ಹಾವೇರಿ: ಕಾಲೇಜು ಮುಂದೆ ನಿಂತು ಹುಡುಗಿ ಯರನ್ನು ಚುಡಾಯಿಸುವುದು, ಹಾಸ್ಟೆಲ್ ಬಳಿ ಬಂದು ಯುವತಿಯರಿಗೆ ತೊಂದರೆ ಕೊಡುವುದು, ದಾರಿಯಲ್ಲಿ ಹೋಗುವ ಮಹಿಳೆಯರನ್ನು ರೇಗಿಸುವವರ ಮೇಲೆ “ನಿರ್ಭಯಾ’ ಎಂಬ ವಿಶೇಷ ಮಹಿಳಾ ಪಡೆಯೊಂದು ಕಣ್ಣಿಟ್ಟಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಹಾಗೂ ಮಹಿಳೆಯರಿಗೆ ವಿಶೇಷ ರಕ್ಷಣೆ ಒದಗಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ “ನಿರ್ಭಯಾ’ ಎಂಬ ಮಹಿಳಾ ಪೊಲೀಸ್ ಪಡೆ ರಚಿಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆ ಈ ಪಡೆಗೆ ವಿಶೇಷ ಸಮವಸ್ತ್ರ ಮಾಡಿದ್ದು, ಮಹಿಳೆಯರ ರಕ್ಷಣೆಗಾಗಿಯೇ ಈ ಪಡೆ 24 ಗಂಟೆ ಕಾರ್ಯ ನಿರ್ವಹಿಸಲಿದೆ. ದಾಳಿ ವೇಳೆ ಸಾಮಾನ್ಯ ಉಡುಪಿನಲ್ಲಿಯೇ ಕಾರ್ಯಾಚರಣೆ ನಡೆಸಲಿದೆ. 32 ಮಹಿಳಾ ಪೊಲೀಸರು ಈ ಪಡೆಯಲ್ಲಿರಲಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ಮಹಿಳಾ ಪೊಲೀಸರನ್ನು ಸೇರಿಸಿಕೊಂಡು ಈ ಪಡೆ ರಚಿಸಲಾಗಿದೆ. ಮಹಿಳಾ
ದೌರ್ಜನ್ಯ ತಡೆ ಹಾಗೂ ಮಹಿಳಾ ರಕ್ಷಣೆಗೆ ಬೇಕಾದ ಅಗತ್ಯ ವಿಶೇಷ ತರಬೇತಿ ನೀಡಲಾಗಿದೆ.
ಹಳ್ಳಿಗಳಲ್ಲೂ ಕಾರ್ಯ: “ನಿರ್ಭಯಾ’ ಪಡೆ ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಕಾರ್ಯ ನಿರ್ವಹಿಸಲಿದೆ. ಶಾಲಾ- ಕಾಲೇಜು, ಬಸ್ ನಿಲ್ದಾಣ ಸೇರಿ ಇನ್ನಿತರ ಪ್ರಮುಖ ಸ್ಥಳಗಳ ಮೇಲೆ ಈ ಪಡೆ ಹದ್ದಿನ ಕಣ್ಣಿಡಲಿದೆ. ಆರಂಭದಲ್ಲಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಈ ಪಡೆ ಕಾರ್ಯ ನಿರ್ವಹಿಸಲಿದ್ದು, ನಂತರ ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಗಳ ಸಹಕಾರ ದೊಂದಿಗೆ “ನಿರ್ಭಯಾ’ ಪಡೆ ಕೆಲಸ ಮಾಡಲಿದೆ.
ರಕ್ಷಣಾ ಜಾಗೃತಿ: “ನಿರ್ಭಯಾ’ ಪಡೆ ಮಹಿಳಾ ದೌರ್ಜನ್ಯ ತಡೆ ಹಾಗೂ ಮಹಿಳಾ ರಕ್ಷಣೆ ಜತೆಗೆ ಮಹಿಳೆಯರಿಗೆ ಸ್ವಯಂ ರಕ್ಷಣಾ ಕ್ರಮ, ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ, ಇದಕ್ಕಾಗಿ ಇರುವ ಫೋಕ್ಸೋ ಕಾಯ್ದೆ, ಮಹಿಳಾ ದೌರ್ಜನ್ಯ ಅರಿವು, ಉದ್ಯೋಗಸ್ಥ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿನ ಕಿರುಕುಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಿದೆ. ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣಗಳ ಬಗ್ಗೆ ಸಾರ್ವಜನಿಕ ಮಾಹಿತಿ ಇಲ್ಲವೇ ಸ್ವಯಂ ಮಾಹಿತಿ ಇಲ್ಲವೇ ದೂರು ಆಧರಿಸಿ “ನಿರ್ಭಯಾ
ಪಡೆ ಸ್ಥಳಕ್ಕೆ ಭೇಟಿ ನೀಡಿ ಕಿಡಿಗೇಡಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಿದೆ.
ಇಂದು ಚಾಲನೆ
“ನಿರ್ಭಯಾ’ ವಿಶೇಷ ಮಹಿಳಾ ಪಡೆಯ ಉದ್ಘಾಟನೆ ಸಮಾರಂಭ ನ.9ರಂದು ಸಂಜೆ 4.30ಕ್ಕೆ ಹಾವೇರಿ ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ನಡೆಯಲಿದೆ. ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಬಿ. ದಯಾನಂದ “ನಿರ್ಭಯಾ’ ಪಡೆಗೆ ಚಾಲನೆ ನೀಡುವರು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಹಾಗೂ ಅವರ ರಕ್ಷಣೆಗಾಗಿ ನಿರ್ಭಯಾ ವಿಶೇಷ ಮಹಿಳಾ ಪಡೆ ರಚಿಸಲಾಗಿದ್ದು, ಈ ಪಡೆಗೆ ವಿಶೇಷ ತರಬೇತಿ ನೀಡಲಾಗಿದೆ. ಈ ಪಡೆ ಆರಂಭದಲ್ಲಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಲಿದೆ.
ಜಿಲ್ಲೆಯಲ್ಲಿ ಪೊಕ್ಸೋ ಪ್ರಕರಣಗಳು ಹೆಚ್ಚು ನಡೆಯುತ್ತಿದ್ದು, ಇದರ ಬಗ್ಗೆ ತಿಳಿವಳಿಕೆ ನೀಡಲಿದೆ.
● ಕೆ. ಪರಶುರಾಮ, ಎಸ್ಪಿ, ಹಾವೇರಿ.
● ಎಚ್.ಕೆ. ನಟರಾಜ