Advertisement

ನಿರ್ಮಲಾ ಪರ ರಕ್ಷಣಾ ಸಚಿವಾಲಯ ಸಮರ್ಥನೆ​​​​​​​

06:00 AM Aug 26, 2018 | |

ಮಡಿಕೇರಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೊಡಗು ಭೇಟಿಯ ಸಂದರ್ಭ ಜಿಲ್ಲಾಡಳಿತದೊಂದಿಗೆ ನಡೆದ 
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಅವರ ವಿರುದ್ಧ ಗರಂ ಆಗಿದ್ದರೆಂದು ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿರುವುದಕ್ಕೆ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.

Advertisement

ಈ ಕುರಿತು ಸ್ಪಷ್ಟನೆ ನೀಡಿರುವ ರಕ್ಷಣಾ ಸಚಿವಾಲಯ, ಶುಕ್ರವಾರದ ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಕೆಲವು ಮಾಧ್ಯಮಗಳು ಜಿಲ್ಲಾ ಉಸ್ತುವಾರಿ ಸಚಿವರು ರಕ್ಷಣಾ ಸಚಿವರ ಬಗ್ಗೆ ವೈಯಕ್ತಿಕ ಟೀಕೆ ಮಾಡಿರುವುದಾಗಿ ವರದಿಯಾಗಿದೆ.

ಆದರೆ, ಈ ಟೀಕೆ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಘನತೆಗೆ ಚ್ಯುತಿ ಉಂಟು ಮಾಡುವ ಮತ್ತು ಭಾರತದ ರಾಜಕೀಯ ವ್ಯವಸ್ಥೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಯಾವುದೇ ಗೌರವ ಮತ್ತು ತಿಳಿವಳಿಕೆ ಇಲ್ಲ ಎಂಬುದನ್ನು ತೋರಿಸಿದೆ ಎಂದು ತಿಳಿಸಿದೆ.

ಜಿಲ್ಲಾಡಳಿತವೇ ಕಾರ್ಯಕ್ರಮ ಪಟ್ಟಿ ಅಂತಿಮಗೊಳಿಸಿತ್ತು: ರಕ್ಷಣಾ ಸಚಿವರ ಪ್ರವಾಸ ಕಾರ್ಯಕ್ರಮವನ್ನು ಸ್ಥಳೀಯ ಜನಪ್ರತಿನಿಧಿ
ಗಳೊಂದಿಗೆ ಸಮಾಲೋಚಿಸಿ ಕೊಡಗು ಜಿಲ್ಲಾಡಳಿತವೇ ಅಂತಿಮಗೊಳಿಸಿದ್ದು, ಸಚಿವರು ಭೇಟಿ ನೀಡುವ ಎರಡು ದಿನಗಳ ಮೊದಲೇ ಸಂಬಂಧಿಸಿದವರಿಗೆ ಪ್ರವಾಸದ ವಿವರ ಕಳುಹಿಸಲಾಗಿತ್ತು. ನಂತರ ಜಿಲ್ಲಾಡಳಿತದ ಮನವಿ ಮೇರೆಗೆ ಸ್ಥಳೀಯ ಗಣ್ಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಪಟ್ಟಿಗೆ ಸೇರಿಸಲಾಗಿತ್ತು. 

ಹಾನಿಗೀಡಾದ ಪ್ರದೇಶಗಳ ಭೇಟಿಯ ನಂತರ ನೆರೆಯಿಂದ ತೀವ್ರ ತೊಂದರೆಗೊಳಗಾದ ನಿವೃತ್ತ ಸೈನಿಕರೊಂದಿಗೆ ರಕ್ಷಣಾ ಸಚಿವರು ಸಂವಾದ ನಡೆಸುವಾಗ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಕ್ಷೇಪ ವ್ಯಕ್ತಪಡಿಸಿ,ಅಧಿಕಾರಿಗಳ ಸಭೆಯನ್ನು ಮೊದಲು ನಡೆಸುವಂತೆ ವಾದಿಸಿದರು. ಆದರೆ, ಮಾಜಿ ಸೈನಿಕರ ಯೋಗಕ್ಷೇಮವೂ ರಕ್ಷಣಾ ಇಲಾಖೆಯ ಆದ್ಯತೆಗಳಲ್ಲಿ ಒಂದಾದ ಕಾರಣ ರಕ್ಷಣಾ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದರು. ಆದರೂ, ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಸಭೆ ನಿಲ್ಲಿಸಿಅಧಿಕಾರಿಗಳ ಸಭೆಗೆ ಹೋಗಬೇಕೆಂದು ಒತ್ತಾಯಿಸಿದರು. ಆಗ ಪರಿಸ್ಥಿತಿಯನ್ನು ಅರಿತ ರಕ್ಷಣಾ ಸಚಿವರು ಮತ್ತಷ್ಟು ಗೊಂದಲ ಉಂಟಾಗುವುದನ್ನು ತಪ್ಪಿಸಲು ಆ ಸಭೆಯನ್ನು ಸ್ಥಗಿತಗೊಳಿಸಿ ಅಧಿಕಾರಿಗಳ ಸಭೆಗೆ ತೆರಳಿದರು.

Advertisement

ಅಲ್ಲಿ ಆಗಲೇ ಪತ್ರಿಕಾಗೋಷ್ಠಿಯ ವ್ಯವಸ್ಥೆ ಮಾಡಲಾಗಿತ್ತು. ಅದೇ ಸ್ಥಳಕ್ಕೆ ಅಧಿಕಾರಿಗಳನ್ನು ತರಾತುರಿಯಲ್ಲಿ ಕರೆಸಿ ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಲ್ಲೇ ಅಧಿಕಾರಿಗಳ ಸಭೆ ಆರಂಭಿಸಲಾಯಿತು. ಎಲ್ಲಾ ಮಾಧ್ಯಮ ಪ್ರತಿನಿಧಿಗಳ ಎದುರಿನಲ್ಲೇ ಪರಿಶೀಲನಾ ಸಭೆ ನಡೆಸುವ ನಿದರ್ಶನ ಇಲ್ಲವಾದರೂ, ಪರಿಸ್ಥಿತಿಯನ್ನು ತಿಳಿಯಾಗಿಸಲು ಸಭೆ ನಡೆಸಲಾಯಿತು. ಅದಾದ ಬಳಿಕ, ರಕ್ಷಣಾ ಸಚಿವರು ತಮಗಾಗಿ ಕಾದಿದ್ದ ಮಾಜಿ ಸೈನಿಕರೊಂದಿಗೆ ಸಂವಾದ ನಡೆಸಿ ಅವರ ಅಹವಾಲು ಆಲಿಸಿದರು.

ಜಿಲ್ಲಾಡಳಿತವೇ ಅಂತಿಮಗೊಳಿಸಿದ ಕಾರ್ಯಕ್ರಮದಪ್ರಕಾರವೇ ರಕ್ಷಣಾ ಸಚಿವರು ಸಭೆ ನಡೆಸಿದರೂ, ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಪ್ರತಿಕ್ರಿಯೆ ಮತ್ತು ಅವರ ಟೀಕೆ ದುರದೃಷ್ಟಕರ ಎಂದು ಎಂದು ಪತ್ರಿಕಾ ಹೇಳಿಕೆಯಲ್ಲಿ ವಿಷಾದಿಸಲಾಗಿದೆ. ರಕ್ಷಣಾ ಸಚಿವರ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆ ಕೀಳು ಅಭಿರುಚಿಯಿಂದ ಕೂಡಿದ್ದಾಗಿದ್ದು, ಅವರ ನಡವಳಿಕೆ ಪ್ರತಿಕ್ರಿಯೆಗೂ ಯೋಗ್ಯವಲ್ಲ. ಅಲ್ಲದೆ, ಪತ್ರಿಕಾಗೋಷ್ಠಿಯಲ್ಲಿ ಸಚಿವರು ಪರಿವಾರ ಎಂದು ಉಲ್ಲೇಖೀಸಿದ್ದನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದೂ ಗಮನಕ್ಕೆ ಬಂದಿದೆ. ರಕ್ಷಣಾ ಇಲಾಖೆಯ ನಾಲ್ಕು ವಿಭಾಗಗಳಲ್ಲಿ ನಿವೃತ್ತ ಸೈನಿಕರ ಕಲ್ಯಾಣವೂ ಒಂದಾಗಿದ್ದು, ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರು ಸೇರುತ್ತಾರೆಂಬ ಅರ್ಥದಲ್ಲಿ ಪರಿವಾರ ಎನ್ನುವ ಪದ ಬಳಕೆ ಮಾಡಲಾಗಿದೆ. ಉಳಿದಂತೆ ಬೇರೆಲ್ಲ ಅಭಿಪ್ರಾಯಗಳೂ ಅಪಾರ್ಥದಿಂದ ಕೂಡಿರುವುದಲ್ಲದೆ ಖಂಡನೀಯವಾಗಿವೆ ಎಂದು ಪ್ರಕಟಣೆಯಲ್ಲಿ ಟೀಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next