ಹೊಸದಿಲ್ಲಿ: ಈ ವರ್ಷದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಕಾರ್ಯ ವ್ಯಾಪ್ತಿ (ಎನ್‌ಐಆರ್‌ಎಫ್)ಯಡಿ ವಿವಿಧ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳಿಗೆ ಕೇಂದ್ರ ಸರಕಾರ ನೀಡುವ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ), ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಉತ್ತಮ ಸಾಧನೆ ಮಾಡಿವೆ.
ಬೆಂಗಳೂರಿನ ಐಐಎಸ್‌ಸಿಯು ಸಂಶೋ ಧನೆ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದೆ. ಚೆನ್ನೈ ಐಐಟಿ ದ್ವಿತೀಯ, ಬಾಂಬೆ ಐಐಟಿ ತೃತೀಯ ಸ್ಥಾನ ಗಳಿಸಿವೆ. ದೇಶದ ಅತ್ಯುನ್ನತ 3 ವಿ.ವಿ. ವಿಭಾಗದಲ್ಲೂ ಐಐಎಸ್‌ಸಿಗೆ ಮೊದಲ ಸ್ಥಾನ ಲಭಿಸಿದೆ. ದಿಲ್ಲಿಯ ಜವಾಹರಲಾಲ್ ವಿ.ವಿ., ಉತ್ತರ ಪ್ರದೇಶದ ಬನಾರಸ್ ಹಿಂದೂ ವಿ.ವಿ. ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿವೆ.
ದಂತವೈದ್ಯಕೀಯದಲ್ಲಿ ಮಾಹೆ ಪ್ರಥಮ :
ದಂತ ವೈದ್ಯಕೀಯದಲ್ಲಿ “ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್’ ಮೊದಲ ಸ್ಥಾನಗಳಿಸಿದೆ. ಸಮಗ್ರ ರ್‍ಯಾಂಕಿಂಗ್‌ನಲ್ಲಿ ಮಾಹೆಗೆ 15ನೇ ಸ್ಥಾನ ಲಭ್ಯವಾಗಿದೆ. ಶ್ರೇಷ್ಠ ವಿ.ವಿ.ಗಳ ಪಟ್ಟಿಯಲ್ಲಿ ಮಾಹೆಗೆ 7ನೇ ಸ್ಥಾನ, ಎಂಜಿನಿಯರಿಂಗ್ ವಿಭಾಗ ದಲ್ಲಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ 51ನೇ ಸ್ಥಾನ ಲಭಿಸಿದೆ.
ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್ ಸ್ಟಿಟ್ಯೂಟ್ 32ನೇ ಸ್ಥಾನ, ಫಾರ್ಮಸಿ ಯಲ್ಲಿ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸುಟಿಕಲ್ಸ್ ಸೈನ್ಸಸ್ 8ನೇ ಸ್ಥಾನ, ವೈದ್ಯಕೀಯ ವಿಭಾಗದಲ್ಲಿ ಮಣಿಪಾಲ ಕೆಎಂಸಿ 10ನೇ ಸ್ಥಾನ ಮತ್ತು ಕೆಎಂಸಿ ಮಂಗ ಳೂರು 23ನೇ ಸ್ಥಾನ, ವಾಸ್ತುಶಿಲ್ಪ ವಿಭಾಗ ದಲ್ಲಿ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್, ಉಡುಪಿಗೆ 18ನೇ ಸ್ಥಾನ ಲಭಿಸಿದೆ.