Advertisement

ಗ್ರಾಮಾಭಿವೃದ್ಧಿ  ಯೋಜನೆಯಿಂದ ವಿತ್ತ ಸದ್ವಿನಿಯೋಗದ ಸಂಸ್ಕಾರ

09:33 AM Oct 30, 2018 | |

ಬೆಳ್ತಂಗಡಿ: ಆರ್ಥಿಕ ಸಂಕಷ್ಟಗಳಿಂದ ಸ್ಪಂದಿಸುವುದರ ಜತೆಗೆ ಹಣವನ್ನು ಹೇಗೆ ವಿನಿಯೋಗಿಸಬೇಕು ಎಂಬ ಸಂಸ್ಕಾರವನ್ನೂ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಕಲ್ಪನೆಯ ಗ್ರಾಮಾಭಿವೃದ್ಧಿ ಯೋಜನೆ ಜನತೆಗೆ ಕಲಿಸಿದೆ. ಧರ್ಮಸ್ಥಳ ಕ್ಷೇತ್ರವು ಧರ್ಮ, ನ್ಯಾಯದ ಸಂಕೇತವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎಲೈಸಿ ಸಹಯೋಗದೊಂದಿಗೆ ಅನುಷ್ಠಾನಗೊಳಿಸಿದ ಗುಂಪು ವಿಮೆ ಯೋಜನೆ “ಪ್ರಗತಿ ರಕ್ಷಾ ಕವಚ’ಕ್ಕೆ ಅವರು ಸೋಮವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಚಾಲನೆ ನೀಡಿ ಮಾತನಾಡಿದರು. ಧರ್ಮಸ್ಥಳ ಕ್ಷೇತ್ರವು ಮಹಿಳೆಯರಿಗೆ ಸ್ವಾಭಿಮಾನದ ಬದುಕು ನೀಡುವ ಕಾರ್ಯವನ್ನೂ ಮಾಡಿರುವುದು ಹೆಮ್ಮೆಯ ವಿಚಾರ ಎಂದರು.

ಜನತೆಯ ಹಿತದೃಷ್ಟಿಯಿಂದ 40 ಲಕ್ಷಕ್ಕೂ ಅಧಿಕ ಮಂದಿಗೆ ಎಲ್‌ಐಸಿ ಸಹಯೋಗದೊಂದಿಗೆ ವಿಮೆಜಾರಿಗೊಳಿಸಿರುವುದು ಅತ್ಯಂತ ಚಿಂತನಾತ್ಮಕ ಕ್ರಮ. ಡಾ| ಹೆಗ್ಗಡೆ ಅವರು ಧರ್ಮಾಧಿಕಾರಿಯಾಗಿರುವ ಜತೆಗೆ ನ್ಯಾಯಾಧಿಕಾರಿಯಾಗಿಯೂ ಜನ ಸೇವೆಯಲ್ಲಿ ತೊಡಗಿದ್ದಾರೆ ಎಂದರು.

ಅನ್ನ , ರಕ್ಷಣೆ ಒದಗಿಸುವ ಗ್ರಾಮೀಣ ಮಂದಿ: ಡಾ| ಹೆಗ್ಗಡೆ
ಅಧ್ಯಕ್ಷತೆ ವಹಿಸಿದ್ದ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಗ್ರಾಮೀಣ ರೈತರು ದೇಶದ ಜನತೆಗೆ ಅನ್ನ ನೀಡುವ ಕಾಯಕ ಮಾಡುತ್ತಿದ್ದರೆ, ಸೈನ್ಯದಲ್ಲೂ ಗ್ರಾಮೀಣ ಮಂದಿಯೇ ದುಡಿಯುತ್ತಿದ್ದಾರೆ. ಹೀಗಾಗಿ ಸರಕಾರಗಳು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಧರ್ಮಸ್ಥಳ ಕ್ಷೇತ್ರದಿಂದ ಜನರನ್ನು ಮುನ್ನಡೆಸುವ ಕಾರ್ಯವನ್ನೂ ಮಾಡಲಾಗುತ್ತಿದೆ. ಪ್ರಸ್ತುತ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ರಕ್ಷಣೆಯ ದೃಷ್ಟಿಯಿಂದ ಎಲ್‌ಐಸಿಯ ಜತೆ ಸೇರಿ ವಿಮೆ ಜಾರಿಗೆ ತರಲಾಗಿದೆ. ಇದರ ಅನುಷ್ಠಾನಕ್ಕೆ ದುಡಿದ ಎಲ್ಲರನ್ನೂ ಮಂಜುನಾಥ ಸ್ವಾಮಿ ಅನುಗ್ರಹಿಸಲಿ ಎಂದು ಹಾರೈಸಿದರು.

Advertisement

ಎಲ್‌ಐಸಿಯ ಚೇರ್‌ಮನ್‌ ವಿ.ಕೆ. ಶರ್ಮ ಮಾತನಾಡಿ, ಸುಮಾರು 24 ಕೋಟಿಗೂ ಅಧಿಕ ಮಂದಿಗೆ ಜೀವನ ಭದ್ರತೆ ನೀಡಿರುವ ಎಲ್‌ಐಸಿಯು 50 ಲಕ್ಷ ಮಂದಿಗೆ ಪಿಂಚಣಿ ನೀಡುತ್ತಿದೆ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವ ಧರ್ಮಸ್ಥಳದ ಗ್ರಾ. ಯೋಜನೆಯ ಜತೆಗೆ ನಾವು ಕೈಜೋಡಿಸಿರುವುದಕ್ಕೆ ಹೆಮ್ಮೆಯಿದೆ. ಈ ವಿಮೆಯು ನೇರವಾಗಿ ಫಲಾನುಭವಿ ಗಳನ್ನು ತಲುಪಲಿದೆ ಎಂದರು.

ಹೇಮಾವತಿ ವೀ. ಹೆಗ್ಗಡೆ ಅವರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಗೌರವಿಸಿದರು. ಕಳೆದ ವರ್ಷ ಪ್ರಧಾನಿ ಅವರಿಂದ ರುಪೇ ಕಾರ್ಡ್‌ ಸ್ವೀಕರಿಸಿದ ಸಂಘದ ಸದಸ್ಯೆ ಶಾಲಿನಿ ಅವರು ಸಚಿವರಿಗೆ ತರಕಾರಿ ಹಾಗೂ ಎಳನೀರನ್ನಿತ್ತು ಗೌರವಿಸಿದರು.

ಶಾಸಕರಿಗೆ ಗೌರವ
ಡಾ| ಹೆಗ್ಗಡೆ ಅವರು ಶಾಸಕರಾದ ಎಸ್‌. ಅಂಗಾರ, ಲಾಲಾಜಿ ಆರ್‌. ಮೆಂಡನ್‌, ಹರೀಶ್‌ ಪೂಂಜಾ, ಸಂಜೀವ ಮಠಂದೂರು ಅವರನ್ನು ಗೌರವಿಸುವ ಜತೆಗೆ ಸಂಸದ ನಳಿನ್‌ ಅವರನ್ನೂ ಅಭಿನಂದಿಸಿದರು. ಶ್ರೀಕ್ಷೇತ್ರದ ಡಿ. ಸುರೇಂದ್ರ ಕುಮಾರ್‌, ಎಲ್‌ಐಸಿಯ ವಲಯ ಮ್ಯಾನೇಜರ್‌ ಸುಶೀಲ್‌ ಕುಮಾರ್‌, ಕಾರ್ಯ ನಿರ್ವಾಹಕ ನಿರ್ದೇಶಕ ಕದಿರೇಶ್‌ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜು ನಾಥ್‌ ಸ್ವಾಗತಿಸಿದರು. ಪ್ರಾ. ಹಣಕಾಸು ನಿರ್ದೇಶಕ ಶಾಂತಾ ರಾಮ ಪೈ ವಂದಿ ಸಿದರು. ಪ್ರಕಾಶ ರಾವ್‌, ಮನೋರಮಾ ಭಟ್‌ ನಿರ್ವಹಿಸಿದರು.

ಮೋದಿ ಭಾಷಣ ಮೆಲುಕು
ಕಾರ್ಯಕ್ರಮದಲ್ಲಿ ಕಳೆದ ವರ್ಷ ಅ. 29ರಂದು ಪ್ರಧಾನಿ ಮೋದಿಯವರು ಕ್ಷೇತ್ರಕ್ಕೆ ಆಗಮಿಸಿ ಡಾ| ಹೆಗ್ಗಡೆ ಅವರ ಕುರಿತು ಆಡಿದ ಮಾತುಗಳನ್ನು ಎಲ್‌ಇಡಿ ಪರದೆಯ ಮೂಲಕ ಮೆಲುಕು ಹಾಕಲಾಯಿತು. ದೇಶದ ಜನತೆಯನ್ನು ಪ್ರತಿನಿಧಿಸುವ ಪ್ರಧಾನಿ, ಧರ್ಮಾಧಿಕಾರಿ ಗಳ ಕುರಿತು ಆಡಿರುವ ಮಾತುಗಳೇ ಅವರ ಸಾಧನೆಗಳನ್ನು ಪ್ರತಿಬಿಂಬಿಸುತ್ತವೆ ಎಂದು ನಿರ್ಮಲಾ ಸೀತಾರಾಮನ್‌ ತಮ್ಮ ಭಾಷಣದಲ್ಲಿ ತಿಳಿಸಿ ಹೆಗ್ಗಡೆ ಅವರಿಗೆ ಶಿರಬಾಗಿ ನಮಿಸುತ್ತೇನೆ ಎಂದರು.

ಮುಂಚಿತವಾಗಿ ಆಗಮನ
ನಿಗದಿತ ವೇಳಾಪಟ್ಟಿಯಂತೆ ಸಂಜೆ 4 ಗಂಟೆಗೆ ಆಗಮಿಸಬೇಕಿದ್ದ ರಕ್ಷಣಾ ಸಚಿವೆ ಒಂದು ತಾಸು ಮುಂಚಿತವಾಗಿ ಆಗಮಿಸಿದ್ದರು. ಬಳಿಕ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಸನ್ನಿಧಿ ವಸತಿ ಗೃಹದಲ್ಲಿ ವಿಶ್ರಾಂತಿ ಪಡೆದರು. 4.15ಕ್ಕೆ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next