ನವದೆಹಲಿ: ತನಗೆ ವಿಧಿಸಲಾದ ಗಲ್ಲುಶಿಕ್ಷೆಯನ್ನು ಮರು ಪರಿಶೀಲಿಸುವಂತೆ ಕೋರಿ ನಿರ್ಭಯಾ ಪ್ರಕರಣದ ದೋಷಿ ಅಕ್ಷಯ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ವಾದ-ಪ್ರತಿವಾದ ಆಲಿಸಿ ನಿರ್ಭಯಾ ಅತ್ಯಾಚಾರಿ ಆರೋಪಿಗಳಿಗೆ ಗಲ್ಲುಶಿಕ್ಷೆ ಖಾಯಂಗೊಳಿಸಿ ತೀರ್ಪು ಪ್ರಕಟಿಸಿದೆ.
ಇದನ್ನೂ ಓದಿ: ನಿರ್ಭಯಾ ಕೇಸ್; ರಾಜಕೀಯ ಒತ್ತಡ, ಲಂಚ ಕೊಟ್ಟು ಸಾಕ್ಷಿ ಖರೀದಿ; ಸುಪ್ರೀಂನಲ್ಲಿ ವಿಚಾರಣೆ
2012ರ ಡಿಸೆಂಬರ್ 16ರಂದು ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ನಂತರ ಚಿತ್ರಹಿಂಸೆ ನೀಡಿ ಹತ್ಯೆಗೈದ ಪ್ರಕರಣದಲ್ಲಿನ ನಾಲ್ವರು ಆರೋಪಿಗಳಲ್ಲಿ ಒಬ್ಬನಾಗಿರುವ ಆರೋಪಿ ಅಕ್ಷಯ್ ಗಲ್ಲುಶಿಕ್ಷೆಯನ್ನು ಮರುಪರಿಶೀಲಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದ.
ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ತನಗೆ ವಿಧಿಸಲಾದ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಕೋರಿ ಪ್ರಕರಣದ ದೋಷಿ ಅಕ್ಷಯ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವೇಳೆ ಅರೋಪಿ ಪರ ವಕೀಲ ಎಪಿ ಸಿಂಗ್, ನಿರ್ಭಯಾ ಪ್ರಕರಣದಲ್ಲಿ ಹಣ ಕೊಟ್ಟು ಸಾಕ್ಷಿಯನ್ನು ಖರೀದಿಸಿ ಪುರಾವೆ ಒದಗಿಸಿದ್ದಾರೆ. ಎಲ್ಲದಕ್ಕೂ ಮರಣದಂಡನೆಯೇ ಮಾರ್ಗವಲ್ಲ ಎಂದು ವಾದ ಮಂಡಿಸಿದ್ದರು.
ಸುಪ್ರೀಂಕೋರ್ಟ್ ನ ಜಸ್ಟೀಸ್ ಎಸ್. ಎ.ಬೋಪಣ್ಣ, ಜಸ್ಟೀಸ್ ಆರ್.ಭಾನುಮತಿ ಹಾಗೂ ಜಸ್ಟೀಸ್ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ವಾದ, ಪ್ರತಿವಾದ ಆಲಿಸಿ ಅಂತಿಮ ತೀರ್ಪು ಪ್ರಕಟಿಸಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿ, ಈ ಪ್ರಕರಣದಲ್ಲಿ ಮರುಪರಿಶೀಲನೆಯ ಪ್ರಶ್ನೆಯೇ ಬರುವುದಿಲ್ಲ. ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ವಿಚಾರಣಾಧೀನ ಕೋರ್ಟ್ ನಾಲ್ವರು ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಿತ್ತು. ಈಗಾಗಲೇ ಮೂವರು ಆರೋಪಿಗಳ ಮರುಪರಿಶೀಲನಾ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ ಎಂದರು.