್ದಾದರೆ, ಕೇವಲ 36 ವಿಮಾನಗಳನ್ನು ಮಾತ್ರ ಏಕೆ ಖರೀದಿಸಿದಿರಿ? ಮೋದಿ ಸರಕಾರ ಯಾಕಾಗಿ ಸಂಸತ್‌ನ ಜಂಟಿ ಸಮಿತಿ ರಚನೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮಾಹಿತಿ ಮುಚ್ಚಿಡುತ್ತಿದ್ದಾರೆ: ಕೇಂದ್ರ ಸಚಿವೆ ನಿರ್ಮಲಾ ಅವರು ಡೀಲ್‌ಗೆ ಸಂಬಂಧಿಸಿದಂತೆ ಮಾಹಿತಿ ಮುಚ್ಚಿಡುತ್ತಿದ್ದಾರೆ. ದೇಶದ ಭದ್ರತಾ ವಿಚಾರದಲ್ಲಿ ರಾಜಿ ಮಾಡುವ ಮೂಲಕ ಹಾಲಿ ಸರಕಾರ ತಪ್ಪೆಸಗುತ್ತಿದೆ ಎಂದು ಆ್ಯಂಟನಿ ಟೀಕಿಸಿದ್ದಾರೆ. ಮೋದಿ ಸರಕಾರ ನಡೆಸಿದ ಡೀಲ್ ಬಗ್ಗೆ ಶಂಕೆಗಳು ಎದ್ದಿದೆ. ಹೀಗಿದ್ದರೂ ಸಂಸತ್ ಜಂಟಿ ಸಮಿತಿಯಿಂದ ಏಕೆ ತನಿಖೆ ನಡೆಸಲು ಶಿಫಾರಸು ಮಾಡಿಲ್ಲ ಎಂದೂ ಪ್ರಶ್ನಿಸಿದ್ದಾರೆ. ಹಾಲಿ ಸರಕಾರ ಹೇಳುವಂತೆ ಯುಪಿಎ ಸರಕಾರ ನಡೆಸಿದ ಡೀಲ್‌ಗಿಂತ ಮೋದಿ ಸರಕಾರ ನಡೆಸಿದ ಒಪ್ಪಂದವೇ ಅಗ್ಗದ್ದಾಗಿದ್ದರೆ ಕೇವಲ 36 ವಿಮಾನಗಳನ್ನು ಮಾತ್ರ ಏಕೆ ಖರೀದಿಸಲಾಗಿದೆ ಎಂದು ಕೇಳಿದ್ದಾರೆ.
ಅಲ್ಲದೆ, ಹಾಲಿ ಸರಕಾರದ ಅವಧಿಯಲ್ಲಿ ರಚನೆಯಾಗುವ ಜೆಪಿಸಿಯಲ್ಲಿ ಸರಕಾರದ ಪರ ಇರುವ ಸದಸ್ಯರೇ ಹೆಚ್ಚು ಇರಲಿದ್ದಾರೆ. ಸಮಿತಿ ಕಡತಗಳನ್ನು ಪರಿಶೀಲಿಸಿ ನಿರ್ಧರಿಸಲಿ. ಅದಕ್ಕೆ ಸರಕಾರ ಏಕೆ ಹಿಂಜರಿಯುತ್ತಿದೆ ಎಂದು ಕೇಳಿದ್ದಾರೆ ಆ್ಯಂಟನಿ. ಇದೇ ವೇಳೆ, 2013ರ ಡೀಲ್‌ನಲ್ಲಿ ತಾವು ಮಧ್ಯ ಪ್ರವೇಶಿಸಿ ಅಂತಿಮ ಪಡಿಸಿದ್ದುª ಎಂಬ ಆರೋಪವನ್ನು ಕಾಂಗ್ರೆಸ್‌ನ ಹಿರಿಯ ನಾಯಕ ತಿರಸ್ಕರಿಸಿದ್ದಾರೆ. ಬಿಜೆಪಿಯ ಹಿರಿಯ ಸಂಸತ್ ಸದಸ್ಯರೊಬ್ಬರು ಸೇರಿದಂತೆ ಹಲವರಿಂದ ಡೀಲ್ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು ಎಂದಿದ್ದಾರೆ. ಅಲ್ಲದೆ, ನಿರ್ಮಲಾ ಅವರು ಎಚ್‌ಎಎಲ್(ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.) ಕಂಪೆನಿಯ ವರ್ಚಸ್ಸಿಗೆ ದೇಶೀಯ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಧಕ್ಕೆ ತಂದರು ಎಂದೂ ಆ್ಯಂಟನಿ ಆರೋಪಿಸಿದ್ದಾರೆ.
ಎಚ್‌ಎಎಲ್ ಇರಲಿಲ್ಲ: ದಿಲ್ಲಿಯಲ್ಲಿ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನಡೆಸಿದ್ದ ಡೀಲ್‌ನಲ್ಲಿ ಬೆಂಗಳೂರಿನಲ್ಲಿರುವ ಎಚ್‌ಎಎಲ್ ಸೇರ್ಪಡೆ ಯಾಗಿರಲಿಲ್ಲ. ಡಸ್ಸಾಲ್ಟ್ ಏವಿಯೇಷನ್ ಮುಂದಿಟ್ಟಿದ್ದ ಷರತ್ತುಗಳು ಸರಕಾರಿ ಸ್ವಾಮ್ಯದ ಸಂಸ್ಥೆಗೆ ಅನ್ವಯ ವಾಗುವಂತಿರಲಿಲ್ಲ ಎಂದು ಹೇಳಿದ್ದಾರೆ. ಹಾಲಿ ಸರಕಾರ ಯುಪಿಎ ಅವಧಿಗಿಂತ ಶೇ.9ರಷ್ಟು ಅಗ್ಗದಲ್ಲಿ ವಿಮಾನಗಳ ಖರೀದಿ ನಡೆಸಿದೆ ಎಂದಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಈ ವಿಚಾರ ಚರ್ಚೆಯಾಗಲಿದೆ ಎಂದೂ ಹೇಳಿದ್ದಾರೆ. ಹಾಗಿದ್ದರೆ ಕೇವಲ 36 ವಿಮಾನಗಳ ಖರೀದಿ ಮಾತ್ರ ಏಕೆ ಎಂಬ ಆ್ಯಂಟನಿ ಪ್ರಶ್ನೆಗೆ “ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ ಬಳಿಕವೇ ಸಂಖ್ಯೆ ನಿಗದಿ ಮಾಡಲಾಗಿದೆ’ ಎಂದು ಉತ್ತರಿಸಿದ್ದಾರೆ ರಕ್ಷಣಾ ಸಚಿವೆ.
ಡೀಲ್ ಫೈನಲ್: ರಷ್ಯಾದಿಂದ ಖರೀದಿಸಲು ಉದ್ದೇಶಿಸಿರುವ ಎಸ್-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿ ಡೀಲ್ ಅಂತಿಮ ಹಂತದಲ್ಲಿದೆ ಎಂದೂ ಸಚಿವೆ ಮಾಹಿತಿ ನೀಡಿದ್ದಾರೆ.
ಅ.10ಕ್ಕೆ ವಿಚಾರಣೆ: ರಫೇಲ್ ಯುದ್ಧ ವಿಮಾನಗಳ ಖರೀದಿ ಕುರಿತ ಡೀಲ್ ಅನ್ನು ರದ್ದು ಮಾಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿ. ರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಅ.10ಕ್ಕೆ ನಡೆಯಲಿದೆ. ಅರ್ಜಿದಾರ ಎಂ.ಎಲ್.ಶರ್ಮಾ, ಹೆಚ್ಚುವರಿ ದಾಖಲೆಗಳ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರಿಂದ ನ್ಯಾ| ರಂಜನ್ ಗೊಗೊಯ್, ನ್ಯಾ.ನವೀನ್ ಸಿನ್ಹಾ ಮತ್ತು ನ್ಯಾ| ಕೆ.ಎಂ.ಜೋಸೆಫ್ ನೇತೃತ್ವದ ನ್ಯಾಯಪೀಠ ಈ ನಿರ್ಧಾರ ಕೈಗೊಂಡಿದೆ.
ದೇಶದ ವಾಚ್‌ಮ್ಯಾನ್ (ಪ್ರಧಾನಿ ಮೋದಿ)ತಮ್ಮ ಸ್ನೇಹಿತ ಅನಿಲ್ ಅಂಬಾನಿಗೆ 45 ಸಾವಿರ ಕೋಟಿ ರೂ. ಮೌಲ್ಯದ ಗುತ್ತಿಗೆ ನೀಡಿದ್ದಾರೆ. ಅವರಿಗೆ ದೇಶದ ಯುವಜನರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸತ್ಯ ಹೇಳಲು ಸಾಧ್ಯವಾಗುತ್ತಿಲ್ಲ.
ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ (ಕರ್ನೂಲ್‌ನ ರ್ಯಾಲಿಯಲ್ಲಿ)