ಬೆಂಗಳೂರು: ಸಮೂಹ ಸಾರಿಗೆಯಲ್ಲಿ ಮಹಿಯರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2016-17ನೇ ಸಾಲಿನಲ್ಲಿ “ನಿರ್ಭಯ’ ಯೋಜನೆಯಡಿ ಮಹಾನಗರ ಸಾರಿಗೆ ಸಂಸ್ಥೆಗಳಿಗೆ ನೀಡಿದ್ದ 33.64 ಕೋಟಿ ರೂ. ಅನುದಾನದಲ್ಲಿ ಬಿಎಂಟಿಸಿ ಖರ್ಚು ಮಾಡಿರುವುದು ಕೇವಲ 2.37 ಕೋಟಿ ರೂ.!
ಸಾರ್ವಜನಿಕರು ಸಮೂಹ ಸಾರಿಗೆ ಬಳಸುವ ಮೂಲಕ ಸಂಚಾರ ದಟ್ಟಣೆ, ಮಾಲಿನ್ಯ ತೆಡಯಲು ಸಹಕರಿಸಬೇಕು ಎಂದು ಮನವಿ ಮಾಡುವ ಕೇಂದ್ರ ಸರ್ಕಾರ, ಬಸ್‌ಗಳಲ್ಲಿ ಪ್ರಯಾಣಿಸುವಾಗ ಶೋಷಣೆ ಎದುರುಸುವ ಮಹಿಳೆಯರ ಸುರಕ್ಷತೆಗೆಂದೇ ನಿರ್ಭಯ ಯೋಜನೆ ಅಡಿ ಮಹಾನಗರ ಸಾರಿಗೆ ಸಂಸ್ಥೆಗಳಿಗೆ ಹೆಚ್ಚುವರಿ ಅನುದಾನ ನೀಡಿದೆ.
ಇದರ ಭಾಗವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 2016-17ನೇ ಸಾಲಿನಲ್ಲಿ 33.64 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ ಸಂಸ್ಥೆ ಕೇವಲ 2.37 ಕೋಟಿ ರೂ. ಖರ್ಚು ಮಾಡಿದೆ ಎಂಬುದನ್ನು ಆರ್‌ಟಿಐ ಕಾರ್ಯಕರ್ತ ಯೋಗೇಶ್ ಗೌಡ ದಾಖಲೆಗಳ ಮೂಲಕ ಬಹಿರಂಗಪಡಿಸಿದ್ದಾರೆ. ಖರ್ಚಾಗದೇ ಉಳಿದಿರುವ ಅನುದಾನ ಕೇಂದ್ರ ಸರ್ಕಾರಕ್ಕೆ ವಾಪಸಾಗುವ ಸಾಧ್ಯತೆಯಿದೆ.
ಮಹಿಳಾ ಪ್ರಯಾಣಿಕರ ಸುರಕ್ಷತೆ ಖಾತರಿಪಡಿಸುವ ನಿಟ್ಟಿನಲ್ಲಿ ಬಸ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಬಿಎಂಟಿಸಿ ಡಿಪೋಗಳಲ್ಲಿ ಮಹಿಳಾ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ, ಮಹಿಳೆಯರು ಹೆಚ್ಚು ಕಾರ್ಯ ನಿರ್ವಹಿಸುವ ಗಾರ್ಮೆಂಟ್ಸ್‌ಗಳಿಗೆ ಪ್ರತ್ಯೇಕ ಬಸ್ ಸೇವೆ, ಎಲ್ಲಾ ಬಸ್‌ಗಳಲ್ಲಿ ಪಿಂಕ್ ಅಲಾರಂ ಅಳವಡಿಕೆ, ಮಹಿಳೆಯರಿಗೆ ಬಸ್ ಚಾಲನೆ ತರಬೇತಿ ನೀಡುವುದೂ ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳುವ ಎಲ್ಲಾ ಅವಕಾಶಗಳಿದ್ದರೂ ಬಿಎಂಟಿಸಿ ಅಧಿಕಾರಿಗಳು ಆಸಕ್ತಿ ವಹಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ನಿರ್ಭಯ ಅನುದಾನದಲ್ಲಿ ಈವರೆಗೆ 27 ನಿರ್ಭಯ ಜೀಪು ಮತ್ತು 3 ತರಬೇತಿ ವಾಹನಗಳನ್ನು ಖರೀದಿ ಮಾಡಿರುವ ಸಂಸ್ಥೆ, ಬಾಕಿ ಹಣ ಬಳಸುವ ಗೋಜಿಗೆ ಹೋಗಿಲ್ಲ. ಬಿಎಂಟಿಸಿಯ 145 ಬಸ್‌ಗಳು ರಾತ್ರಿ ಪಾಳಿಯಲ್ಲಿ ಸಂಚರಿಸುತ್ತವೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಸ್ತೆಯಲ್ಲಿರುವ ಈ ಬಸ್‌ಗಳಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವುದು ರಾತ್ರಿ ಪ್ರಯಾಣಿಸುವ ಮಹಿಳೆಯರಲ್ಲಿ ಅಸುರಕ್ಷತೆಯ ಮನೋಭಾವ ಮೂಡಿಸುತ್ತದೆ.
ಈ ಹಿಂದೆ ನಿರ್ಭಯ ಅನುದಾನ ಬಳಕೆಗೆ ಸೂಕ್ತ ಕಾರ್ಯಸೂಚಿ ಸಿದ್ಧಪಡಿಸಿರಲಿಲ್ಲ. ಈಗ ಬಸ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಅಂಶ ಸೇರಿಸಲಾಗಿದೆ. ಹೊಸ ಕಾರ್ಯಸೂಚಿ ಅನ್ವಯ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆದಿದೆ.
-ಸಿ.ಶಿಖಾ, ಬಿಎಂಟಿಸಿ ಎಂ.ಡಿ
ಅನುದಾನ ಪಡೆದು ಎರಡು ವರ್ಷ ಕಳೆದರೂ ಹಣ ವಿನಿಯೋಗ ಮಾಡಿಲ್ಲ. ಮಹಿಳಾ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಗೆ ಹಲವಾರು ಕ್ರಮ ಕೈಗೊಳ್ಳುವುದು ಬಾಕಿ ಇದ್ದು, ಕೂಡಲೆ ಅನುದಾನ ಬಳಸಿ ಸೌಲಭ್ಯ ಕಲ್ಪಿಸಬೇಕು.
-ಯೋಗೇಶ್ ಗೌಡ, ಆರ್‌ಟಿಐ ಕಾರ್ಯಕರ್ತ
* ಲೋಕೇಶ್ ರಾಮ್