ಹೊಸದಿಲ್ಲಿ: “ಒತ್ತಡ ನಿರ್ವಹಣೆಯ ಸಾಮರ್ಥ್ಯ ಇಲ್ಲದ್ದಕ್ಕೆ ಇತ್ತೀಚೆಗೆ ಯುವತಿಯೊಬ್ಬಳು ಮೃತಪಟ್ಟಿದ್ದಾರೆ. ಕಾಲೇಜು, ವಿವಿಗಳು ಒತ್ತಡ ನಿರ್ವಹಣೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಿ ವಿದ್ಯಾರ್ಥಿ ಗಳನ್ನು ಸಜ್ಜುಗೊಳಿಸಬೇಕು’ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಅರ್ನೆಸ್ಟ್ ಆ್ಯಂಡ್ ಯಂಗ್(ಇವೈ) ಕಂಪೆನಿ ಉದ್ಯೋಗಿಯೊಬ್ಬರು ಇತ್ತೀಚೆಗೆ ಕೆಲಸದ ಒತ್ತಡದಿಂದ ಮೃತಪಟ್ಟಿರುವುದಾಗಿ ಸುದ್ದಿಯಾಗಿತ್ತು. ಆ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾವಿಸಿದ್ದ ನಿರ್ಮಲಾ, “ಕೆಲಸದ ಒತ್ತಡ ನಿರ್ವಹಿಸುವ ಆಂತರಿಕ ಶಕ್ತಿಯನ್ನು ಕುಟುಂಬಗಳು, ಶಿಕ್ಷಣ ಸಂಸ್ಥೆಗಳು ಕಲಿಸಬೇಕು. ಅದನ್ನು ದೈವತ್ವದಿಂದ ಮಾತ್ರ ಸಾಧಿಸಬಹುದು’ ಎಂದಿದ್ದಾರೆ.
ಈ ಹೇಳಿಕೆಗೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಆಡಳಿತಾರೂಢ ಬಿಜೆಪಿ ಹಾಗೂ ಸಚಿವೆ ನಿರ್ಮಲಾಗೆ ಕೇವಲ ಅದಾನಿ, ಅಂಬಾನಿಯಂತಹ ಉದ್ಯಮಿಗಳ ನೋವಷ್ಟೇ ಕಾಣುತ್ತದೆ. ಕಠಿನ ಶ್ರಮವಹಿಸಿ ದುಡಿಯುತ್ತಿರುವ ಯುವ ಪೀಳಿಗೆಯ ಕಷ್ಟ ಕಾಣಲ್ಲ. ಮೃತ ಯುವತಿಯನ್ನು ಹಾಗೂ ಕುಟುಂಬವನ್ನು ದೂಷಿಸುವುದು ಅತ್ಯಂತ ಕ್ರೂರತನ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಕೆ.ಸಿ.ವೇಣುಗೋಪಾಲ್ ಟೀಕಿಸಿದ್ದಾರೆ.
ಶಿವಸೇನೆ(ಯುಬಿಟಿ)ಯ ರಾಜ್ಯ ಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ, “ಮೃತ ಯುವತಿ ಅನ್ನಾ ಸೆಬಾಸ್ಟಿಯನ್‌ಗೆ ಒತ್ತಡ ತಡೆಯುವ ಆಂತರಿಕ ಶಕ್ತಿಯಿತ್ತು. ಆದರೆ ಆಕೆಯ ಜೀವ ತೆಗೆದದ್ದು ಅವೈಜ್ಞಾನಿಕ ಹಾಗೂ ವಿಷಕಾರಿ ಕೆಲಸದ ಸಂಸ್ಕೃತಿ. ಇದನ್ನು ಪರಿಹರಿಸುವುದನ್ನು ಬಿಟ್ಟು ಸಂತ್ರಸ್ಥೆಯನ್ನು ಅವಮಾನಿ ಸುತ್ತಿದ್ದೀರಿ. ಸ್ವಲ್ಪ ಸೂಕ್ಷ್ಮಮತಿಗಳಾಗಿ’ ಎಂದಿದ್ದಾರೆ.
ಸಂತ್ರಸ್ತೆಯ ಅವಮಾನಿಸಿಲ್ಲ: ನಿರ್ಮಲಾ
ತಮ್ಮ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಚಿವೆ ನಿರ್ಮಲಾ, “ಚೆನ್ನೈನ ವಿವಿಯೊಂದು ತನ್ನ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಧ್ಯಾನ ಸಭಾಂಗಣ, ಪೂಜಾ ಸ್ಥಳವನ್ನು ಸ್ಥಾಪಿಸಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆಂತರಿಕ ಶಕ್ತಿ ಬೆಳೆಸುವುದು ಹೇಗೆ ಅಗತ್ಯ ಎಂಬ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಸಂತ್ರಸ್ತೆಯನ್ನು ಅವಮಾನಿಸಿಲ್ಲ’ ಎಂದು ಹೇಳಿದ್ದಾರೆ.