Advertisement

ನಿರ್ಭಯಾ ಅತ್ಯಾಚಾರ ಪ್ರಕರಣದ ಅಂದಿನ ಬಾಲಾಪರಾಧಿ ಈಗ ಎಲ್ಲಿದ್ದಾನೆ…ಏನು ಮಾಡುತ್ತಿದ್ದಾನೆ

10:04 AM Dec 20, 2019 | Nagendra Trasi |

ನವದೆಹಲಿ: 2012ರ ಡಿಸೆಂಬರ್ 16ರಂದು ರಾಷ್ಟ್ರ ರಾಜಧಾನಿಯಲ್ಲಿ 23 ವರ್ಷದ ವೈದ್ಯ ವಿದ್ಯಾರ್ಥಿನಿ ಮೇಲೆ ಆರು ಮಂದಿ ಕಾಮುಕ ಪಿಶಾಚಿಗಳು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ನಂತರ ಭೀಭತ್ಸವಾಗಿ ಆಕೆಗೆ ಚಿತ್ರಹಿಂಸೆ ನೀಡಿದ್ದರು. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಸಂತ್ರಸ್ತೆ ಕೊನೆಯುಸಿರೆಳೆದಿದ್ದಳು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದರು.

Advertisement

ನಿರ್ಭಯಾ ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದರು. ಇದರಲ್ಲಿ ಅಕ್ಷಯ್ ಠಾಕೂರ್, ಪವನ್ ಗುಪ್ತಾ, ವಿನಯ್ ಶರ್ಮಾ, ಮುಕೇಶ್ ಸಿಂಗ್, ರಾಮ್ ಸಿಂಗ್  ಗಲ್ಲುಶಿಕ್ಷೆಗೆ ಗುರಿಯಾಗಿದ್ದರು. ಇದರಲ್ಲಿ ರಾಮ್ ಸಿಂಗ್ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಆರನೇ ಆರೋಪಿ ಬಾಲಾಪರಾಧಿ ಮಾತ್ರ ಕನಿಷ್ಠ ಶಿಕ್ಷೆ ಅನುಭವಿಸಿ ಹೊರನಡೆದಿದ್ದಾನೆ..

ಘಟನೆ ನಡೆದ ನಂತರ ಬಾಲಾಪರಾಧಿ ವಿಷಯ ದೇಶಾದ್ಯಂತ ಅತ್ಯಂತ ಚರ್ಚೆಯ ವಿಷಯವಾಗಿತ್ತು. ಯಾಕೆಂದರೆ ಅತ್ಯಂತ ಹೀನ ಕೃತ್ಯದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿಗೂ ಮರಣದಂಡನೆ ಶಿಕ್ಷೆ ವಿಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತು. ಆದರೆ ಘಟನೆ ನಡೆದ ವೇಳೆ ಆತನಿಗೆ 17 ವರ್ಷ 2 ತಿಂಗಳಾಗಿತ್ತು ಎಂಬ ಅಂಶ ದೃಢಪಟ್ಟ ಹಿನ್ನೆಲೆಯಲ್ಲಿ ಬಾಲಾಪರಾಧಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಬಾಲಪರಾಧಿ ಕಾಯ್ದೆ ಪ್ರಕಾರ ಗರಿಷ್ಠ 3 ವರ್ಷ ಶಿಕ್ಷೆಯನ್ನು ವಿಧಿಸಿತ್ತು.

2015ರ ನವೆಂಬರ್ 15ರಂದು ಬಾಲಪರಾಧಿ ಬಿಡುಗಡೆಯಾಗುವ ಒಂದು ತಿಂಗಳು ಮೊದಲು ಈತನ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ನಿರ್ಭಯಾ ಕುಟುಂಬ ಒತ್ತಾಯಿಸಿತ್ತು. ಸಾರ್ವಜನಿಕರ ಆಕ್ರೋಶ ಹೊರಹೊಮ್ಮಿರುವ ನಡುವೆಯೇ ಕೊನೆಗೂ ಆತನ ಗುರುತನ್ನು ಬಹಿರಂಗಗೊಳಿಸದೆ ಬಾಲಾಪರಾಧಿಯನ್ನು ಬಿಡಲಾಗಿತ್ತು.

ರಹಸ್ಯ ಸ್ಥಳಕ್ಕೆ ಕರೆದೊಯ್ದು ಬಿಡುಗಡೆ…ಈಗ ಬಾಲಾಪರಾಧಿ ಎಲ್ಲಿದ್ದಾನೆ ಗೊತ್ತಾ?

Advertisement

ನಿರ್ಭಯಾ ಪ್ರಕರಣದಲ್ಲಿ ಬಾಲಾಪರಾಧಿಯಾಗಿದ್ದ ಈತನ ಬಿಡುಗಡೆಯ ಮುನ್ನಾ ದಿನ ಭದ್ರತೆಯ ದೃಷ್ಟಿಯಲ್ಲಿ ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದರು. ಬಿಡುಗಡೆ ನಂತರ ಬಾಲಾಪರಾಧಿಯನ್ನು ಎನ್ ಜಿಒ ತನ್ನ ಸುಪರ್ದಿಗೆ ಪಡೆದಿತ್ತು. ಬಾಲಾಪರಾಧಿಯಾಗಿ ದಿಲ್ಲಿಯ ಸುಧಾರಣಾ (correction home) ಕೇಂದ್ರದಲ್ಲಿದ್ದಾಗ ಅಡುಗೆ ಮಾಡುವುದನ್ನು ಕಲಿತಿದ್ದನಂತೆ. ಈತನಿಗೆ ಸುಧಾರಣಾ ಗೃಹದಲ್ಲಿಯೇ ಹೊಸ ಹೆಸರನ್ನು ಇಡಲಾಗಿತ್ತು ಎಂದು ವರದಿ ತಿಳಿಸಿದೆ.

ನಾವು ಆತನನ್ನು ರಾಷ್ಟ್ರ ರಾಜಧಾನಿಗಿಂತ ತುಂಬಾ ದೂರಕ್ಕೆ ಆತನನ್ನು ಕಳುಹಿಸಿದ್ದೇವೆ. ಜನರಿಗೆ ಆತನನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಇದೀಗ ಆತ ಹೊಸ ಜೀವನ ಆರಂಭಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ ದಕ್ಷಿಣ ಭಾರತದಲ್ಲಿ ಅಡುಗೆ ಕೆಲಸವನ್ನು ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ಈತ ಕೆಲಸ ಮಾಡುತ್ತಿದ್ದ ಮಾಲೀಕನಿಗೂ ಈತನ ನಿಜವಾದ ಹೆಸರು ಗೊತ್ತಿಲ್ಲ. ಅಷ್ಟೇ ಅಲ್ಲ ದಿಲ್ಲಿಯ ಗ್ಯಾಂಗ್ ರೇಪ್ ನ ಆರೋಪಿ ಎಂಬ ಮಾಹಿತಿಯೂ ಆತನಿಗೆ ಗೊತ್ತಿಲ್ಲವಂತೆ. ಯಾರಿಗೂ ಈತನ ಬಗ್ಗೆ ತಿಳಿಯದಿರಲಿ ಎಂದು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಆತನನ್ನು ಸ್ಥಳಾಂತರಿಸುತ್ತಲೇ ಇರುತ್ತೇವೆ ಎಂದು ಹೆಸರು ಹೇಳಲು ಇಚ್ಚಿಸದ ಎನ್ ಜಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರಪ್ರದೇಶದ ಹಳ್ಳಿಯವನಾಗಿದ್ದ ಈತ ಚಿಕ್ಕ ಹುಡುಗನಾಗಿದ್ದಾಗಲೇ ಮನೆ ಬಿಟ್ಟು ದಿಲ್ಲಿಗೆ ಓಡಿ ಬಂದಿದ್ದು, ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next