Advertisement

ನಿರ್ಮಲಾ ಸೀತಾರಾಮನ್‌ ಸಮರ್ಪಕ ಆಯ್ಕೆ: ಮೋದಿಯ ಅತ್ಯುತ್ತಮ ಟೀಂ

01:10 PM Sep 04, 2017 | |

ಕರ್ನಾಟಕದಿಂದ ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡಿ ಅನಂತ್‌ ಹೆಗಡೆ ಸಚಿವರಾಗಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನುವುದು ಬಹುಶಃ ಮೋದಿ-ಶಾ ಜೋಡಿಗೆ ಮಾತ್ರ ಗೊತ್ತಿರುವ ರಹಸ್ಯ.

Advertisement

ನಿರೀಕ್ಷಿಸಿದಂತೆಯೇ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜೋಡಿ ಸಂಪುಟ ಪುನರ್‌ ರಚನೆಯಲ್ಲಿ ಹಲವು ಅಚ್ಚರಿಗಳನ್ನು ನೀಡಿದೆ. ಪುನರ್‌ ರಚನೆ ಸಂದರ್ಭದಲ್ಲಿ ಸದ್ಯಕ್ಕೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹೆಚ್ಚಿನ ಗಮನ ಹರಿಸಿರುವುದು ಕಂಡುಬರುತ್ತದೆ. ಉಳಿದಂತೆ ಸಚಿವರ ಮೌಲ್ಯಮಾಪನ ಆಧರಿಸಿ ಅಸಮರ್ಥ ಸಚಿವರನ್ನು ನಿರ್ದಾಕ್ಷಿಣ್ಯವಾಗಿ ಕೈಬಿಟ್ಟಿರುವುದು, ಕೆಲವರ ಖಾತೆ ಬದಲಾಯಿಸಿ ರುವುದು, ಹಿಂಭಡ್ತಿ ನೀಡಿರುವುದು ಎದ್ದುಕಾಣುತ್ತಿದೆ. ಯುವಕರು, ಮಹಿಳೆಯರು ಮತ್ತು ಅನುಭವಿಗಳಿಗೆ ಅವಕಾಶ ನೀಡಿ ಮೋದಿ ಸಮತೋಲಿತ ತಂಡವೊಂದನ್ನು ಕಟ್ಟುವ ಪ್ರಯತ್ನ ಮಾಡಿದ್ದಾರೆ. ಒಟ್ಟಾರೆ ಪುನರ್‌ರಚನೆ  ಪ್ರಕ್ರಿಯೆಯಲ್ಲಿ  ನಿರ್ಮಲಾ ಸೀತಾರಾಮನ್‌ ಅವರು ರಕ್ಷಣಾ ಸಚಿವರಾಗಿರುವುದು ಅತ್ಯಂತ ಅನಿರೀಕ್ಷಿತ ಮತ್ತು ಅತಿ ಹೆಚ್ಚು ಅಚ್ಚರಿ ತಂದಿರುವ ಬೆಳವಣಿಗೆ. 

ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಹಿಂದೆ ಪಕ್ಷದಲ್ಲಿ ವಕ್ತಾರೆಯಾಗಿ ಗಮನ ಸೆಳೆದಿದ್ದರು. ವಾಣಿಜ್ಯ ಖಾತೆಯ ಸಚಿವರಾ ಗಿಯೂ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಈ ದಕ್ಷತೆ ಮತ್ತು ಪಕ್ಷ ನಿಷ್ಠೆ ಅವರಿಗೆ ಅತ್ಯಂತ ಮಹತ್ವದ ಮತ್ತು ಜವಾಬ್ದಾರಿಯುತವಾದ ರಕ್ಷಣಾ ಖಾತೆಯನ್ನು ತಂದುಕೊಟ್ಟಿದೆ. ದೇಶ ಸ್ವತಂತ್ರ ರಕ್ಷಣಾ ಸಚಿವರಾಗಿ ಮಹಿಳೆಯೊಬ್ಬರನ್ನು ನೋಡುತ್ತಿರು ವುದು ಇದೇ ಮೊದಲು. ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿ ರುವಾಗಲೇ ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆಯನ್ನು ಹೊಂದಿ ದ್ದರು. ಅಪ್ಪಟ ಕಾಂಗ್ರೆಸ್‌ ಬೆಂಬಲಿಗ ಕುಟುಂಬವೊಂದರಲ್ಲಿ ಜನಿಸಿದ ನಿರ್ಮಲಾ ಸೀತಾರಾಮನ್‌ ಬಿಜೆಪಿ ಸೇರಿ ಭಿನ್ನಹಾದಿಯನ್ನು ಆರಿಸಿಕೊಂಡಿದ್ದರು. ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದಲೇ ರಾಜಕೀಯದಲ್ಲಿ ಹಂತಹಂತವಾಗಿ ಮೇಲೇರಿದ ಅವರೀಗ  ಅತ್ಯುನ್ನತ ಪದವಿಗೇರಿದ್ದಾರೆ. ಮಹಿಳೆಯೊಬ್ಬರನ್ನು ರಕ್ಷಣಾ ಸಚಿವರಾಗಿ ಮಾಡಿದ ಹಿರಿಮೆ ಬಿಜೆಪಿಗೆ ಸಲ್ಲುತ್ತದೆ. ಸಂಪೂರ್ಣ ಪುನರ್‌ ನಿರ್ಮಾಣ ಮತ್ತು ಆಧುನೀಕರಣದ ಹೊಸ್ತಿಲಲ್ಲಿರುವ ರಕ್ಷಣಾ ಖಾತೆಯನ್ನು ನಿರ್ಮಲಾ ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.    ನಿವೃತ್ತ ಐಪಿಎಸ್‌, ಎಐಎಸ್‌ ಮತ್ತು ಐಎಫ್ಎಸ್‌ ಅಧಿಕಾರಿಗಳನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಇನ್ನೊಂದು ಗಮನಾರ್ಹ ಅಂಶ. ಅಧಿಕಾರಿಗಳಿದ್ದಾಗ ಇವರು ಜನರ ಜತೆಗೆ ನೇರ ಸಂಪರ್ಕದಲ್ಲಿದ್ದವರು. ಅವರ ಕೈಗೆ ಆಡಳಿತದ ಚುಕ್ಕಾಣಿ ನೀಡಿದರೆ ಬದಲಾವಣೆ ಸಾಧ್ಯ ಎಂಬ ನಂಬಿಕೆ ಮೋದಿಗಿರುವಂತೆ ಕಾಣಿಸುತ್ತಿದೆ. ರೈಲ್ವೇ ಖಾತೆಯಿಂದ ಸುರೇಶ್‌ ಪ್ರಭು ಎತ್ತಂಗಡಿಯಾಗುತ್ತಿರುವುದು ನಿರೀಕ್ಷಿತವಾಗಿತ್ತು. ಆದರೆ ಈ ಖಾತೆಗೆ ಮೋದಿ ಸಂಪುಟದಲ್ಲೇ ಅತಿ ಹೆಚ್ಚು ದಕ್ಷ ಮತ್ತು ಸಮರ್ಥ ಎಂದು ಹೆಸರುವಾಸಿಯಗಿರುವ ಪೀಯೂಷ್‌ ಗೋಯಲ್‌ ಅವರನ್ನು ತಂದಿರುವುದು ಅತ್ಯುತ್ತಮ ನಡೆ. ಆದರೆ ಇದೇ ವೇಳೆ ವಿದ್ಯುತ್‌ ಸಚಿವಾಲಯಕ್ಕೆ ಗೋಯಲ್‌ ನಿರ್ಗಮನದಿಂದ ನಷ್ಟವಾಗಿದೆ. ಉರಿ ನಾಲಗೆಯ ನಾಯಕಿ ಉಮಾಭಾರತಿ ತನಗೆ ಸಿಕ್ಕಿದ ಅತ್ಯುತ್ತಮ ಅವಕಾಶವನ್ನು ಕೈಚೆಲ್ಲಿ ಮೂಲೆಗುಂಪಾಗಿದ್ದಾರೆ. 

ಕರ್ನಾಟಕದಿಂದ ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡಿ ಅನಂತ್‌ ಹೆಗಡೆ ಸಚಿವರಾಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಬ್ರಾಹ್ಮಣ ವರ್ಗದ ಮತಗಳನ್ನು ಸೆಳೆಯುವ ಸಲುವಾಗಿ ಹೆಗಡೆಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬ ತರ್ಕವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ಏಕೆಂದರೆ ಬ್ರಾಹ್ಮಣ ವರ್ಗ ಹಿಂದಿನಿಂದಲೂ ಬಿಜೆಪಿ ಜತೆಗೆ ಗುರುತಿಸಿಕೊಂಡಿದೆ. ಐದು ಸಲ ಸಂಸದರಾಗಿರುವ ಅನುಭವ ಇದ್ದರೂ ಹೆಗಡೆಯವರ ಸಾಧನೆಯ ಕುರಿತು ಜನರಲ್ಲಿ ಭಿನ್ನಾಭಿಪ್ರಾಯಗಳಿವೆ. ಭವಿಷ್ಯದಲ್ಲಿ ಹೆಗಡೆಯವರ ಸಚಿವ ಹೊಣೆಗಾರಿಕೆ ಮತ್ತು ಸಾಧನೆಯನ್ನು ಅಳತೆಗೋಲಾಗಿ ಪರಿಗಣಿಸಿ ರಾಜ್ಯ ರಾಜಕಾರಣದಲ್ಲಿ ಹೆಚ್ಚಿನ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.  ಯಾವ ಲೆಕ್ಕಾಚಾರದಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನುವುದು ಮೋದಿ-ಶಾ ಜೋಡಿಗೆ ಮಾತ್ರ ಗೊತ್ತಿರುವ ರಹಸ್ಯ.

Advertisement

Udayavani is now on Telegram. Click here to join our channel and stay updated with the latest news.

Next