ನವದೆಹಲಿ: 23 ವರ್ಷದ ವೈದ್ಯೆ ವಿದ್ಯಾರ್ಥಿನಿ ಮೇಲೆ 2012ರ ಡಿಸೆಂಬರ್ 16ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳಿಗೆ ಶೀಘ್ರವೇ ಗಲ್ಲುಶಿಕ್ಷೆ ಜಾರಿಗೊಳಿಸಲು ಡೆತ್ ವಾರಂಟ್ ಹೊರಡಿಸಬೇಕೆಂದು ಕೋರಿ ನಿರ್ಭಯಾ ತಾಯಿ ಆಶಾ ದೇವಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪಟಿಯಾಲಾ ಹೌಸ್ ಕೋರ್ಟ್ 2020ರ ಜನವರಿ 7ಕ್ಕೆ ಮುಂದೂಡಿದೆ. ಈ ಸಂದರ್ಭದಲ್ಲಿ ಕುಸಿದು ಬಿದ್ದ ಆಶಾ ದೇವಿ ಕೋರ್ಟ್ ಹಾಲ್ ನೊಳಗೆ ಗಳಗಳನೆ ಅತ್ತ ಘಟನೆ ನಡೆಯಿತು.
ಮಗಳ ಸಾವಿನ ನ್ಯಾಯಕ್ಕಾಗಿ ಕಳೆದ ಏಳು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಆಶಾ ದೇವಿಗೆ ಕೋರ್ಟ್ ವಿಚಾರಣೆಯನ್ನು ಮುಂದೂಡಿದಾಗ ನಮ್ಮ ಹಕ್ಕುಗಳಿಗೇನು ಅರ್ಥವಿದೆ ಎಂದು ಹೇಳುತ್ತಾ ಕುಸಿದು ಬಿದ್ದಿದ್ದರು ಎಂದು ವರದಿ ತಿಳಿಸಿದೆ.
ನಿರ್ಭಯಾ ತಾಯಿ ಆಶಾ ದೇವಿ ಕಣ್ಣೀರು ಹಾಕಿದ ವೇಳೆ ಪಟಿಯಾಲಾ ಹೌಸ್ ಕೋರ್ಟ್ ನ್ಯಾಯಾಧೀಶರು ಸಾಂತ್ವಾನ ಹೇಳಿದರು. ನಮಗೂ ಅನುಕಂಪ ಇದೆ. ಆದರೆ ನಾವು ಕಾನೂನನ್ನು ಅನುಸರಿಸಬೇಕಾಗುತ್ತದೆ. ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಲು ಈಗ ಮತ್ತೆ ಹೊಸ ನೋಟಿಸ್ ಅನ್ನು ಜಾರಿಗೊಳಿಸಬೇಕಾಗಿದೆ ಎಂದರು.
ನಿಮ್ಮ ಬಗ್ಗೆ ನಮಗೆ ಅನುಕಂಪ ಇದೆ. ನಮಗೂ ತಿಳಿದಿದೆ ಆದರೆ ಯಾರೇ ಸಾವನ್ನಪ್ಪಲಿ,ಅವರಿಗೂ ಹೋರಾಡುವ ಕಾನೂನಿನ ಹಕ್ಕಿದೆ. ನೀವು ಹೇಳಿದ್ದನ್ನು ನಾವು ಕೇಳಿಸಿಕೊಳ್ಳುತ್ತೇವೆ. ಆದರೆ ಕಾನೂನು ಚೌಕಟ್ಟು ಮೀರುವಂತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಪರಾಧಿಗಳಿಗೆ ಒಂದು ವಾರ ಕಾಲಾವಕಾಶ:
ನಿರ್ಭಯಾ ಪ್ರಕರಣದ ಆರೋಪಿಗೆ ಪಟಿಯಾಲಾ ಹೌಸ್ ಕೋರ್ಟ್ ಕ್ಷಮಾದಾನ ಅರ್ಜಿ ಸಲ್ಲಿಸಲು ಒಂದು ವಾರಗಳ ಕಾಲಾವಕಾಶ ನಿಗದಿಪಡಿಸಿದೆ.