Advertisement

ನಿರ್ಭಯಾ ಹಂತಕರಿಗೆ ಗಲ್ಲು: ಕೇಂದ್ರದ ಮನವಿ ಅರ್ಜಿ ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

09:54 AM Feb 03, 2020 | Hari Prasad |

ನವದೆಹಲಿ: ನಿರ್ಭಯಾ ಹಂತಕರಿಗೆ ಫೆಬ್ರವರಿ 01ರಂದು ವಿಧಿಸಬೇಕಾಗಿದ್ದ ಗಲ್ಲು ಶಿಕ್ಷೆಗೆ ಶುಕ್ರವಾರದಂದು ತಡೆ ನೀಡಿದ್ದ ಪಟಿಯಾಲ ಹೌಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಗೃಹ ಸಚಿವಾಲಯ ದೆಹಲಿ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ಮುಕ್ತಾಯಗೊಂಡಿದ್ದು ನ್ಯಾಯಾಧೀಶರು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ.

Advertisement

ಸುರೇಶ್ ಕುಮಾರ್ ಕೈಟ್ ಅವರಿದ್ದ ಏಕಸದಸ್ಯ ಪೀಠವು ಆದಿತ್ಯವಾರದಂದು ಕೇಂದ್ರದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಎರಡೂ ಬದಿಯ ವಾದ ವಿವಾದಗಳು ಮುಕ್ತಾಯಗೊಂಡಬಳಿಕವಷ್ಟೇ ತನ್ನ ತೀರ್ಪನ್ನು ಪ್ರಕಟಿಸುವುದಾಗಿ ತೀರ್ಪು ಕಾಯ್ದಿರಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಪರ ವಾದಿಸಿದ ಹಿರಿಯ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಈ ನಾಲ್ವರು ಅಪರಾಧಿಗಳು ವಿಚಾರಣಾ ನ್ಯಾಯಾಲಯವು ತಮಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಉದ್ದೇಶಪೂರ್ವಕವಾಗಿ ಮುಂದೆ ಹಾಕುತ್ತಿದ್ದಾರೆ ಮತ್ತು ಈ ಮೂಲಕ ದೇಶದ ಕಾನೂನು ರೀತ್ಯಾ ತಮ್ಮ ಅಪರಾಧಕ್ಕೆ ಸಿಕ್ಕಿದ ಶಿಕ್ಷೆಯನ್ನು ಪ್ರಯತ್ನಪೂರ್ವಕ, ಲೆಕ್ಕಾಚಾರದಂತೆ, ಯೋಜನೆಗೊಳಿಸಿ ಶಿಕ್ಷೆಯನ್ನು ಮುಂದಕ್ಕೆ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ’ ಎಂದು ನ್ಯಾಯಪೀಠದ ಮುಂದೆ ವಾದಿಸಿದರು.

‘ಈ ಪ್ರಕರಣದ ಅಪರಾಧಿಗಳು ಗ್ರಾಮೀಣ ಪ್ರದೇಶದ ಹಿನ್ನಲೆಯಿಂದ ಬಂದವರು, ಮಾತ್ರವಲ್ಲದೇ ದಲಿತ ಕುಟುಂಬಕ್ಕೆ ಸೇರಿದವರು. ಅವರನ್ನು ಈ ಪ್ರಕರಣದಲ್ಲಿ ಸಿಲುಕುವಂತೆ ಮಾಡಲಾಗಿದೆ. ಮುಖೇಶ್ ಮತ್ತು ರಾಮ್ ಸಿಂಗ್ (ಈ ಪ್ರಕರಣದ ವಿಚಾರಣಾ ಸಂದರ್ಭದಲ್ಲಿ ಜೈಲಿನಲ್ಲಿ ನೇಣಿಗೆ ಶರಣಾದವ) ಅವರು ದಲಿತರು ಮತ್ತು ಸಹೋದರರಾಗಿರುವ ಇವರು ರಾಜಸ್ಥಾನದ ಗ್ರಾಮೀಣ ಭಾಗದಿಂದ ಬಂದವರು. ಇದು ಅವರ ತಪ್ಪಲ್ಲ. ಕಾನೂನಿನ ಸಂದಿಗ್ಧಗಳಿಗೆ ಅವರನ್ನು ಬಲಿಪಶುಗಳನ್ನಾಗಿ ಮಾಡುವುದು ಸರಿಯಲ್ಲ’ ಎಂದು ಎ.ಪಿ.ಸಿಂಗ್ ತಮ್ಮ ವಾದವನ್ನು ಮಂಡಿಸಿದರು.

ಇನ್ನು ಮುಖೇಶ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ರೆಬೆಕ್ಕಾ ಜಾನ್ ಅವರು ತಮ್ಮ ವಾದ ಮಂಡಿಸಿ, ‘ಕೇಂದ್ರವು ಪಟಿಯಾಲ ಹೌಸ್ ನ್ಯಾಯಾಲಯ ನೀಡಿದ ಆದೇಶವನ್ನು ಕಡೆಗಣಿಸುತ್ತಿದೆ ಮತ್ತು ವಿಚಾರಣಾ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟಿನಲ್ಲೇ ಪ್ರಶ್ನಿಸಬೇಕೆಂದು ದೆಹಲಿ ಹೈಕೋರ್ಟ್ ಈ ಹಿಂದೆ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ’ ಎಂದು ವಾದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next