ನವದೆಹಲಿ: ಕಾನೂನಿನ ಮಾರ್ಗಗಳನ್ನು ಬಳಸಿಕೊಂಡು ಮೂರು ಬಾರಿ ನೇಣಿಗೇರುವುದರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮತ್ತೊಮ್ಮೆ ಡೆತ್ ವಾರಂಟ್ ಹೊರಡಿಸಲಾಗಿದೆ.
ನಿರ್ಭಯಾ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರೂ ಅಪರಾಧಿಗಳ ಎಲ್ಲಾ ಕಾನೂನು ಮಾರ್ಗಗಳೂ ಇದೀಗ ಮುಚ್ಚಿದಂತಾಗಿದ್ದು ವಿನಯ್ ಶರ್ಮಾ, ಪವನ್ ಗುಪ್ತಾ, ಮುಖೇಶ್ ಸಿಂಗ್ ಮತ್ತು ಅಕ್ಷಯ್ ಸಿಂಗ್ ಅವರನ್ನು ಮಾರ್ಚ್ 20ರ ಶುಕ್ರವಾರದಂದು ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಇಂದು ನೀಡಿರುವ ಹೊಸ ಡೆತ್ ವಾರಂಟ್ ನಲ್ಲಿ ತಿಹಾರ್ ಜೈಲಿನ ಅಧಿಕಾರಿಗಳಿಗೆ ಆದೇಶಿಸಿದೆ.
ಈ ಹಿಂದೆ ಮಾರ್ಚ್ 3ರಂದು ಈ ಪಾತಕಿಗಳು ನೇಣಿಗೇರಲು ದಿನಾಂಕ ನಿಗಡಿಯಾಗಿತ್ತು ಆದರೆ ಅಪರಾಧಿಗಳಲ್ಲಿ ಒಬ್ಬನಾಗಿರುವ ಪವನ್ ಗುಪ್ತ ರಾಷ್ಟ್ರಪತಿಗಳ ಬಳಿ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಿದ್ದ ಕಾರಣ ಈ ನಾಲ್ವರೂ ನೇಣು ಶಿಕ್ಷೆಯಿಂದ ಬಚಾವಾಗಿದ್ದರು.
ಬಳಿಕ ಪವನ್ ಗುಪ್ತಾನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ನಾಲ್ವರು ಪಾತಕಿಗಳಿಗೆ ಹೊಸ ಡೆತ್ ವಾರಂಟ್ ಹೊರಡಿಸುವ ಸಂಬಂಧ ದೆಹಲಿ ನ್ಯಾಯಾಲಯದಲ್ಲಿ ಇಂದು ನಡೆದ ವಿಚಾರಣೆಯ ವೇಳೆ ಅಪರಾಧಿಗಳ ಎಲ್ಲಾ ನ್ಯಾಯ ಪರಿಹಾರ ಮಾರ್ಗಗಳು ಮುಚ್ಚಿರುವುದರಿಂದ ಅವರನ್ನು ನೇಣಿಗೇರಿಸಲು ಹೊಸ ಡೆತ್ ವಾರಂಟ್ ಹೊರಡಿಸಬೇಕೆಂದು ದೆಹಲಿ ಸರಕಾರದ ಪರ ವಕೀಲರು ನ್ಯಾಯಾಲವನ್ನು ಕೋರಿದರು.
ಆದರೆ ಅಪರಾಧಿಗಳ ಪರ ವಕೀಲ ಎ ಪಿ ಸಿಂಗ್ ವಾದ ಮಂಡಿಸಿ ಇಂದು ಡೆತ್ ವಾರಂಟ್ ಹೊರಡಿಸಬಾರದೆಂದು ನ್ಯಾಯಾಲಕ್ಕೆ ಮನವಿ ಮಾಡಿಕೊಂಡರು.
ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಪವನ್ ಗುಪ್ತಾ ಸುಪ್ರೀಂ ಕೋರ್ಟಿಗೆ ಹೋಗಲು ಬಯಸುತ್ತಾನೆಯೇ ಎಂದು ಆತನಲ್ಲಿ ವಿಚಾರಿಸಲು ಕಾಲಾವಕಾಶ ಬೇಕು ಎಂಬ ಅಪರಾಧಿಗಳ ಪರ ವಕೀಲರ ವಾದವನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ.